Oil Price: ಉಕ್ರೇನ್ ನೆಪದಲ್ಲಿ ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತ ರಷ್ಯಾ: ಭಾರತಕ್ಕೆ ತೈಲ ಬೆಲೆ ಏರಿಕೆಯ ಜೊತೆಗೆ ಆರ್ಥಿಕ ಕುಸಿತದ ಭೀತಿ

Impact of Russia Ukrain Conflict: ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದಿಂದ ಹೈರಾಣಾಗಿರುವ ಭಾರತೀಯರ ಕಿಸೆಗೆ ತೈಲೋತ್ಪನ್ನಗಳ ಬೆಲೆ ಮತ್ತಷ್ಟು ಹೊರೆಯಾಗುವ ಅಪಾಯ ನಿಚ್ಚಳವಾಗಿದೆ.

Oil Price: ಉಕ್ರೇನ್ ನೆಪದಲ್ಲಿ ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತ ರಷ್ಯಾ: ಭಾರತಕ್ಕೆ ತೈಲ ಬೆಲೆ ಏರಿಕೆಯ ಜೊತೆಗೆ ಆರ್ಥಿಕ ಕುಸಿತದ ಭೀತಿ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 13, 2022 | 7:06 PM

ಉಕ್ರೇನ್ ಗಡಿಯಲ್ಲಿ ರಷ್ಯಾ (Ukraine – Russia) ಬೃಹತ್ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡಿದೆ. ಯುದ್ಧ ಸನ್ನಾಹವನ್ನು ಉಕ್ರೇನ್ ತೀವ್ರಗೊಳಿಸಿದೆಯಾದರೂ ರಷ್ಯಾದಂಥ ಬೃಹತ್ ಸೇನಾ ಶಕ್ತಿಯನ್ನು ಏಕಾಂಗಿಯಾಗಿ ಎದುರಿಸುವ ಸಾಮರ್ಥ್ಯವನ್ನು ಇನ್ನೂ ಉಕ್ರೇನ್ ಹೊಂದಿಲ್ಲ. ಅಮೆರಿಕ ಸೇರಿದಂತೆ ಬಹುತೇಕ ನ್ಯಾಟೊ (NATO) ಸದಸ್ಯ ದೇಶಗಳು ಉಕ್ರೇನ್​ ಸೇನೆಗೆ ಬೆಂಬಲ ಘೋಷಿಸಿವೆ. ಟ್ಯಾಂಕ್ ನಿರೋಧಕ ಕ್ಷಿಪಣಿಗಳೂ ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿವೆ. ರಷ್ಯಾ-ಉಕ್ರೇನ್ ಸಂಘರ್ಷವೇನಾದರೂ ಪೂರ್ಣಪ್ರಮಾಣದ ಯುದ್ಧವೇ ಆಗುವ ಮಟ್ಟಕ್ಕೆ ಬೆಳೆದರೆ ಭಾರತವು ಆರ್ಥಿಕ, ರಾಜತಾಂತ್ರಿಕ ಮತ್ತು ರಕ್ಷಣಾ ದೃಷ್ಟಿಯಿಂದ ಹಲವು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ತೈಲ ಬೆಲೆ, ಕೃಷಿ ಕ್ಷೇತ್ರದ ಮೇಲೆಯೂ ಹಲವು ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ.

ಉಕ್ರೇನ್-ರಷ್ಯಾ ಸಂಘರ್ಷದ ವಿಚಾರದಲ್ಲಿ ಭಾರತ ಬಹುಕಾಲ ಮೌನವಾಗಿರುವುದು ಅಥವಾ ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನೇ ಒಂದು ಕಾರ್ಯತಂತ್ರವಾಗಿ ಅನುಸರಿಸಿತ್ತು. ಆದರೆ ಪರಿಸ್ಥಿತಿ ವಿಷಮಿಸಿದ ನಂತರ ಪ್ರತಿಕ್ರಿಯಿಸುವುದು ಅನಿವಾರ್ಯವಾಯಿತು. ಭಾರತದ ಗಡಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಈ ಸಂಘರ್ಷವು ಇದೀಗ ಭಾರತೀಯರ ಬದುಕಿನ ಮೇಲೆ ಹಲವು ರೀತಿಯಲ್ಲಿ ಪರಿಣಾಮಗಳನ್ನು ಉಂಟು ಮಾಡುವ ಅಪಾಯ ಎದ್ದು ಕಾಣಿಸುತ್ತಿದೆ. ಭಾರತದ ಮೇಲೆ ಉಂಟಾಗಬಹುದಾದ ಸಂಭಾವ್ಯ ಪರಿಣಾಮಗಳಿವು.

1) ತೈಲಬೆಲೆ ಮತ್ತು ರಸಗೊಬ್ಬರ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಸರಬರಾಜು ದೇಶ ರಷ್ಯಾ. ಉಕ್ರೇನ್ ಜೊತೆಗಿನ ಸಂಘರ್ಷದ ನಂತರ ರಷ್ಯಾ ಮೇಲೆ ಅಮೆರಿಕ ಬಿಗಿಯಾದ ಅರ್ಥಿಕ ದಿಗ್ಬಂಧನ ಹೇರಿದರೆ ಅಥವಾ ರಷ್ಯಾ ಉತ್ಪಾದನೆ ಕಡಿಮೆ ಮಾಡಿದರೆ ಭಾರತದ ಮೇಲೆ ಅದರ ಪರಿಣಾಮ ಎದ್ದು ಕಾಣುತ್ತದೆ. ಭಾರತವು ತನ್ನ ರಸಗೊಬ್ಬರ ತಯಾರಿಕಾ ಕಾರ್ಖಾನೆಗಳಲ್ಲಿ ಶಕ್ತಿಯ ಮೂಲವಾಗಿ ದ್ರವೀಕೃತ ನೈಸರ್ಗಿಕ ಅನಿಲ (Liquefied Natural Gas) ಬಳಸುತ್ತಿದೆ. ರಷ್ಯಾದಲ್ಲಿ ನೈಸರ್ಗಿಕ ಉತ್ಪಾದನೆಯಲ್ಲಿ ಏನೇ ಹೆಚ್ಚುಕಡಿಮೆಯಾದರೂ ಅದು ವಿಶ್ವ ನೈಸರ್ಗಿಕ ಅನಿಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಸಹಜವಾಗಿಯೇ ಭಾರತದಲ್ಲಿಯೂ LNG ಬೆಲೆ ಏರುತ್ತದೆ.

ಕೃಷಿಗೆ ಮುಖ್ಯವಾಗಿ ಬಳಕೆಯಾಗುವ ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯಾದರೆ ಸಹಜವಾಗಿಯೇ ಆಹಾರ ಉತ್ಪನ್ನಗಳ ಬೆಲೆಗಳೂ ಏರಿಕೆ ಕಾಣುತ್ತವೆ. ಇದನ್ನು ತಹಬದಿಗೆ ತರಬೇಕೆಂದರೆ ಭಾರತ ಸರ್ಕಾರವು ಒಂದೋ ಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು ಅಥವಾ ಬೆಂಬಲ ಬೆಲೆಗೆ ತೆರುವ ಮೊತ್ತ ಹೆಚ್ಚಿಸಬೇಕಾದ ಅನಿವಾರ್ಯತೆ ಸಿಲುಕುತ್ತದೆ. ಕೊವಿಡ್ ಕಾರಣದಿಂದ ಹೈರಾಣಾಗಿರುವ ಭಾರತದ ಆರ್ಥಿಕತೆಗೆ ಸಹಜವಾಗಿಯೇ ಇದು ಅಪಾಯಕಾರಿಯಾದ ಬೆಳವಣಿಗೆ ಎನಿಸಿದೆ.

2) ತೈಲ ಬೆಲೆ ಏರಿಕೆ ಅರಬ್ ರಾಷ್ಟ್ರಗಳನ್ನು ಹೊರತುಪಡಿಸಿದರೆ ರಷ್ಯಾ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ದೇಶ. ವಿಶ್ವದ 2ನೇ ಅತಿದೊಡ್ಡ ಪೆಟ್ರೋಲಿಯಂ ಮತ್ತು ನೈಸರ್ಗಿಕ ಉತ್ಪಾದಕ ದೇಶ ಎನಿಸಿರುವ ರಷ್ಯಾದ ಸರಬರಾಜು ಆಧರಿಸಿ ಬಲಾಢ್ಯ ಆರ್ಥಿಕತೆಗಳಾದ ಜರ್ಮನಿ ಮತ್ತು ಹಲವು ಐರೋಪ್ಯ ದೇಶಗಳು ನಿತ್ಯದ ಬದುಕು ಸಾಗಿಸುತ್ತಿವೆ. ಯಾವುದೇ ಕಾರಣದಿಂದ ರಷ್ಯಾ ಈ ನ್ಯಾಟೊ ಸದಸ್ಯ ದೇಶಗಳಿಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಮಾರಾಟ ಮಾಡುವುದಿಲ್ಲ ಎಂದು ಘೋಷಿಸಿದರೆ ಅಥವಾ ಅಮೆರಿಕ-ಬ್ರಿಟನ್​ ನಿರ್ಬಂಧ ಹೇರಿದರೆ ಸಹಜವಾಗಿಯೇ ಒಪೆಕ್ ದೇಶಗಳ ಉತ್ಪಾದನೆಯನ್ನೇ ಖರೀದಿಸಬೇಕಾದ ಅನಿವಾರ್ಯತೆಗೆ ಎಲ್ಲ ದೇಶಗಳೂ ಸಿಲುಕುತ್ತವೆ. ಆಗ ತೈಲ ಬೆಲೆಗಳು ವಿಪರೀತ ಹೆಚ್ಚಾಗಬಹುದಾದ ಅಪಾಯ ಇದೆ.

ರಷ್ಯಾ-ಉಕ್ರೇನ್ ಸಂಘರ್ಷ ತಿಳಿಯಾಗದಿದ್ದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್​ಗೆ 150 ಡಾಲರ್ (11,302 ರೂಪಾಯಿ) ಮುಟ್ಟಬಹುದು ಎಂದು ಜೆಪಿಮಾರ್ಗನ್ ಸಂಸ್ಥೆಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದಿಂದ ಹೈರಾಣಾಗಿರುವ ಭಾರತೀಯರ ಕಿಸೆಗೆ ತೈಲೋತ್ಪನ್ನಗಳ ಬೆಲೆ ಮತ್ತಷ್ಟು ಹೊರೆಯಾಗುವ ಅಪಾಯ ನಿಚ್ಚಳವಾಗಿದೆ.

3) ಚಿನ್ನದ ಬೆಲೆ ಹೆಚ್ಚಳ ಭಾರತ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾತ್ರವಲ್ಲ, ಚಿನ್ನವನ್ನೂ ದೊಡ್ಡಮಟ್ಟದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕವಾಗಿ ಷೇರುಪೇಟೆಗಳು ಕುಸಿಯಲು ಆರಂಭಿಸಿದರೆ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆಗೆ ಎಲ್ಲರೂ ಮುಗಿಬೀಳುತ್ತಾರೆ. ಚಿನ್ನದ ದರ ಏರಿಕೆಯಾಗುತ್ತದೆ. ಭಾರತದ ಆರ್ಥಿಕತೆಗೆ ಇದೂ ಒಂದು ಹೊಡೆತ ಎನಿಸಿದೆ.

4) ಭಾರತದ ಭದ್ರತೆಗೆ ಆತಂಕ ಭಾರತದ ಸಶಸ್ತ್ರಪಡೆಗಳಲ್ಲಿರುವ ಶೇ 86ರಷ್ಟು ಯುದ್ಧೋಪಕರಣಗಳ ಉತ್ಪಾದನೆ, ತಂತ್ರಜ್ಞಾನ ಮತ್ತು ಬಿಡಿಭಾಗಗಳಿಗೆ ರಷ್ಯಾ ಸಹಕಾರ ಬೇಕೇಬೇಕು. ಮತ್ತೊಂದೆಡೆ ಭಾರತದ ಆರ್ಥಿಕತೆಗೆ ಅಮೆರಿಕದ ಸಹಕಾರ ಬೇಕೇಬೇಕು. ಎರಡೂ ಪ್ರಬಲ ದೇಶಗಳು ತೊಡೆತಟ್ಟಿ ನಿಂತಾಗ ಅನಿವಾರ್ಯವಾಗಿ ಭಾರತ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ಸೂಚಿಸಬೇಕಾಗುತ್ತದೆ. ಈ ಹಿಂದಿನ ಶೀತಲ ಯುದ್ಧದ (ಕೋಲ್ಡ್​ ವಾರ್) ಸಮಯದಲ್ಲಿ ನೆಹರು ಅವರು ಅನುಸರಿಸಿದ್ದಂತೆ ಆಲಿಪ್ತ ನೀತಿ (ನಾನ್ ಅಲೈನ್ ಮೂವ್​ಮೆಂಟ್) ಎಂದು ಸುಮ್ಮನಿರಲೂ ಆಗುವುದಿಲ್ಲ. ಅತ್ತ ದರಿ-ಇತ್ತ ಪುಲಿ ಎನ್ನುವ ಈ ಬಿಕ್ಕಟ್ಟು ಎದುರಿಸುವುದು ಅಷ್ಟು ಸುಲಭವಲ್ಲ.

ಮತ್ತೊಂದೆಡೆ ಕಮ್ಯುನಿಸ್ಟ್ ಸಿದ್ಧಾಂತ ಒಪ್ಪುವ ದೇಶಗಳು ಎನ್ನುವ ಕಾರಣಕ್ಕೆ ರಷ್ಯಾ ಮತ್ತು ಚೀನಾ ಹತ್ತಿರಕ್ಕೆ ಬಂದರೆ ಚೀನಾದೊಂದಿಗೆ ಹಲವು ಕಾರಣಗಳಿಂದಾಗಿ ಭೂ ಮತ್ತು ಸಾಗರ ಗಡಿಗಳಲ್ಲಿ ಸಂಘರ್ಷ ಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಅಪಾಯವಿದೆ. ತನ್ನ ಮಿತ್ರ ರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾಗಳ ರಕ್ಷಣೆಗೆಂದು ಅಮೆರಿಕ ಶಾಂತಸಾಗರದಲ್ಲಿ ನೌಕಾಪಡೆಯನ್ನು ನಿಯೋಜಿಸಿದೆ. ಇದೇ ಕಾರಣಕ್ಕೆ ಈ ವಲಯದಲ್ಲಿ ಚೀನಾ ನೌಕಾಪಡೆಯ ಕಾರ್ಯಾಚರಣೆಗಳು ಒಂದು ಹದ್ದುಬಸ್ತಿನಲ್ಲಿದೆ. ರಷ್ಯಾದೊಂದಿಗೆ ಸಂಘರ್ಷ ತೀವ್ರಗೊಂಡು, ಅಮೆರಿಕ ನೌಕಾಪಡೆಗಳು ಅತ್ತ ಹೊರಟರೆ ಈ ವಲಯದಲ್ಲಿ ಚೀನಾದ ಆಟಾಟೋಪ ಹೆಚ್ಚಾಗುತ್ತದೆ. ಭಾರತದ ಭದ್ರತೆಗೂ ಇದು ಅಪಾಯಕಾರಿ.

5) ಅನಿವಾಸಿ ಭಾರತೀಯರಿಗೆ ಹಲವು ಸಂಕಷ್ಟ ಉಕ್ರೇನ್-ರಷ್ಯಾ ಸಂಘರ್ಷ ಹೆಚ್ಚಾದರೆ ಅಲ್ಲಿರುವ ಭಾರತೀಯರ ಭದ್ರತೆಗೂ ಆತಂಕ ಹೆಚ್ಚಾಗುತ್ತದೆ. ಅಲ್ಲಿರುವ ಭಾರತೀಯರನ್ನು ಭಾರತ ಸರ್ಕಾರಕ್ಕೆ ಸ್ವದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಈ ಸಂಘರ್ಷವೇನಾದರೂ ಒಂದು ವೇಳೆ ಪೂರ್ಣಪ್ರಮಾಣದ ಯುದ್ಧದ ಸ್ವರೂಪ ತಳೆದು, ಅದು ದೀರ್ಘ ಕಾಲ ನಡೆದರೆ ಅದರ ಪರಿಣಾಮ ಮತ್ತೊಂದು ರೀತಿಯದು. ಈ ಸಂಘರ್ಷದಲ್ಲಿ ಭಾರತವೇನಾದರೂ ರಷ್ಯಾ ಪರ ನಿಲುವು ತಳೆದರೆ ಅಮೆರಿಕದಲ್ಲಿರುವ ಸುಮಾರು 50 ಲಕ್ಷ ಭಾರತ ಮೂಲದವರು ಒಂದಲ್ಲ ಒಂದು ರೀತಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ.

6) ಕುಸಿಯಲಿದೆ ಷೇರುಪೇಟೆ ರಷ್ಯಾ-ಉಕ್ರೇನ್ ಸಂಘರ್ಷದ ಸಂಭಾವ್ಯ ಪರಿಣಾಮಗಳ ಬಗ್ಗೆ ಹೆದರಿರುವ ಜಾಗತಿಕ ಹೂಡಿಕೆದಾರರು ತರಾತುರಿಯಲ್ಲಿ ಷೇರುಪೇಟೆಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ಈಗಾಗಲೇ ಮಾರುಕಟ್ಟೆಯ ಕುಸಿತದ ಅನುಭವ ಆಗುತ್ತಿದೆ. ಕಳೆದ ಸುಮಾರು ಎರಡು ವರ್ಷಗಳಿಂದ ಗೂಳಿಓಟ ಕಂಡಿದ್ದ ಷೇರುಪೇಟೆ ಕುಸಿಯಲು ಆರಂಭಿಸಿದರೆ, ಅದು ಸ್ಥಿರತೆ ಕಂಡು ಮತ್ತೆ ಮೇಲೇಳಲು ಹಲವು ವರ್ಷಗಳೇ ಬೇಕಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದರಿಂದ ನಿರುದ್ಯೋಗ ಸೇರಿದಂತೆ ಹಲವು ರೀತಿಯ ದುಷ್ಪರಿಣಾಮಗಳು ಭಾರತ ಎದುರಿಸಬೇಕಾಗಬಹುದು.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ನಡುವೆ ಯುದ್ಧಾತಂಕ; ನ್ಯಾಟೋ ಬಲವರ್ಧನೆಗೆ 3000 ಯೋಧರನ್ನು ಪೂರ್ವ ಯುರೋಪ್​ಗೆ ಕಳಿಸಿದ ಯುಎಸ್​​

ಇದನ್ನೂ ಓದಿ: Ukraine crisis ಮುಂದಿನ ತಿಂಗಳು ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ ಎಂದ ಬಿಡೆನ್, ಯುದ್ಧ ಬಯಸುವುದಿಲ್ಲ ಎಂದ ರಷ್ಯಾ

Published On - 6:47 pm, Sun, 13 February 22