WPI Inflation: ಸಗಟು ದರ ಸೂಚ್ಯಂಕ ಹಣದುಬ್ಬರ ನವೆಂಬರ್ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿ ಶೇ 14.23ಕ್ಕೆ
ಸಗಟು ಬೆಲೆ ಆಧಾರಿತ ಹಣದುಬ್ಬರ ದರವು 2021ರ ನವೆಂಬರ್ನಲ್ಲಿ ಶೇ 14.23 ತಲುಪುವ ಮೂಲಕ 12 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಆ ಬಗ್ಗೆ ವಿವರ ಇಲ್ಲಿದೆ.
ಹೆಚ್ಚಿನ ಆಹಾರ ಬೆಲೆಗಳ ಹಿನ್ನೆಲೆಯಲ್ಲಿ ಸಗಟು ಬೆಲೆಗಳು ಅಥವಾ WPI ಹಣದುಬ್ಬರವು 2021ರ ನವೆಂಬರ್ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟವಾದ ಶೇ 14.23 ಶೇಕಡಾಕ್ಕೆ ಏರಿದೆ. ಅಕ್ಟೋಬರ್‌ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾದ ಶೇ 12.54ಕ್ಕೆ ಜಿಗಿದಿತ್ತು. ನವೆಂಬರ್ ತಿಂಗಳಲ್ಲಿ ಮೊಟ್ಟೆ ಮತ್ತು ಮಾಂಸದ ಬೆಲೆಯೊಂದಿಗೆ ತರಕಾರಿ ಹಣದುಬ್ಬರ ಸಹ ಕಂಡುಬಂದಿದೆ. ಪ್ರಾಥಮಿಕ ವಸ್ತುಗಳ ಬೆಲೆಯೂ ಏರಿಕೆ ಆಗಿದೆ. ಇಂಧನ ಮತ್ತು ವಿದ್ಯುತ್ ಬೆಲೆಗಳು ಅಕ್ಟೋಬರ್‌ನಲ್ಲಿ ಇದ್ದ ಶೇ 37.18ಕ್ಕೆ ಹೋಲಿಸಿದರೆ ವರ್ಷದಲ್ಲಿ ಶೇ 39.81ರಷ್ಟು ಏರಿದೆ. ಆದರೆ ತಯಾರಿಸಿದ ಉತ್ಪನ್ನದ ಬೆಲೆಗಳು ಹಿಂದಿನ ತಿಂಗಳಲ್ಲಿ ಶೇ 12.04ಕ್ಕೆ ಹೋಲಿಸಿದರೆ ಶೇ 11.92ರಷ್ಟು ಏರಿದೆ.
ಜಾಗತಿಕ ಪೂರೈಕೆ ಅಡೆತಡೆಗಳು ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದು, ಕಚ್ಚಾ ತೈಲದ ಬೆಲೆಗಳು ಹೆಚ್ಚಿವೆ, ಇದು ತಯಾರಿಸಿದ ಸರಕುಗಳ ಮೇಲೆ ಒತ್ತಡವನ್ನು ಉಂಟುಮಾಡಿದೆ. ಹೆಚ್ಚಿನ ಸಗಟು ಬೆಲೆಗಳು ಆರ್ಥಿಕತೆಯಲ್ಲಿ ಬೇಡಿಕೆಯ ಆದಾಯವನ್ನು ರೀಟೇಲ್ ಬೆಲೆಗಳಿಗೆ ನೀಡಬಹುದು. ಅನೇಕ ಎಫ್‌ಎಂಸಿಜಿ ಕಂಪೆನಿಗಳು ಮಾರ್ಜಿನ್ ಒತ್ತಡವನ್ನು ಎದುರಿಸುತ್ತಿರುವ ಕಾರಣ ಈಗಾಗಲೇ ಬೆಲೆಗಳನ್ನು ಹೆಚ್ಚಿಸಿವೆ ಮತ್ತು ಇನ್‌ಪುಟ್ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ.
ತರಕಾರಿ ಬೆಲೆ ಏರಿಕೆಯಿಂದಾಗಿ ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ 4.91ಕ್ಕೆ ಏರಿಕೆಯಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 5.7ರಷ್ಟಿರುವಾಗ ಆರ್ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರ್ಣ ವರ್ಷದ ಗುರಿಯನ್ನು ಶೇಕಡಾ 5.3ರಲ್ಲಿ ಇರಿಸಿದೆ. ಅಂದ ಹಾಗೆ, ಆರ್ಬಿಐ ತನ್ನ ವಿತ್ತೀಯ ನೀತಿ ನಿರ್ಧಾರಗಳ ವೇಳೆ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.
ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.
ಇದನ್ನೂ ಓದಿ: Retail Inflation: 2021ರ ನವೆಂಬರ್ ಚಿಲ್ಲರೆ ಹಣದುಬ್ಬರ ದರ ಶೇ 4.91ಕ್ಕೆ ಏರಿಕೆ
Published On - 1:33 pm, Tue, 14 December 21