Recession: ಮುಂದಿನ 12 ತಿಂಗಳಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದೆ ಹಲವು ಪ್ರಮುಖ ಆರ್ಥಿಕತೆಗಳು

| Updated By: Srinivas Mata

Updated on: Jul 08, 2022 | 3:46 PM

ವಿಶ್ವದ ಪ್ರಮುಖ ಆರ್ಥಿಕತೆಗಳು ಮುಂದಿನ 12 ತಿಂಗಳಲ್ಲಿ ಆರ್ಥಿಕ ಹಿಂಜರಿತದ ಆತಂಕ ಎದುರಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ.

Recession: ಮುಂದಿನ 12 ತಿಂಗಳಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದೆ ಹಲವು ಪ್ರಮುಖ ಆರ್ಥಿಕತೆಗಳು
ಸಾಂದರ್ಭಿಕ ಚಿತ್ರ
Follow us on

ಜೀವನ ವೆಚ್ಚದಲ್ಲಿನ ಏರಿಕೆ ಮತ್ತು ಸರ್ಕಾರದ ಬಿಗು ನೀತಿಗಳು ಈ ಕಾರಣದಿಂದಾಗಿ ಮುಂದಿನ 12 ತಿಂಗಳಲ್ಲಿ ಹಲವು ಪ್ರಮುಖ ಆರ್ಥಿಕತೆಗಳು ಆರ್ಥಿಕ ಹಿಂಜರಿತಕ್ಕೆ (Recession) ಸಾಕ್ಷಿ ಆಗಲಿವೆ ಎಂದು ನೊಮುರಾ ಹೋಲ್ಡಿಂಗ್ಸ್ ತನ್ನ ವರದಿಯಲ್ಲಿ ಹೇಳಿದೆ. ಬ್ರೋಕರೇಜ್ ಸಂಸ್ಥೆಯ ವರದಿ ಪ್ರಕಾರ, ಯುರೋಪಿಯನ್ ಒಕ್ಕೂಟ, ಯುನೈಟೆಡ್ ಕಿಂಗ್​ಡಮ್, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ಅಮೆರಿಕಾವು ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸುವ ನಿರೀಕ್ಷೆ ಇದೆ. ಆ ಮೂಲಕವಾಗಿ ಜಾಗತಿಕ ಆರ್ಥಿಕತೆಯು ಬೆಳವಣಿಗೆ ನಿಧಾನಗತಿಗೆ ತಳ್ಳುವಂತಾಗುತ್ತದೆ ಎಂದು ನೊಮುರಾದ ಅರ್ಥಶಾಸ್ತ್ರಜ್ಞರಾದ ರಾಬ್ ಸುಬ್ಬರಾಮನ್ ಮತ್ತು ಸಿ ಯಿಂಗ್ ತೋ ತಮ್ಮ ಸಂಶೋಧನಾ ಲೇಖನದಲ್ಲಿ ಹೇಳಿದ್ದಾರೆ.

ಬೆಳವಣಿಗೆಯ ವಿಚಾರವನ್ನು ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ 2023ರಲ್ಲಿ ದರ ಕಡಿತ ಮಾಡುವ ಮೊದಲಿಗೆ ಕೇಂದ್ರ ಬ್ಯಾಂಕ್​ಗಳು ಹಣಕಾಸು ನೀತಿಯನ್ನು ಬಿಗುಗೊಳಿಸುವ ಸಾಧ್ಯತೆ ಇದೆ. “ವಿಶ್ವ ಆರ್ಥಿಕತೆಯು ಬೆಳವಣಿಗೆ ನಿಧಾನ ಗತಿಯ ವಲಯವನ್ನು ಪ್ರವೇಶಿಸುವ ಸೂಚನೆ ನೀಡುತ್ತಿದೆ. ಇದರ ಅರ್ಥ ಏನೆಂದರೆ ದೇಶಗಳು ಬೆಳವಣಿಗೆಗಾಗಿ ರಫ್ತಿನ ಮೇಲೆ ಅವಲಂಬನೆ ಸಾಧ್ಯವಿಲ್ಲ. ಇದರ ಜತೆಗೆ ಹಲವು ಆರ್ಥಿಕ ಹಿಂಜರಿತವನ್ನು ಅಂದಾಜು ಮಾಡುವಂಥ ಸ್ಥಿತಿ ಸೃಷ್ಟಿಯಾಗಿದೆ,” ಎಂದು ವರದಿಯಲ್ಲಿದೆ.

ಅರ್ಥಶಾಸ್ತ್ರಜ್ಞರ ಪ್ರಕಾರವಾಗಿ, ಆರ್ಥಿಕ ಹಿಂಜರಿತದ ತೀವ್ರತೆಯು ದೇಶದಿಂದ ದೇಶಕ್ಕೆ ಭಿನ್ನವಾಗಲಿದೆ. ಅಮೆರಿಕದಲ್ಲಿ ದೀರ್ಘಾವಧಿಯ ಐದು ತ್ರೈಮಾಸಿಕದ ಆರ್ಥಿಕ ಹಿಂಜರಿತ ಈ ವರ್ಷದ ಕೊನೆಯ ತ್ರೈಮಾಸಿಕದಿಂದ ಶುರುವಾಗುತ್ತದೆ. ಒಂದು ವೇಳೆ ರಷ್ಯಾದಿಂದ ಅನಿಲ ಪೂರೈಕೆ ಸಂಪೂರ್ಣವಾಗಿ ನಿಲ್ಲಿಸಿದಲ್ಲಿ ಯುರೋಪ್​ನ ಸ್ಥಿತಿ ಗಂಭೀರವಾಗುತ್ತದೆ. ಜಪಾನೀಸ್ ಹಣಕಾಸು ಸೇವಾ ಸಂಸ್ಥೆಯಾದ ನೊಮುರಾ ತಿಳಿಸುವಂತೆ, ಅಮೆರಿಕ ಮತ್ತು ಯುರೋ ಪ್ರದೇಶದ ಆರ್ಥಿಕತೆಯು 2023ರಲ್ಲಿ ಶೇ 1ರಷ್ಟು ಸಂಕುಚಿತಗೊಳ್ಳಲಿದೆ.

ಆಸ್ಟ್ರೇಲಿಯಾ, ಕೆನಡಾ ಮತ್ತು ದಕ್ಷಿಣ ಕೊರಿಯಾ ಒಳಗೊಂಡಂತೆ ಮಧ್ಯಮ ಗಾತ್ರದ ಆರ್ಥಿಕತೆಗಳು ಅಂದಾಜು ಮಾಡಿದ್ದಕ್ಕಿಂತ ತೀವ್ರ ಸ್ವರೂಪದ ಆರ್ಥಿಕ ಹಿಂಜರಿತವನ್ನು ಅನುಭವಿಸಲಿವೆ. ಅದು ಯಾವಾಗೆಂದರೆ, ಬಡ್ಡಿ ದರ ಏರಿಕೆಯಿಂದ ಪರಿಣಾಮ ಬೀರಿದಾಗ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಇನ್ನೂ ಮುಂದುವರಿದು, ಜಪಾನ್​ ಸಾಮಾನ್ಯ ಪ್ರಮಾಣದ ಆರ್ಥಿಕ ಹಿಂಜರಿತ ಅನುಭವಿಸಲಿದೆ. ಈಗಿನ ನೀತಿಯ ಬೆಂಬಲ ಮತ್ತು ನಿಧಾನಗತಿಯ ಆರ್ಥಿಕತೆಯ ಪುನರಾರಂಭದ ಕಾರಣಕ್ಕೆ ಹೀಗಾಗಬಹುದು ಎಂದು ಹೇಳಲಾಗಿದೆ.

ಬೀಜಿಂಗ್ ಶೂನ್ಯ ಕೊವಿಡ್ ಕಾರ್ಯತಂತ್ರದೊಂದಿಗೆ ಲಾಕ್​ಡೌನ್ ಮತ್ತೆ ತರಬಹುದು ಎಂಬ ಅಪಾಯದ ಮಧ್ಯೆಯೂ ಅಕಾಮಡೆಟಿವ್ ನೀತಿಯೊಂದಿಗೆ ಚೀನಾದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ.