LIC Dividend: ಎಲ್​ಐಸಿ ಡಿವಿಡೆಂಡ್ ರೆಕಾರ್ಡ್ ದಿನಾಂಕ, ಎಷ್ಟು ಮೊತ್ತ ಮತ್ತಿತರ ವಿವರ ಇಲ್ಲಿದೆ

| Updated By: Srinivas Mata

Updated on: Jul 08, 2022 | 1:26 PM

ಎಲ್​ಐಸಿ ಡಿವಿಡೆಂಡ್ ರೆಕಾರ್ಡ್ ದಿನಾಂಕವನ್ನು ನಿಗದಿ ಮಾಡಿದೆ. ಡಿವಿಡೆಂಡ್ ಮತ್ತಿತರ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮೆದುರು ಇಡಲಾಗಿದೆ.

LIC Dividend: ಎಲ್​ಐಸಿ ಡಿವಿಡೆಂಡ್ ರೆಕಾರ್ಡ್ ದಿನಾಂಕ, ಎಷ್ಟು ಮೊತ್ತ ಮತ್ತಿತರ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಭಾರತದ ಅತಿ ದೊಡ್ಡ ಇನ್ಷೂರೆನ್ಸ್ ಕಂಪೆನಿಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಲಿಸ್ಟಿಂಗ್ ನಂತರದ ತನ್ನ ಮೊದಲ ಗಳಿಕೆ ಫಲಿತಾಂಶವನ್ನು ಘೋಷಿಸುವ ಸಂದರ್ಭದಲ್ಲಿ ಪ್ರತಿ ಷೇರಿಗೆ ತಲಾ 1.50 ರೂಪಾಯಿ ಡಿವಿಡೆಂಡರ ನೀಡುವ ಪ್ರಸ್ತಾವ ಇಟ್ಟಿತ್ತು. ಆದರೆ ಅದಕ್ಕಾಗಿ ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಆದರೆ ಕಂಪೆನಿ ಈಗ ಡಿವಿಡೆಂಡ್ ಪಾವತಿಗೆ ರೆಕಾರ್ಡ್ ದಿನಾಂಕ ನಿಗದಿ ಮಾಡಿದೆ. ಆಗಸ್ಟ್ 26, 2022 ಎಂದು ರೆಕಾರ್ಡ್ ದಿನವನ್ನಾಗಿ ನಿಗದಿ ಮಾಡಲಾಗಿದೆ ಎಂದು ಫೈಲಿಂಗ್​ನಲ್ಲಿ ವಿನಿಮಯ ಕೇಂದ್ರಕ್ಕೆ ತಿಳಿಸಲಾಗಿದೆ. ಅಲ್ಲದೆ ಎಲ್​ಐಸಿಯ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ 27, 2022ರಂದು ನಡೆಯಲಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಮೇ ತಿಂಗಳಲ್ಲಿ ಎಲ್​ಐಸಿ ಷೇರು ಸಾರ್ವಜನಿಕ ಲಿಸ್ಟಿಂಗ್ ಆಗಿತ್ತು.

ಇನ್ನು ಎಲ್​ಐಸಿಯು ಮಂಡಳಿಯು ಈಚೆಗೆ ಎಲ್​ಐಸಿ (ನೇಪಾಳ) ಲಿಮಿಟೆಡ್​ನಲ್ಲಿ ಜಂಟಿ ಹೂಡಿಕೆಗೆ ಹಕ್ಕಿನ ಷೇರು ವಿತರಣೆಗೆ 80.67 ಕೋಟಿ ರೂಪಾಯಿ ಹೂಡಿಕೆ ಮಾಡಲು ಅನುಮತಿ ನೀಡಿದೆ. ಎಲ್​ಐಸಿ ಮಂಡಳಿ ನೀಡಿದ ಮಾಹಿತಿಯಂತೆ, ಕೇಂದ್ರ ಸರ್ಕಾರವು ಸುಚಿಂದ್ರ ಮಿಶ್ರಾ ಅವರನ್ನು ಸರ್ಕಾರದ ನಿರ್ದೇಶಕರಾಗಿ ಎಲ್​ಐಸಿ ಮಂಡಳಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದೆ. ಪಂಕಜ್ ಜೈನ್ ಅವರಿಗೆ ಬದಲಿಯಾಗಿ ಈ ನೇಮಕಾತಿ ಆಗಿದೆ. ಇನ್ನು 2021-22ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭ 2409 ಕೋಟಿ ರೂಪಾಯಿ ಆಗಿತ್ತು. ಕಳೆದ ವರ್ಷದ ಇದೇ ಈ ತ್ರೈಮಾಸಿಕದಲ್ಲಿ 2917 ಕೋಟಿ ರೂ. ಲಾಭವಾಗಿತ್ತು. ಅಂದರೆ ಲಾಭದ ಪ್ರಮಾಣ ಶೇ 17ರಷ್ಟು ಕಡಿಮೆ ಆಗಿದೆ. ಇದು ಎಲ್​ಐಸಿ ಲಿಸ್ಟಿಂಗ್ ಆದ ನಂತರದ ಮೊದಲ ಫಲಿತಾಂಶ ಆಗಿತ್ತು. ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದ್ದ 1,90,098 ಕೋಟಿ ರೂಪಾಯಿ ಆದಾಯವು 2,12,030 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು.

ಮೇ 17, 2022ರಂದು ರಿಯಾಯಿತಿಯಲ್ಲಿ ಎಲ್​ಐಸಿ ಲಿಸ್ಟಿಂಗ್ ಆಗಿದೆ. ಪ್ರತಿ ಷೇರಿಗೆ 949 ರೂಪಾಯಿಯಂತೆ ವಿತರಣೆಯಾದ ಷೇರು ಈ ಲೇಖನ ಸಿದ್ಧವಾಗಿವ ಹೊತ್ತಿಗೆ 706.50 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು. ಅಂದರೆ ಪ್ರತಿ ಷೇರಿಗೆ 242.50 ರೂಪಾಯಿ ನೆಲ ಕಚ್ಚಿದೆ. ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಎಲ್​ಐಸಿಗೆ ವಿವಿಧ ಬ್ರೋಕರೇಜ್ ಸಂಸ್ಥೆಗಳು ಖರೀದಿ ಮಾಡುವಂತೆ ಶಿಫಾರಸಿನ ರೇಟಿಂಗ್ ನೀಡಿವೆ. ಆದರೆ ಜಾಗತಿಕ ವಿದ್ಯಮಾನಗಳೂ ಸೇರಿದಂತೆ ನಾನಾ ಅಂಶಗಳಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದಲೇ ಹೂಡಿಕೆಯಿಂದ ದೂರ ಉಳಿದಿದ್ದಾರೆ.

Published On - 12:14 pm, Fri, 8 July 22