ನವದೆಹಲಿ: ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ (WPI Inflation) ಅಥವಾ ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಇನ್ಫ್ಲೇಷನ್ ಜನವರಿಯಲ್ಲಿ 24 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಶೇ 4.73 ಆಗಿದೆ. ಉತ್ಪಾದನಾ ವಸ್ತುಗಳು, ಇಂಧನ ಹಾಗೂ ವಿದ್ಯುತ್ ದರ ಇಳಿಕೆಯ ಪರಿಣಾಮ ಹಣದುಬ್ಬರ ಇಳಿಕೆಯಾಗಿದೆ. 2022ರ ಡಿಸೆಂಬರ್ನಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ 4.95 ಇತ್ತು. 2022ರ ಜನವರಿಯಲ್ಲಿ ಶೇ 13.68 ಇತ್ತು. ಆದಾಗ್ಯೂ, ಆಹಾರ ವಸ್ತುಗಳ ಮೇಲಿನ ಹಣದುಬ್ಬರ ಜನವರಿಯಲ್ಲಿ ಶೇ 2.38ಕ್ಕೆ ಏರಿಕೆಯಾಗಿದೆ. 2022ರ ಡಿಸೆಂಬರ್ನಲ್ಲಿ ಅದು ಶೇ (-) 1.25 ಇತ್ತು.
‘ಖನಿಜ ತೈಲಗಳು, ರಾಸಾಯನಿಕಗಳು, ರಾಸಾಯನಿಕ ಉತ್ಪನ್ನಗಳು, ಜವಳಿ, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಆಹಾರೋತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿರುವ ಕಾರಣ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರದಲ್ಲಿ ಇಳಿಕೆಯಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಧಾನ್ಯಗಳ ದರ ಆಧಾರಿತ ಹಣದುಬ್ಬರ 2023ರ ಜನವರಿಯಲ್ಲಿ ಶೇ 2.41 ಇದ್ದರೆ, ತರಕಾರಿ ಹಣದುಬ್ಬರ ಶೇ (-) 26.48 ಇತ್ತು. ತೈಲ ಬೀಜಗಳ ಹಣದುಬ್ಬರ ಶೇ (-) 4.22 ಇತ್ತು. ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ 15.15ಕ್ಕೆ ಇಳಿಕೆಯಾಗಿದೆ. ಇದು ಡಿಸೆಂಬರ್ನಲ್ಲಿ ಶೇ 18.09ರಷ್ಟಿತ್ತು. ಉತ್ಪಾದನಾ ವಸ್ತುಗಳ ಹಣದುಬ್ಬರ ಶೇ 3.37ರಿಂದ ಶೇ 2.99ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ: Retail Inflation: ಮತ್ತೆ ನಿಯಂತ್ರಣ ತಪ್ಪಿದ ಚಿಲ್ಲರೆ ಹಣದುಬ್ಬರ; 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರವಷ್ಟೇ 2023ರ ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣದ ಮಾಹಿತಿ ನೀಡಿತ್ತು. ಚಿಲ್ಲರೆ ಹಣದುಬ್ಬರ ಪ್ರಮಾಣದ ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿ, ಅಂದರೆ ಶೇ 6.52 ದಾಖಲಾಗಿತ್ತು. 2022ರ ಡಿಸೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಆರ್ಬಿಐ ಸಹನೆಯ ಮಿತಿಯ (ಶೇ 6) ಒಳಗೆಯೇ ಇತ್ತು. ಡಿಸೆಂಬರ್ನಲ್ಲಿ ಗ್ರಾಹಕ ದರ ಸೂಚ್ಯಂಕ ಆಧಾರಿತ (CPI) ಚಿಲ್ಲರೆ ಹಣದುಬ್ಬರ ಪ್ರಮಾಣ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ, ಅಂದರೆ ಶೇಕಡಾ 5.72ಕ್ಕೆ ಇಳಿಕೆಯಾಗಿತ್ತು. ಆದರೆ ಜನವರಿಯಲ್ಲಿ ಮತ್ತೆ ಏರಿಕೆಯಾಗಿದೆ. ಚಿಲ್ಲರೆ ಹಣದುಬ್ಬರವನ್ನು ಶೇ 2ರಿಂದ 4ರ ಒಳಗೆ ಇರುವಂತೆ ನೋಡಿಕೊಳ್ಳುವುದು ಆರ್ಬಿಐ ಗುರಿಯಾಗಿದೆ. ಹೀಗಾಗಿ ಮತ್ತೊಮ್ಮೆ ಆರ್ಬಿಐ ರೆಪೊ ದರ ಹೆಚ್ಚಿಸುವ ಆತಂಕ ಎದುರಾಗಿದೆ.