Air India: ಏರ್​ಬಸ್​​ನಿಂದ 250 ವಿಮಾನ ಖರೀದಿಸಲಿರುವ ಏರ್ ಇಂಡಿಯಾ; ಅಧಿಕೃತ ಘೋಷಣೆ

|

Updated on: Feb 14, 2023 | 5:15 PM

ಒಪ್ಪಂದದ ಕುರಿತು ಈವರೆಗೆ ಏರ್‌ಬಸ್‌ ಮತ್ತು ಟಾಟಾ ಕಂಪನಿಗಳು ಅಧಿಕೃತವಾಗಿ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಏರ್​ಬಸ್​ ಹಾಗೂ ಫ್ರಾನ್ಸ್​​ ಅಧ್ಯಕ್ಷರು ಅಧಿಕೃತ ಘೋಷಣೆ ಮಾಡಿದ್ದಾರೆ.

Air India: ಏರ್​ಬಸ್​​ನಿಂದ 250 ವಿಮಾನ ಖರೀದಿಸಲಿರುವ ಏರ್ ಇಂಡಿಯಾ; ಅಧಿಕೃತ ಘೋಷಣೆ
ಏರ್ ಇಂಡಿಯಾ ವಿಮಾನ (ಸಂಗ್ರಹ ಚಿತ್ರ)
Follow us on

ನವದೆಹಲಿ: ಫ್ರಾನ್ಸ್‌ನ ಪ್ರಮುಖ ವಿಮಾನ ತಯಾರಿಕಾ ಕಂಪನಿ ಏರ್‌ಬಸ್​ನಿಂದ (Airbus) ಟಾಟಾ ಸಮೂಹದ (Tata Group) ಒಡೆತನದ ಏರ್​ ಇಂಡಿಯಾ (Air India) 250 ವಿಮಾನಗಳನ್ನು ಖರೀದಿಸುವ ಒಪ್ಪಂದ ಅಂತಿಮಗೊಂಡಿದ್ದು, ಈ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬಿದ್ದಿದೆ. ಈ ಒಪ್ಪಂದದ ಪ್ರಕಾರ ಏರ್ ಇಂಡಿಯಾ ಖರೀದಿಸಲಿರುವ 250 ವಿಮಾನಗಳಲ್ಲಿ 40 ‘ಎ350 ವೈಡ್ ಬಾಡಿ ಲಾಂಗ್ ರೇಂಜ್ ಏರ್​ಕ್ರಾಫ್ಟ್​’ಗಳೂ ಸೇರಿವೆ. ಏರ್​​​ಬಸ್ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಗುಯಿಲೌಮ್ ಫೌರಿ ವಿಡಿಯೊ ಕಾನ್ಫರೆನ್ಸ್​​ನಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಪ್ರಧಾನಿ ಇಮ್ಯಾನುಯೆಲ್ ಮ್ಯಾಕ್ರನ್, ಉದ್ಯಮಿ ರತನ್ ಟಾಟಾ ಹಾಗೂ ಇತರರು ವಿಡಿಯೊ ಕಾನ್ಫರೆನ್ಸ್​​ನಲ್ಲಿ ಭಾಗವಹಿಸಿದ್ದರು. ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ಎಂದೇ ಇದನ್ನು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಏರ್​ ಇಂಡಿಯಾ 470 ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದ್ದು, ಈ ಪೈಕಿ 220 ವಿಮಾನಗಳನ್ನು ಬೋಯಿಂಗ್ ಕಂಪನಿಯಿಂದ ಖರೀದಿಸಲಿದೆ.

ಈ ಒಪ್ಪಂದವು ಭಾರತ-ಫ್ರಾನ್ಸ್​​ ನಡುವಣ ಬಾಂಧವ್ಯದಲ್ಲಿ ಮಹತ್ವದ ಮೈಲಿಗಲ್ಲು ಎಂದು ಇಮ್ಯಾನುಯೆಲ್ ಮ್ಯಾಕ್ರನ್ ಬಣ್ಣಿಸಿದ್ದಾರೆ. ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್, ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇತರ ನಾಯಕರು ವಿಡಿಯೊ ಕಾನ್ಫರೆನ್ಸ್​​ನಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Air India: 500 ವಿಮಾನ ಖರೀದಿ ಒಪ್ಪಂದ ಅಂತಿಮಗೊಳಿಸಿದ ಏರ್‌ ಇಂಡಿಯಾ

ಏರ್‌ಬಸ್‌ ಮತ್ತು ಏರ್ ಇಂಡಿಯಾ ನಡುವೆ ಶುಕ್ರವಾರ (ಫೆ 10) ಒಡಂಬಡಿಕೆ ಏರ್ಪಟ್ಟಿತ್ತು. ಬೋಯಿಂಗ್-ಟಾಟಾ ಕಂಪನಿಗಳು (ಏರ್‌ ಇಂಡಿಯಾ) ಜನವರಿ 27ರಂದೇ ಸಹಿಹಾಕಿದ್ದವು. ಕಳೆದ ವರ್ಷ ಅದೇ ದಿನಾಂಕದಂದು ಟಾಟಾ ಸಮೂಹವು ಏರ್‌ ಇಂಡಿಯಾವನ್ನು ಮತ್ತೆ ತನ್ನ ಅಧೀನಕ್ಕೆ ಪಡೆದುಕೊಂಡಿತ್ತು. ಒಪ್ಪಂದದ ಕುರಿತು ಈವರೆಗೆ ಏರ್‌ಬಸ್‌ ಮತ್ತು ಟಾಟಾ ಕಂಪನಿಗಳು ಅಧಿಕೃತವಾಗಿ ಪ್ರತಿಕ್ರಿಯಿಸಿರಲಿಲ್ಲ. ಆದರೆ ಟಾಟಾ ಕಂಪನಿಯು ತನ್ನ ಉದ್ಯೋಗಿಗಳಿಗೆ ಕಳಿಸಿರುವ ಇಮೇಲ್‌ನಲ್ಲಿ ‘ವಿಮಾನಗಳ ಖರೀದಿಗಾಗಿ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರ ಅಂತಿಮಗೊಂಡಿದೆ’ ಎಂದು ತಿಳಿಸಿತ್ತು. ಇದೀಗ ಏರ್​ಬಸ್​ ಹಾಗೂ ಫ್ರಾನ್ಸ್​​ ಅಧ್ಯಕ್ಷರು ಅಧಿಕೃತ ಘೋಷಣೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ