Air India: 500 ವಿಮಾನ ಖರೀದಿ ಒಪ್ಪಂದ ಅಂತಿಮಗೊಳಿಸಿದ ಏರ್ ಇಂಡಿಯಾ
Aivation: 100 ಶತಕೋಟಿ ಡಾಲರ್ ಮೊತ್ತದ ಈ ವಹಿವಾಟು ಇತ್ತೀಚಿನ ದಿನಗಳಲ್ಲಿ ವಾಯುಯಾನ ಸಂಸ್ಥೆಯೊಂದು ನಿರ್ವಹಿಸುತ್ತಿರುವ ಅತಿದೊಡ್ಡ ಖರೀದಿ ಪ್ರಕ್ರಿಯೆ ಎನಿಸಿದೆ
ಬೆಂಗಳೂರು: ಒಟ್ಟು 500 ಹೊಸ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಏರ್ ಇಂಡಿಯಾ (Air India) ಅಂತಿಮಗೊಳಿಸಿದೆ. 100 ಶತಕೋಟಿ ಡಾಲರ್ ಮೊತ್ತದ ಈ ವಹಿವಾಟು ಇತ್ತೀಚಿನ ದಿನಗಳಲ್ಲಿ ವಾಯುಯಾನ ಸಂಸ್ಥೆಯೊಂದು (Aviation Company) ನಿರ್ವಹಿಸುತ್ತಿರುವ ಅತಿದೊಡ್ಡ ಖರೀದಿ ಪ್ರಕ್ರಿಯೆ ಎನಿಸಿದೆ. ಮುಂದಿನ ದಿನಗಳಲ್ಲಿ ಏರ್ ಇಂಡಿಯಾ ತನ್ನ ಸ್ಥಾನವನ್ನು ಮರುಆವಿಷ್ಕಾರ ಮಾಡಿಕೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಫ್ರಾನ್ಸ್‌ನ ಪ್ರಮುಖ ವಿಮಾನ ಉತ್ಪಾದಕ ಕಂಪನಿಗಳಾಗ ಏರ್‌ಬಸ್ ಮತ್ತು ಬೋಯಿಂಗ್‌ಗಳಿಂದ ತಲಾ 250 ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುತ್ತಿದೆ. ಏರ್‌ಇಂಡಿಯಾ ಇಂಥ ಮಹತ್ವದ ಖರೀದಿಗೆ ಮುಂದಾಗಬಹುದು ಎಂದು ಕಳೆದ ಡಿಸೆಂಬರ್‌ನಿಂದಲೂ ಸುದ್ದಿ ಹರಿದಾಡುತ್ತಿತ್ತು. ಇವುಗಳ ಪೈಕಿ 400 ವಿಮಾನಗಳು ಮಧ್ಯಮಗಾತ್ರದವು. ಉಳಿದ 100 ದೊಡ್ಡ ಗಾತ್ರದ್ದಾಗಿವೆ.
ಏರ್‌ಬಸ್ ಮತ್ತು ಏರ್ ಇಂಡಿಯಾ ನಡುವೆ ಶುಕ್ರವಾರ (ಫೆ 10) ಒಡಂಬಡಿಕೆ ಏರ್ಪಟ್ಟಿದೆ. ಬೋಯಿಂಗ್-ಟಾಟಾ ಕಂಪನಿಗಳು (ಏರ್ ಇಂಡಿಯಾ) ಜ 27ರಂದೇ ಸಹಿಹಾಕಿದ್ದವು. ಕಳೆದ ವರ್ಷ ಅದೇ ದಿನಾಂಕದಂದು ಟಾಟಾ ಏರ್ ಇಂಡಿಯಾವನ್ನು ಮತ್ತೆ ತನ್ನ ಅಧೀನಕ್ಕೆ ಪಡೆದುಕೊಂಡಿತ್ತು. ಈ ಕುರಿತು ಏರ್‌ಬಸ್ ಮತ್ತು ಟಾಟಾ ಕಂಪನಿಗಳು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ ಟಾಟಾ ಕಂಪನಿಯು ತನ್ನ ಉದ್ಯೋಗಿಗಳಿಗೆ ಕಳಿಸಿರುವ ಇಮೇಲ್‌ನಲ್ಲಿ ‘ವಿಮಾನಗಳ ಖರೀದಿಗಾಗಿ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರ ಅಂತಿಮಗೊಂಡಿದೆ’ ಎಂದು ತಿಳಿಸಿತ್ತು.
ಇದನ್ನೂ ಓದಿ: Air India: ಎಸ್ಬಿಐ, ಬ್ಯಾಂಕ್ ಆಫ್ ಬರೋಡದಿಂದ 18,000 ಕೋಟಿ ಸಾಲ ಪಡೆಯಲಿದೆ ಏರ್ ಇಂಡಿಯಾ
ಹಾಲಿ ಅಸ್ತಿತ್ವದಲ್ಲಿರುವ ಹಳೆಯ ವಿಮಾನಗಳನ್ನು ಬದಲಿಸಿ, ಹೊಸ ವಿಮಾನಗಳನ್ನು ಮಾರ್ಗಗಳಿಗೆ ಪರಿಚಯಿಸಲು ಏರ್ ಇಂಡಿಯಾ ಮುಂದಾಗಿದೆ. ಇದೇ ಕಾರ್ಯತಂತ್ರವನ್ನು ಏರ್‌ಇಂಡಿಯಾದ ಈ ಖರೀದಿ ಒಪ್ಪಂದವೂ ಪ್ರತಿಬಂಬಿಸುತ್ತದೆ. ವಿದೇಶಗಳಲ್ಲಿರುವ ದೊಡ್ಡ ಸಂಖ್ಯೆಯ ಭಾರತೀಯರ ನೆಚ್ಚಿನ ಆಯ್ಕೆಯಾಗಿ ಉಳಿಯಬೇಕು ಎಂಬ ಮಹತ್ವಾಕಾಂಕ್ಷಿ ಪ್ರಯತ್ನದಲ್ಲಿ ಹಲವು ಹೊಸ ಉಪಕ್ರಮಗಳಿಗೆ ಏರ್‌ಇಂಡಿಯಾ ಮುಂದಾಗಿದೆ. ಗಲ್ಫ್ ರಾಷ್ಟ್ರಗಳ ಎಮಿರೇಟ್ಸ್ ಮತ್ತಿತರ ಕಂಪನಿಗಳ ವಿಮಾನಗಳಿಂದ ಏರ್‌ಇಂಡಿಯಾ ತೀವ್ರ ಪೈಪೋಟಿ ಎದುರಿಸುತ್ತಿದೆ.
400 ಸಣ್ಣ-ಮಧ್ಯಮಗಾತ್ರದ ವಿಮಾನಗಳನ್ನು ಪಡೆಯುವುದರಿಂದ ಪ್ರಾದೇಶಿಕ ವಾಯುಯಾನದಲ್ಲಿಯೂ ಏರ್‌ಇಂಡಿಯಾದ ಪ್ರಾಧಾನ್ಯತೆ ಹೆಚ್ಚಾಗಲಿದೆ. ಭಾರತದ ಒಳಗಿನ ವಾಯುಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಮುಂಚೂಣಿಯಲ್ಲಿದ್ದು, ಏರ್‌ಇಂಡಿಯಾಗೆ ಪೈಪೋಟಿ ನೀಡುತ್ತಿದೆ. ಇದೇ ಅಂತಿಮವಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಮಾನಗಳ ಖರಿದಿಗೆ ಏರ್ ಇಂಡಿಯಾ ಮುಂದಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಒಂದಿಷ್ಟು ವಿಮಾನಗಳನ್ನು ಬಾಡಿಗೆಗೂ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೊವಿಡ್ ನಂತರ ವಿಮಾನ ಪ್ರಯಾಣಿಕರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂಬ ನಿರೀಕ್ಷೆಯಲ್ಲಿ ಏರ್ ಇಂಡಿಯಾ ಈ ಮಹತ್ವದ ಖರೀದಿ ನಿರ್ಧಾರ ತೆಗೆದುಕೊಂಡಿದೆ. ಮೀಸೆ ಹೊತ್ತ ಮಹಾರಾಜನ ಚಿತ್ರವನ್ನು ಬ್ರಾಂಡ್ ಸಿಂಬಲ್ ಆಗಿ ಹೊಂದಿದ್ದ ಏರ್ ಇಂಡಿಯಾ ಒಂದು ಕಾಲದಲ್ಲಿ ವಿಶ್ವದ ಪ್ರಮುಖ ಏರ್‌ಲೈನ್ ಎನಿಸಿತ್ತು. ಅತ್ಯಾಧುನಿಕ ವಿಮಾನಗಳು ಮತ್ತು ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿತ್ತು. ಆದರೆ 2000ನೇ ಇಸವಿಯಿಂದೀಚೆಗೆ ಪರಿಸ್ಥಿತಿ ಬದಲಾಯಿತು. ಏರ್ ಇಂಡಿಯಾದ ಆರ್ಥಿಕ ಸ್ಥಿತಿ ಕುಸಿಯುವುದೊಂದಿಗೆ ಮಾರುಕಟ್ಟೆ ಪಾಲೂ ಕಡಿಮೆಯಾಯಿತು.
ಇದೀಗ ಹೊಸ ವಿಮಾನಗಳೊಂದಿಗೆ ಮಾರುಕಟ್ಟೆಯಲ್ಲಿ ಸವಾಲುಗಳನ್ನು ಎದುರಿಸಲು ಏರ್ ಇಂಡಿಯಾ ಸಜ್ಜಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶ್ವದ ಹಲವು ದೇಶಗಳ ಪ್ರಮುಖ ಮಾರ್ಗಗಳು ಹಾಗೂ ಭಾರತದೊಳಗಿನ ಪ್ರಾದೇಶಿಕ ಮಾರ್ಗಗಳಲ್ಲಿಯೂ ಹೊಸ ವಿಮಾನಗಳನ್ನು ಏರ್ ಇಂಡಿಯಾ ಪರಿಚಯಿಸಲಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:13 pm, Sat, 11 February 23