Valentine’s Day: ಬೆಂಗಳೂರಿನ ಕೆಂಪು ಗುಲಾಬಿಗೆ ಭಾರೀ ಬೇಡಿಕೆ; ದರವೂ ಹೆಚ್ಚಳ

|

Updated on: Feb 14, 2023 | 2:04 PM

Red Rose export; ಈ ವರ್ಷ ಗುಲಾಬಿ ಬೇಡಿ ಭಾರೀ ಹೆಚ್ಚಳವಾಗಿದೆ. ವಿದೇಶಗಳಿಂದ ಮಾತ್ರವಲ್ಲದೆ, ದೇಶೀಯ ಮಾರುಕಟ್ಟೆಗಳಲ್ಲಿಯೂ ಬೇಡಿಕೆ ಹೆಚ್ಚಳವಾಗಿದೆ. ಹೂವಿನ ರಫ್ತು ಶೇ 20ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

Valentines Day: ಬೆಂಗಳೂರಿನ ಕೆಂಪು ಗುಲಾಬಿಗೆ ಭಾರೀ ಬೇಡಿಕೆ; ದರವೂ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪ್ರೇಮಿಗಳ ದಿನದ ಪ್ರಯುಕ್ತ (Valentine’s Day) ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಮಾರುಕಟ್ಟೆಯ ಕೆಂಪು ಗುಲಾಬಿ (Red Rose) ಬೇಡಿಕೆ ಹೆಚ್ಚಾಗಿದ್ದು, ದರವೂ ಗಗನಕ್ಕೇರಿದೆ. ಪರಿಣಾಮವಾಗಿ ರೈತರು ಮತ್ತು ಮಾರಾಟಗಾರರು ಸಂತಸಗೊಂಡಿದ್ದಾರೆ. ಬೆಂಗಳೂರಿನಿಂದ ಗುಲಾಬಿ ಹೂಗಳ ರಫ್ತು ಪ್ರಮಾಣ ಶೇ 20ರಷ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ. ಕೋವಿಡ್ ನಿರ್ಬಂಧಗಳನ್ನೂ ತೆರವುಗೊಳಿಸಿರುವುದರಿಂದ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಹೂ ರಫ್ತು ಮಾಡಲಾಗುತ್ತಿದ್ದು, ರೈತರ ಫುಲ್ ಖುಷಿಯಾಗಿದ್ದಾರೆ. ಕಳೆದ ವರ್ಷ ಒಟ್ಟು 515 ಟನ್ ಗುಲಾಬಿ ಹೂ ರಫ್ತಾಗಿದ್ದರೆ, ಈ ಪೈಕಿ 273 ಟನ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗಾಟ ಮಾಡಲಾಗಿತ್ತು.

ಈ ವರ್ಷ ಗುಲಾಬಿ ಬೇಡಿ ಭಾರೀ ಹೆಚ್ಚಳವಾಗಿದೆ. ವಿದೇಶಗಳಿಂದ ಮಾತ್ರವಲ್ಲದೆ, ದೇಶೀಯ ಮಾರುಕಟ್ಟೆಗಳಲ್ಲಿಯೂ ಬೇಡಿಕೆ ಹೆಚ್ಚಳವಾಗಿದೆ. ಹೂವಿನ ರಫ್ತು ಶೇ 20ರಷ್ಟು ಹೆಚ್ಚಾಗಿದೆ ಎಂದು ಹೂ ಹರಾಜು ಕೇಂದ್ರದ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ‘ಬೆಂಗಳೂರು ಮಿರರ್’ ವರದಿ ಮಾಡಿದೆ.

ಸ್ಥಳೀಯ ಹೂ ಮಾರುಕಟ್ಟೆಗಳಲ್ಲಿಯೂ ದರ ಏರಿಕೆಯಾಗಿದೆ. ಒಂದು ಹೂಗುಚ್ಛ (12 ಹೂಗಳ) 370 ರೂ.ನಿಂದ 400 ರೂ.ವರೆಗೆ ಮಾರಾಟವಾಗುತ್ತಿದೆ. ಪ್ರೇಮಿಗಳ ದಿನ ಪ್ರಯುಕ್ತ ಕೆಲವೆಡೆ ಇನ್ನೂ ಹೆಚ್ಚಿನ ದರ ಇರಬಹುದು ಎಂದು ವರದಿ ಉಲ್ಲೇಖಿಸಿದೆ. ಇತ್ತೀಚಿನ ದಿನಗಳಲ್ಲಿ ಸಹಜವಾಗಿಯೇ ಗುಲಾಬಿ ಹೂ ಬೇಡಿಕೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಪ್ರೇಮಿಗಳ ದಿನದ ಬೇಡಿಕೆಯ ನಿರೀಕ್ಷೆಯಲ್ಲಿ ರೈತರೂ ಹೆಚ್ಚು ಗುಲಾಬಿ ಬೆಳೆಸಿದ್ದರು. ಆದಾಗ್ಯೂ, ಬೇಡಿಕೆಯನ್ನೂ ಮೀರಿ ಪೂರೈಕೆಯಾದರೆ ಬೆಲೆ ಕುಸಿಯುವ ಭೀತಿಯೂ ಇದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Valentine’s Day Special 2023: ಅವನನ್ನು ನೋಡಿದಾಗ ನನಗ್ಯಾಕೆ ಹೀಗಾಯ್ತು? ಇದು ಪ್ರೀತಿನಾ, ಆಕರ್ಷಣೆಯಾ?

ಗುಲಾಬಿ ಬೆಳೆಯಲ್ಲಿ ಕರ್ನಾಟಕವೂ ಮುಂಚೂಣಿಯಲ್ಲಿದ್ದು, ವಿವಿಧ ತಳಿಯ ಗುಲಾಬಿ ಹೂಗಳನ್ನು ಬೆಳೆಯಲಾಗುತ್ತಿದೆ. ತಾಜ್​ಮಹಲ್, ಸಮುರಿ, ಗೋಲ್ಡ್​ಸ್ಟ್ರೈಕ್, ಯೆಲ್ಲೋ ಹಾಟ್​​ಶಾಟ್, ಜುಮಲಿಯಾ, ಸೌರಾ ಹಾಗೂ ರಾಕ್​ಸ್ಟರ್ ತಳಿಯ ಗುಲಾಬಿಯನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಲಾಬಿ ಬೆಳೆಯಲಾಗುತ್ತಿದೆ.

ಎಲ್ಲಿಗೆಲ್ಲ ರಫ್ತಾಗುತ್ತಿದೆ ಬೆಂಗಳೂರಿನ ಕೆಂಗುಲಾಬಿ?

ಬೆಂಗಳೂರಿನಿಂದ ಹಲವು ದೇಶಗಳಿಗೆ ಗುಲಾಬಿ ರಫ್ತಾಗುತ್ತಿದೆ. ಲಂಡನ್, ಸಿಂಗಾಪುರ, ದುಬೈ, ಕುವೈತ್, ಆ್ಯಮ್​ಸ್ಟರ್​​ಡ್ಯಾಂ, ಮನಿಲಾ, ಮಸ್ಕತ್​ ಸೇರಿದಂತೆ ಅನೇಕ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ದೇಶೀಯ ಮಾರುಕಟ್ಟೆಗಳ ಪೈಕಿ ಮುಂಬೈ, ದೆಹಲಿ, ಕೋಲ್ಕತ್ತ, ಗುವಾಹಟಿ ಹಾಗೂ ಚಂಡೀಗಢಕ್ಕೆ ಬೆಂಗಳೂರಿನ ಗುಲಾಬಿ ರಫ್ತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Tue, 14 February 23