ನವದೆಹಲಿ, ಜುಲೈ 14: ಭಾರತದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವ ಕುರುಹುಗಳು ದಟ್ಟವಾಗಿವೆ. ಜೂನ್ ತಿಂಗಳ ಚಿಲ್ಲರೆ ಹಣದುಬ್ಬರ (Retail Inflation) ಶೇ. 4.81ರಷ್ಟು ಇದ್ದದ್ದು ಮೊನ್ನೆಮೊನ್ನೆ ವರದಿಯಾಗಿತ್ತು. ಇದೀಗ ಸಗಟು ಹಣದುಬ್ಬರ ಮೈನಸ್ ಶೇ. 4.12ಕ್ಕೆ ಇಳಿದಿದೆ. ವೋಲ್ಸೇಲ್ ಪ್ರೈಸ್ ಇಂಡೆಕ್ಸ್ (WPI) ಆಧಾರಿತ ಹಣದುಬ್ಬರ ಮೇ ತಿಂಗಳಲ್ಲಿ ಮೈನಸ್ ಶೇ. 3.48ರಷ್ಟಿತ್ತು. ಜೂನ್ನಲ್ಲಿ ಇದು ಇನ್ನೂ ಕುಸಿತ ಕಂಡಿದೆ. ಇದರೊಂದಿಗೆ ಸಗಟು ಮಾರಾಟ ಸೂಚ್ಯಂಕದ ಹಣದುಬ್ಬರ ಸತತ ಮೂರು ತಿಂಗಳು ಇಳಿಕೆ ಕಂಡಂತಾಗಿದೆ.
2015ರ ಅಕ್ಟೋಬರ್ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ. 4.76 ಇತ್ತು. ಅದಾದ ಬಳಿಕ ಈಗಿನ ಹಣದುಬ್ಬರವೇ ಅತ್ಯಂತ ಕಡಿಮೆ ಮಟ್ಟದ್ದು ಎನ್ನಲಾಗಿದೆ. ಅಂದರೆ ಕಳೆದ ಎಂಟು ವರ್ಷದಲ್ಲೇ ಇದು ಕನಿಷ್ಠ ಸಗಟು ಹಣದುಬ್ಬರ ದರವಾಗಿದೆ.
ಇದನ್ನೂ ಓದಿ: Retail Inflation: ಬೆಲೆ ಏರಿಕೆ ಪರಿಣಾಮ; ಜೂನ್ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ
ಹಣದುಬ್ಬರ ದರ ಸೊನ್ನೆಗಿಂತ ಕಡಿಮೆಗೆ ಬಂದರೆ ಅದು ಡೀಫ್ಲೇಶನ್ ಎನಿಸುತ್ತದೆ. ಹಣಕುಸಿತ ಎನ್ನಬಹುದು. ಜೂನ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕದಲ್ಲಿ ವ್ಯತ್ಯಯವಾಗಲು ಪ್ರಮುಖ ಕಾರಣವಾಗಿದ್ದು ಇಂಧನದ ಬೆಲೆ ಕಡಿಮೆ ಆಗಿರುವುದು. ಹಾಗೆಯೇ, ತಯಾರಿಕಾ ಉತ್ಪನ್ನಗಳ ಬೆಲೆ ಇಳಿಕೆಯಾಗಿದ್ದು ಡಬ್ಲ್ಯುಪಿಐ ಹಣದುಬ್ಬರ ಕುಸಿತಕ್ಕೆ ಕಾರಣವಾಗಿದೆ. ಟೊಮೆಟೋ ಇತ್ಯಾದಿ ತರಕಾರಿಗಳ ಬೆಲೆ ಹೆಚ್ಚಾಗಿದ್ದರಿಂದ ಒಂದಷ್ಟು ಸಮತೋಲನ ಸಾಧ್ಯವಾಯಿತು.
ಜುಲೈ 12ರಂದು ಬಿಡುಗಡೆ ಆದ ವರದಿ ಪ್ರಕಾರ ಜೂನ್ ತಿಂಗಳಲ್ಲಿ ಭಾರತದಲ್ಲಿ ಗ್ರಾಹಕ ಬೆಲೆ ಸೂಚಿ (ಸಿಪಿಐ) ಅಥವಾ ರೀಟೇಲ್ ಹಣದುಬ್ಬರ ಶೇ. 4.81ರಷ್ಟು ಇತ್ತು. ಇದು ನಿರೀಕ್ಷೆಗಿಂತ ತುಸು ಹೆಚ್ಚೇ ಇದೆ. ಮೇ ತಿಂಗಳಲ್ಲಿ ರೀಟೇಲ್ ಇನ್ಫ್ಲೇಶನ್ ಶೇ. 4.25ರಷ್ಟಿತ್ತು. ಜೂನ್ ತಿಂಗಳಲ್ಲಿ ಹೆಚ್ಚೂಕಡಿಮೆ ಅಷ್ಟೇ ಪ್ರಮಾಣದಲ್ಲಿ ಹಣದುಬ್ಬರ ಇರಬಹುದು ಎಂದು ಭಾವಿಸಲಾಗಿತ್ತು. ಆದರೆ, ಅಂದುಕೊಂಡಿದ್ದಕಿಂತ ಜೂನ್ನಲ್ಲಿ ಹಣದುಬ್ಬರ ಹೆಚ್ಚೇ ಆಗಿದೆ. ಆದರೂ ಕೂಡ ಆರ್ಬಿಐ ನಿಗದಿ ಮಾಡಿದ ಗುರಿಯೊಳಗೆಯೇ ಇದು ಇದೆ.
ಇದನ್ನೂ ಓದಿ: WPI Inflation: ಸಗಟು ಬೆಲೆ ಹಣದುಬ್ಬರ ಮೈನಸ್ 3.48 ಪ್ರತಿಶತಕ್ಕೆ ಕುಸಿತ; ಆರ್ಥಿಕತೆಗೆ ಅನುಕೂಲವೋ, ಅಪಾಯವೋ?
ರೀಟೇಲ್ ಹಣದುಬ್ಬರವು ಒಂದು ಉತ್ಪನ್ನವನ್ನು ಗ್ರಾಹಕ ಖರೀದಿಸುವ ಬೆಲೆಯನ್ನು ಆಧರಿಸಿರುತ್ತದೆ. ಅದೇ ಸಗಟು ಹಣದುಬ್ಬರವು ಉತ್ಪಾದಕ ಮಟ್ಟದ ಬೆಲೆಯನ್ನು ಆಧಾರಿಸಿರುತ್ತದೆ. ಅಂದರೆ ಹೋಲ್ಸೇಲ್ ಮಾರುಕಟ್ಟೆಗಳಲ್ಲಿ ಒಂದು ವಸ್ತುವಿನ ಬೆಲೆ ಎಷ್ಟಿದೆ ಎಂಬುದರ ಮೇಲೆ ಡಬ್ಲ್ಯುಪಿಐ ಹಣದುಬ್ಬರವನ್ನು ಲೆಕ್ಕ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ