ನವದೆಹಲಿ, ಜುಲೈ 15: ಸಗಟು ಮಾರಾಟ ದರ ಆಧಾರಿತ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 3.4ರಷ್ಟಿದೆ. ಮೇ ತಿಂಗಳಲ್ಲಿ ಶೇ. 2.6ರಷ್ಟಿದ್ದ ಹೋಲ್ಸೇಲ್ ದರದ ಹಣದುಬ್ಬರ ಈಗ 80 ಮೂಲಾಂಕಗಳಷ್ಟು ಏರಿಕೆ ಆಗಿದೆ. ಇಂದು ಸೋಮವಾರ ಸರ್ಕಾರ ದತ್ತಾಂಶ ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಆಹಾರ ಮತ್ತು ಉತ್ಪಾದಿತ ಉತ್ಪನ್ನಗಳ ಬೆಲೆ ಏರಿಕೆ ದರ ತೀವ್ರವಾಗಿ ಹೆಚ್ಚಳವಾಗಿದೆ. ಡಬ್ಲ್ಯುಪಿಐ ಹಣದುಬ್ಬರ ಅಥವಾ ಸಗಟು ಹಣದುಬ್ಬರದ ಈ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿರುವುದು ಸಗಟು ಆಹಾರ ಬೆಲೆ ಹಣದುಬ್ಬರವೇ. ಮೇ ತಿಂಗಳಲ್ಲಿ ಶೇ. 7.4ರಷ್ಟಿದ್ದ ಹೋಲ್ಸೇಲ್ ಫೂಡ್ ಇನ್ಫ್ಲೇಶನ್ ಈ ಜೂನ್ ತಿಂಗಳಲ್ಲಿ ಶೇ. 8.7ಕ್ಕೆ ಏರಿಕೆ. 1.3 ಪ್ರತಿಶತದಷ್ಟು ಹಣದುಬ್ಬರ ಏರಿಕೆ ಆಗಿರುವುದು ಕಂಡುಬಂದಿದೆ.
ಮತ್ತೊಂದು ವಿಶೇಷತೆ ಎಂದರೆ, ಕಳೆದ 16 ತಿಂಗಳಲ್ಲಿ ಇದೇ ಮೊದಲ ಬಾರಿಗೆ ತಯಾರಿತ ಉತ್ಪನ್ನಗಳಿಗೆ ಬೆಲೆ ಏರಿಕೆ ಬಿಸಿ ತಾಕಿದೆ. ಈ ಮ್ಯಾನುಫ್ಯಾಕ್ಚರ್ಡ್ ಪ್ರಾಡಕ್ಟ್ಗಳ ಹಣದುಬ್ಬರ 2023ರ ಫೆಬ್ರುವರಿಯಿಂದ ಒಂದಂಕಿಯ ಒಳಗೆಯೇ ಇತ್ತು. ಮೇನಲ್ಲಿ ಶೇ. 0.8ರಷ್ಟಿದ್ದ ಇದರ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 1.43ಕ್ಕೆ ಏರಿದೆ. ಡಬ್ಲ್ಯುಪಿಐ ಇಂಡೆಕ್ಸ್ನಲ್ಲಿ ಈ ತಯಾರಿತ ಉತ್ಪನ್ನಗಳ ಪಾಲು ಮೂರನೇ ಎರಡರಷ್ಟಿದೆ. ಇದೂ ಕೂಡ ಸಗಟು ಮಾರಾಟ ದರ ಸೂಚ್ಯಂಕ ಏರಲು ಇನ್ನೊಂದು ಪ್ರಮುಖ ಕಾರಣವಾಗಿದೆ.
ಒಟ್ಟಾರೆ ಡಬ್ಲ್ಯುಪಿಐ ಅಥವಾ ಸಗಟು ದರ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 3.4ಕ್ಕೆ ಏರಿರುವುದು ಅನಿರೀಕ್ಷಿತವಲ್ಲ. ಇತ್ತೀಚೆಗೆ, ಹಣದುಬ್ಬರ ಸತತವಾಗಿ ಹೆಚ್ಚುತ್ತಾ ಬಂದಿದೆ. ರೀಟೇಲ್ ಹಣದುಬ್ಬರ ಕೂಡ ಜೂನ್ ತಿಂಗಳಲ್ಲಿ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಶೇ. 4.75ರಷ್ಟಿದ್ದ ರೀಟೇಲ್ ಇನ್ಫ್ಲೇಶನ್ ಜೂನ್ ತಿಂಗಳಲ್ಲಿ ಶೇ. 5.08ಕ್ಕೆ ಏರಿದೆ. ಹಣ್ಣು ತರಕಾರಿ, ಬೇಳೆ ಕಾಳು ಇತ್ಯಾದಿ ಆಹಾರವಸ್ತುಗಳ ಹಣದುಬ್ಬರವು ಚಿಲ್ಲರೆ ಮಾರಾಟ ದರ ಆಧಾರಿತ ಹಣದುಬ್ಬರವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಜೂನ್ ತಿಂಗಳಲ್ಲಿ ಹಣದುಬ್ಬರ ಶೇ. 5.08; ತರಕಾರಿ ಬೆಲೆ ಏರಿಕೆ ಪ್ರಮುಖ ಕಾರಣ
ಸಗಟು ಹಣದುಬ್ಬರದ ಏರಿಕೆಗೂ ಆಹಾರವಸ್ತು ಬೆಲೆ ಏರಿಕೆಯೇ ಪ್ರಮುಖ ಕಾರಣ. ಇನ್ನು, ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿನ ಉತ್ಪನ್ನಗಳ ಹೋಲ್ಸೇಲ್ ದರದಲ್ಲಿ ಏರಿಕೆ ಆಗಿರುವುದು ಕಾರ್ಪೊರೇಟ್ ಲಾಭದ ಮಾರ್ಜಿನ್ ಅನ್ನು ಕಡಿಮೆ ಮಾಡಬಹುದು ಎನ್ನುವ ಅಂಶವನ್ನು ತಜ್ಞರು ಎತ್ತಿ ತೋರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ