ನವದೆಹಲಿ, ಜುಲೈ 15: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಂಸಿಎಲ್ಆರ್ ದರವನ್ನು ಇಂದು ಸೋಮವಾರ ಶೇ. 5ರಿಂದ 10 ಮೂಲಾಂಕಗಳಷ್ಟು ಏರಿಕೆ ಮಾಡಿದೆ. ವಿವಿಧ ಅವಧಿಯ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸಿದೆ. ಇದರೊಂದಿಗೆ ಎಸ್ಬಿಐನ ಎಲ್ಲಾ ರೀತಿಯ ಸಾಲಗಳಿಗೆ ಬಡ್ಡಿದರವೂ ಹೆಚ್ಚಳವಾಗಲಿದೆ. ಸಾಲಕ್ಕೆ ಕಟ್ಟಲಾಗುತ್ತಿರುವ ಇಎಂಐಗೂ ಸಹಜವಾಗಿ ಹೆಚ್ಚಾಗಲಿದೆ. ಒಂದು ತಿಂಗಳ ಅವಧಿಯಲ್ಲಿ ಎಸ್ಬಿಐ ತನ್ನ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಜೂನ್ ತಿಂಗಳ ಮಧ್ಯಭಾಗದಲ್ಲಿ ಎಸ್ಬಿಐ ಒಂದು ವರ್ಷದ ಸಾಲದ ಅವಧಿಗೆ ಎಂಸಿಎಲ್ಆರ್ ದರಗಳನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಿತ್ತು. ಅಂದರೆ ಹತ್ತು ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿತ್ತು.
ಇದನ್ನೂ ಓದಿ: ಎರಡು ವರ್ಷದಲ್ಲಿ ಪಿಎಫ್ ಎಕ್ಸೆಂಪ್ಷನ್ ಬಿಟ್ಟುಕೊಟ್ಟ 27 ಸಂಸ್ಥೆಗಳು; ಇಪಿಎಫ್ಒ ವ್ಯಾಪ್ತಿಗೆ ಸೇರ್ಪಡೆಯಾದ 30,000 ಉದ್ಯೋಗಿಗಳು
ಎಂಸಿಎಲ್ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್. ಆರ್ಬಿಐ ಸಾಮಾನ್ಯವಾಗಿ ಇದನ್ನು ನಿಗದಿ ಮಾಡುತ್ತದೆ. ಇದು ಒಂದು ಬ್ಯಾಂಕ್ ಸಾಲ ನೀಡುವಾಗ ಇರಿಸಬೇಕಾದ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ದರಕ್ಕೆ ಬ್ಯಾಂಕ್ ಸಾಲ ಕೊಡುವಂತಿಲ್ಲ.
ಬ್ಯಾಂಕುಗಳೂ ಕೂಡ ಎಂಸಿಎಲ್ಆರ್ ದರಗಳನ್ನು ಏರಿಸಬಹುದು. ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಬೇಕೆಂದರೆ ಹಣ ಬೇಕು. ಎಫ್ಡಿ ಇತ್ಯಾದಿ ಠೇವಣಿ ಮೂಲಕ ಅದು ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತದೆ. ಕೆಲವೊಮ್ಮೆ ಅದು ಆರ್ಬಿಐನಿಂದಲೂ ಅಥವಾ ಬೇರೆ ಮಾರುಕಟ್ಟೆಯಿಂದಲೋ ಫಂಡಿಂಗ್ ಪಡೆಯಬಹುದು. ಇದಕ್ಕೆ ಅದು ವ್ಯಯಿಸುವ ದರವೇ ಎಂಸಿಎಲ್ಆರ್ ಆಗುತ್ತದೆ.
ಇದನ್ನೂ ಓದಿ: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಯ 6,000 ರೂ ಮೊತ್ತ ಹೆಚ್ಚಳ ಆಗುತ್ತಾ?
ಬ್ಯಾಂಕ್ ನಿಗದಿಪಡಿಸಿದ ಎಂಸಿಎಲ್ಆರ್ ದರ ಅಥವಾ ಬೆಂಚ್ಮಾರ್ಕ್ ದರದ ಆಧಾರದ ಮೇಲೆ ಸಾಲಗಳಿಗೆ ಬಡ್ಡಿದರ ನಿಗದಿ ಮಾಡಲಾಗುತ್ತದೆ. ಹೀಗಾಗಿ, ಎಂಸಿಎಲ್ಆರ್ ದರ ಹೆಚ್ಚಾದರೆ, ಗೃಹ ಸಾಲದಿಂದ ಹಿಡಿದು ವೈಯಕ್ತಿಕ ಸಾಲದವರೆಗೆ ಎಲ್ಲಾ ಸಾಲಗಳಿಗೂ ಬಡ್ಡಿದರ ಹೆಚ್ಚುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ