ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಯ 6,000 ರೂ ಮೊತ್ತ ಹೆಚ್ಚಳ ಆಗುತ್ತಾ?
PM Kisan Scheme and Union Budget 2024: ಜುಲೈ 23ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಯ ಮೊತ್ತ ವಿಸ್ತರಿಸಬಹುದು ಎನ್ನುವ ಮಾತಿದೆ. ಈ ಯೋಜನೆಯಲ್ಲಿ ಈಗ ಒಂದು ವರ್ಷದಲ್ಲಿ ಒಟ್ಟು 6,000 ರೂ ಹಣವನ್ನು ಫಲಾನುಭವಿ ರೈತರಿಗೆ ನೀಡಲಾಗುತ್ತಿದೆ. ಇದನ್ನು ಎಂಟು ಸಾವಿರ ರೂಗೆ ಹೆಚ್ಚಿಸಬೇಕೆಂದು ನಿರೀಕ್ಷೆ ಇದೆ.
ನವದೆಹಲಿ, ಜುಲೈ 14: ಕೇಂದ್ರ ಬಜೆಟ್ ಮಂಡನೆ ಆಗಲು ಕೆಲವೇ ದಿನ ಬಾಕಿ ಇದೆ. ವಿವಿಧ ವಲಯಗಳ ನಿರೀಕ್ಷೆ ಹಲವಿವೆ. ಸರ್ಕಾರ ಆದ್ಯತೆ ಕೊಡಲಿರುವ ನಾಲ್ಕು ವರ್ಗಗಳೆಂದರೆ ಯುವಜನ, ಮಹಿಳೆ, ಕೃಷಿಕರು ಮತ್ತು ಶ್ರಮಿಕರು. ಅನ್ನದಾತ ಎನಿಸಿರುವ ಕೃಷಿಕರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಗುರಿ ಇನ್ನೂ ಈಡೇರಿಲ್ಲ. 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸುಮಾರು 10 ಕೋಟಿ ರೈತರನ್ನು ತಲುಪಿದೆ. ಇದು ಇನ್ನೂ ಬಹಳಷ್ಟು ಸಣ್ಣ ರೈತರನ್ನು ತಲುಪಬೇಕಿದೆ. ಯೋಜನೆ ಅಡಿ ಒಂದು ವರ್ಷದಲ್ಲಿ ನೀಡಲಾಗುತ್ತಿರುವ 6,000 ರೂ ಧನಸಹಾಯ ಸಾಲುವುದಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಮೊತ್ತವನ್ನು 8,000 ರೂಗೆ ಹೆಚ್ಚಿಸಬೇಕೆಂದು ಕೃಷಿ ತಜ್ಞರನೇಕರು ಸಲಹೆ ನೀಡಿದ್ದಾರೆ. ಸರ್ಕಾರ ಕೂಡ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿದೆ. ಆದರೆ, ಈ ಬಜೆಟ್ನಲ್ಲಿ ಪಿಎಂ ಕಿಸಾನ್ ಮೊತ್ತ ಹೆಚ್ಚಳ ಆಗುತ್ತದಾ ಖಚಿತತೆ ಇಲ್ಲ.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಜಮೀನು ಮಾಲಕತ್ವ ಹೊಂದಿರುವ ಕೃಷಿಕರಿಗೆ ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ತಲಾ ಎರಡು ಸಾವಿರ ರೂಗಳ ಮೂರು ಕಂತುಗಳಲ್ಲಿ ಒಟ್ಟು ಆರು ಸಾವಿರ ರೂ ಹಣವನ್ನು ಕೊಡುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಈ ಹಣ ಬಂದು ಬೀಳುತ್ತದೆ. ಸರ್ಕಾರ ಈವರೆಗೆ 17 ಕಂತುಗಳ ಹಣ ನೀಡಿದೆ. 3 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹಣವನ್ನು ಈ ಸ್ಕೀಮ್ನಲ್ಲಿ ಫಲಾನುಭವಿಗಳಿಗೆ ಈವರೆಗೆ ನೀಡಲಾಗಿದೆ. ಜೂನ್ ತಿಂಗಳಲ್ಲಿ 17ನೇ ಕಂತಿಗೆ ಸರ್ಕಾರ 20,000 ಕೋಟಿ ರೂಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿತ್ತು. ಒಂದು ವರ್ಷದಲ್ಲಿ ಸರ್ಕಾರ ಈ ಯೋಜನೆಗೆ 55,000 ಕೋಟಿ ರೂನಿಂದ 65,000 ಕೋಟಿ ರೂ ವ್ಯಯಿಸುತ್ತದೆ. ಯೋಜನೆ ಹಣವನ್ನು 8,000 ರೂಗೆ ಹೆಚ್ಚಿಸಿದಲ್ಲಿ ಇದು ವರ್ಷಕ್ಕೆ ಸುಮಾರು 20,000 ಕೋಟಿ ರೂ ಹೆಚ್ಚುವರಿ ಹೊರೆಯಾಗುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್ ಎಐ ಚಾಟ್ಬೋಟ್ ಬಳಸಿದ್ದೀರಾ? ಕಿಸಾನ್ ಇಮಿತ್ರಾ ಬಗ್ಗೆ ಇಲ್ಲಿದೆ ಡೀಟೇಲ್ಸ್
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?
ನೀವು ಸ್ವಂತ ಕೃಷಿ ಭೂಮಿ ಹೊಂದಿದ್ದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೊಂದಾಯಿಸಬಹುದು. ಆದರೆ, ನೀವು ಜನಪ್ರತಿನಿಧಿಯಾಗಿರಬಾರದು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ವೃತ್ತಿಪರ ಕೆಲಸದಲ್ಲಿ ಇರಬಾರದು. ಈ ಯೋಜನೆಗೆ ನೊಂದಾಯಿಸುವುದು ಬಹಳ ಸುಲಭ. ಆನ್ಲೈನ್ನಲ್ಲೇ ಮಾಡಬಹುದು ಅಥವಾ ನಿಮ್ಮ ಊರಿನ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿಯೂ ನೊಂದಾಯಿಸಬಹುದು.
- ಮೊದಲಿಗೆ ಪಿಎಂ ಕಿಸಾನ್ ಸ್ಕೀಮ್ನ ವೆಬ್ಸೈಟ್ ಪ್ರವೇಶಿಸಿ. ಅದರ ವಿಳಾಸ: pmkisan.gov.in
- ಇಲ್ಲಿ ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ.
- ಇಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಟ್ಯಾಬ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಫೋನ್ ನಂಬರ್ ನೀಡಿ, ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.
- ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಸಲ್ಲಿಸಬೇಕು.
- ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಇತ್ಯಾದಿ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಹೀಗೆ ಪರೀಕ್ಷಿಸಿ…
- ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ನ ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ
- ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ದುಕೊಳ್ಳಿ.
- ಆ ಗ್ರಾಮದಲ್ಲಿರುವ ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿಕೊಳ್ಳಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ