ನವದೆಹಲಿ: 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ದರವನ್ನು (FD Rates) ಯೆಸ್ ಬ್ಯಾಂಕ್ (Yes Bank) ಪರಿಷ್ಕರಣೆ ಮಾಡಿದ್ದು, ಡಿಸೆಂಬರ್ 5ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಇದರೊಂದಿಗೆ ಹಿರಿಯ ನಾಗರಿಕರು ಶೇಕಡಾ 7.50ರ ವರೆಗೂ ಬಡ್ಡಿ ಪಡೆಯಬಹುದಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್ಡಿ ಪರಿಷ್ಕೃತ ಬಡ್ಡಿ ದರ ಶೇಕಡಾ 3.25ರಿಂದ 7ರ ವರೆಗೆ ಇದೆ.
7ರಿಂದ 14 ದಿನಗಳ ಅವಧಿಯ ಎಫ್ಡಿಗೆ ಬ್ಯಾಂಕ್ ಶೇಕಡಾ 3.25ರ ಬಡ್ಡಿ ನಿಗದಿಪಡಿಸಿದೆ. 15ರಿಂದ 45 ದಿನಗಳ ಅವಧಿಯ ಎಫ್ಡಿ ಬಡ್ಡಿ ದರವನ್ನು ಶೇಕಡಾ 3.70ಕ್ಕೆ ಹೆಚ್ಚಿಸಿದೆ. 46ರಿಂದ 90 ದಿನಗಳ ಅವಧಿಯ ಎಫ್ಡಿಗೆ ಶೇಕಡಾ 4.10 ಹಾಗೂ 91 ದಿನಗಳಿಂದ 180 ದಿನಗಳ ಅವಧಿಯ ಎಫ್ಡಿಗೆ ಶೇಕಡಾ 4.75ರ ಬಡ್ಡಿ ನಿಗದಿಪಡಿಸಿದೆ. 181ರಿಂದ 271 ದಿನಗಳ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್ಡಿಗೆ ಶೇಕಡಾ 5.50 ಹಾಗೂ 272 ದಿನಗಳಿಂದ ಒಂದು ವರ್ಷದ ಒಳಗಿನ ಅವಧಿಯ ಎಫ್ಡಿಗೆ ಶೇಕಡಾ 5.75ರ ಬಡ್ಡಿ ನಿಗದಿಪಡಿಸಿದೆ.
1 ವರ್ಷದಿಂದ 20 ತಿಂಗಳ ನಡುವಣ ಅವಧಿಯ ಮತ್ತು 22 ತಿಂಗಳುಗಳಿಂದ 36 ತಿಂಗಳ ಒಳಗಿನ ಅವಧಿಯ ಎಫ್ಡಿಗೆ ಶೇಕಡಾ 7ರ ಬಡ್ಡಿ ನಿಗದಿಪಡಿಸಿದೆ. 36 ತಿಂಗಳು ಮೇಲ್ಪಟ್ಟ ಹಾಗೂ 120 ತಿಂಗಳ ಒಳಗಿನ ಅವಧಿಯ ಎಫ್ಡಿಗೆ ಶೇಕಡಾ 6.75ರ ಬಡ್ಡಿ ದೊರೆಯಲಿದೆ.
ಇದನ್ನೂ ಓದಿ: RBI MPC Meeting: ಆರ್ಬಿಐ ಹಣಕಾಸು ನೀತಿ ಸಭೆ; ಸಾಲದ ಬಡ್ಡಿ ದರ ಹೆಚ್ಚಳದ ಆತಂಕದಲ್ಲಿ ಗ್ರಾಹಕರು
ಹಿರಿಯ ನಾಗರಿಕರ ವಿವಿಧ ಎಫ್ಡಿಗೆ ಶೇಕಡಾ 3.75ರಿಂದ ತೊಡಗಿ ಶೇಕಡಾ 7.50 ವರೆಗೂ ಬಡ್ಡಿ ದೊರೆಯಲಿದೆ.
ಅಕ್ಟೋಬರ್ನಲ್ಲಿ ವಿಶೇಷ ಎಫ್ಡಿ ಆರಂಭಿಸಿದ್ದ ಯೆಸ್ ಬ್ಯಾಂಕ್
20 ತಿಂಗಳುಗಳಿಂದ 22 ತಿಂಗಳ ಒಳಗಿನ ವಿಶೇಷ ಎಫ್ಡಿ ಯೋಜನೆಯನ್ನು ಅಕ್ಟೋಬರ್ನಲ್ಲಿ ಯೆಸ್ ಬ್ಯಾಂಕ್ ಆರಂಭಿಸಿತ್ತು. ಈ ಎಫ್ಡಿಗೆ ಸಾಮಾನ್ಯ ಗ್ರಾಹಕರಿಗೆ ಶೇಕಡಾ 7.25 ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 7.75ರ ಬಡ್ಡಿ ನೀಡಲಾಗುತ್ತಿದೆ.
ಎಸ್ಬಿಐ, ಐಸಿಐಸಿಐ ಸೇರಿದಂತೆ ಅನೇಕ ಬ್ಯಾಂಕ್ಗಳು ಇತ್ತೀಚೆಗೆ ಎಫ್ಡಿ ಸೇರಿದಂತೆ ವಿವಿಧ ಠೇವಣಿಗಳು ಮತ್ತು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಆರ್ಬಿಐ ರೆಪೊ ದರ ಮೇ ನಂತರ ಸೆಪ್ಟೆಂಬರ್ ವರೆಗೆ 190 ಮೂಲಾಂಶ ಹೆಚ್ಚಳವಾಗಿದ್ದು, ಅದರ ಪ್ರಯೋಜನವನ್ನು ತುಸು ಮಟ್ಟಿಗೆ ಬ್ಯಾಂಕ್ಗಳು ಗ್ರಾಹಕರಿಗೆ ತಲುಪಿಸಲು ಮುಂದಾಗಿವೆ. ಆರ್ಬಿಐ ಹಣಕಾಸು ನೀತಿ ಸಭೆ ಸೋಮವಾರದಿಂದ ಆರಂಭವಾಗಿದ್ದು, ಬುಧವಾರ ನೀತಿ ಪ್ರಕಟವಾಗಲಿದೆ. ಮತ್ತೆ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಒಂದು ವೇಳೆ ಹೆಚ್ಚಳವಾದಲ್ಲಿ ಮರಳಿ ಬ್ಯಾಂಕ್ಗಳು ಸಾಲ ಹಾಗೂ ಠೇವಣಿಗಳ ಬಡ್ಡಿ ದರ ಹೆಚ್ಚಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ