Kerala Financial Crisis: ಕೇರಳದಲ್ಲಿ ಭಾರೀ ಹಣಕಾಸು ಬಿಕ್ಕಟ್ಟು; ಹಣಕಾಸು ಸಚಿವರು ಕೊಟ್ಟ ಕಾರಣ ಇಲ್ಲಿದೆ
ರಾಜ್ಯದ ಆರ್ಥಿಕತೆಯು ಹಿಂದೆಂದೂ ಕಂಡಿರದಂಥ ಬಿಕ್ಕಟ್ಟು ಎದುರಿಸುತ್ತಿರುವುದು ನಿಜ. ಈ ಬಿಕ್ಕಟ್ಟಿಗೆ ಕಾರಣವಾಗಿರುವ ಅಂಶವು ರಾಜ್ಯದ ನಿಯಂತ್ರಣ ವ್ಯಾಪ್ತಿಯ ಹೊರಗಿದೆ. ಇದು ವಾಸ್ತವ ಎಂದು ಅಲ್ಲಿನ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿದ್ದಾರೆ.
ತಿರುವನಂತಪುರ: ಕೇರಳ (Kerala) ರಾಜ್ಯವು ಹಿಂದೆಂದೂ ಕಂಡಿರದಂಥ ಭಾರೀ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅಲ್ಲಿನ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ (KN Balagopal) ಮಂಗಳವಾರ ಹೇಳಿದ್ದಾರೆ. ಕೇರಳದ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ಅಸಮರ್ಪಕ ಹಣಕಾಸು ನೀತಿಗಳು, ಕೋವಿಡ್ ಸಾಂಕ್ರಾಮಿಕ ಮತ್ತು ನೈಸರ್ಗಿಕ ವಿಕೋಪಗಳು ಕಾರಣ. ಆದಾಗ್ಯೂ ರಾಜ್ಯ ಸರ್ಕಾರವು ಆರ್ಥಿಕ ಶಿಸ್ತು ರೂಪಿಸಲು ಸ್ಪಷ್ಟವಾದ ರೂಪುರೇಷೆ ಹೊಂದಿದೆ ಎಂದು ಅವರು ಹೇಳಿದ್ದಾರೆ. ಕೇರಳ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಈ ಮಾಹಿತಿ ನೀಡಿದ್ದಾರೆ.
‘ರಾಜ್ಯದ ಆರ್ಥಿಕತೆಯು ಹಿಂದೆಂದೂ ಕಂಡಿರದಂಥ ಬಿಕ್ಕಟ್ಟು ಎದುರಿಸುತ್ತಿರುವುದು ನಿಜ. ಈ ಬಿಕ್ಕಟ್ಟಿಗೆ ಕಾರಣವಾಗಿರುವ ಅಂಶವು ರಾಜ್ಯದ ನಿಯಂತ್ರಣ ವ್ಯಾಪ್ತಿಯ ಹೊರಗಿದೆ. ಇದು ವಾಸ್ತವ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇಂದ್ರದಿಂದ ದೊರೆತ ಕಂದಾಯ ಕೊರತೆ ಅನುದಾನ ಕಡಿಮೆ ಇದೆ. ಕೇಂದ್ರದಿಂದ 6,716 ಕೋಟಿ ರೂ. ಮಾತ್ರ ದೊರೆತಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 17,000 ಕೋಟಿ ರೂ. GST ಪರಿಹಾರ ಹಣ ಬಿಡುಗಡೆ, ಕರ್ನಾಟಕಕ್ಕೆ ಎಷ್ಟು ಬಂತು?
ಸದ್ಯದ ಹಣಕಾಸು ಬಿಕ್ಕಟ್ಟಿಗೆ ರಾಜ್ಯ ಸರ್ಕಾರವು ಸಮರ್ಪಕವಾಗಿ ಹಣಕಾಸು ನಿರ್ವಹಣೆ ಮಾಡದೇ ಇರುವುದು ಕಾರಣವೇ ಎಂಬ ಪ್ರಶ್ನೆಗೆ ಸಚಿವರು ಸೂಕ್ತ ಉತ್ತರ ನೀಡಿಲ್ಲ. ನೈಸರ್ಗಿಕ ವಿಕೋಪಗಳು, ಕೋವಿಡ್ ಸಾಂಕ್ರಾಮಿಕ, ಕೇಂದ್ರ ಸರ್ಕಾರದ ಅಸಮರ್ಪಕ ನೀತಿಗಳು, ಜಿಎಸ್ಟಿ ಪರಿಹಾರ ವಿತರಣೆ ವಿಳಂಬ ಮಾಡಿರುವುದು ರಾಜ್ಯದ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.
ಕಟ್ಟುನಿಟ್ಟಿನ ತೆರಿಗೆ ಸಂಗ್ರಹ, ಅನವಶ್ಯಕ ವೆಚ್ಚ ಕಡಿಮೆ ಮಾಡುವುದು, ವೆಚ್ಚ ಕಡಿತ ಹಾಗೂ ಇತರ ಕಠಿಣ ಕ್ರಮಗಳ ಮೂಲಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಾಲಗೋಪಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ (ನವೆಂಬರ್ 25) ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಬಾಕಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿತ್ತು. ಒಟ್ಟು 75 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಕೇರಳಕ್ಕೆ 713 ಕೋಟಿ ರೂ. ಜಿಎಸ್ಟಿ ಬಾಕಿ ಪರಿಹಾರ ನೀಡಿತ್ತು. ಕೇಂದ್ರ ಸರ್ಕಾರ 2022-23ರ ಸಾಲಿನಲ್ಲಿ ಈವರೆಗೆ ಒಟ್ಟು 1,15,662 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ