ನವದೆಹಲಿ: ಉದ್ಯಮ ಪೂರಕ ವಾತಾವರಣದೊಂದಿಗೆ ಭಾರತದಲ್ಲಿ (India) ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಯೂಟ್ಯೂಬ್ (YouTube) 2021ರಲ್ಲಿ ಜಿಡಿಪಿಗೆ 10,000 ಕೋಟಿ ರೂ. ಕೊಡುಗೆ ನೀಡಿದೆ ಎಂದು ವರದಿಯಾಗಿದೆ. ತಂತ್ರಜ್ಞಾನ ಕಂಪನಿಗಳು, ದೇಶೀಯ ಇಂಟರ್ನೆಟ್ ಸಂಸ್ಥೆಗಳೊಂದಿಗೆ ಪೈಪೋಟಿಗೆ ಇಳಿದಿರುವ ಯೂಟ್ಯೂಬ್ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮದೇ ಚಾನೆಲ್ಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಕ್ರಿಯೇಟರ್ಗಳನ್ನು ಸೆಳೆಯುತ್ತಿದೆ. ಸುಮಾರು 7.5 ಲಕ್ಷ ಪೂರ್ಣಾವಧಿಯ ಉದ್ಯೋಗ ಸೃಷ್ಟಿಸಿದೆ ಎಂದು ಕನ್ಸಲ್ಟಿಂಗ್ ಸಂಸ್ಥೆ ‘ಆಕ್ಸ್ಫರ್ಡ್ ಎಕನಾಮಿಕ್ಸ್’ನ ವರದಿ ತಿಳಿಸಿದೆ. 2020ರ ಮಾರ್ಚ್ 3ರಿಂದ 2022ರ ವರೆಗಿನ ದತ್ತಾಂಶಗಳನ್ನು ಪರಿಗಣಿಸಿಕೊಂಡು ಈ ವರದಿ ಸಿದ್ಧಪಡಿಸಲಾಗಿದೆ.
2020ರಲ್ಲಿ ಯೂಟ್ಯೂಬ್ ವ್ಯವಸ್ಥೆಯು ಭಾರತದ ಜಿಡಿಪಿಗೆ 6,800 ಕೋಟಿ ರೂ. ಕೊಡುಗೆ ನೀಡಿದೆ. 6,83,900 ಪೂರ್ಣಾವಧಿ ಉದ್ಯೋಗ ಸೃಷ್ಟಿಗೆ ನೆರವಾಗಿದೆ ಎಂದು ವರದಿ ತಿಳಿಸಿದೆ.
ಯೂಟ್ಯೂಬರ್ಗಳ ಸೃಷ್ಟಿಗೆ ಪೂರಕ ವಾತಾವರಣದ ಮೂಲಕ ಭಾರತದ ಆರ್ಥಿಕತೆಗೆ ಯೂಟ್ಯೂಬ್ ಬಲ ತುಂಬುತ್ತಿರುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದು ಸಂತಸ ಮೂಡಿಸಿದೆ. ವೀಕ್ಷಕರ ಜತೆ ತೊಡಗಿಸಿಕೊಳ್ಳಲು ಹೊಸ ವಿಧಾನಗಳನ್ನು ಕ್ರಿಯೇಟರ್ಗಳಿಗೆ ನೀಡುವ ಮೂಲಕ ನಾವು ಬಹು ದೂರ ಕ್ರಮಿಸಿದ್ದೇವೆ ಎಂದು ಯೂಟ್ಯೂಬ್ನ ದಕ್ಷಿಣ, ಆಗ್ನೇಯ ಏಷ್ಯಾ ವಿಭಾಗದ ನಿರ್ದೇಶಕ ಅಜಯ್ ವಿದ್ಯಾಸಾಗರ್ ತಿಳಿಸಿದ್ದಾರೆ.
ಇದನ್ನೂ ಓದಿ: No Cost EMI: ನೋ ಕಾಸ್ಟ್ ಇಎಂಐ ಆಯ್ಕೆ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ
ಈ ವರ್ಷ 5,633 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 523 ಉದ್ಯಮಗಳು ಹಾಗೂ 4,021 ಯೂಟ್ಯೂಬ್ ಬಳಕೆದಾರರು ಎಂದು ‘ಆಕ್ಸ್ಫರ್ಡ್ ಎಕನಾಮಿಕ್ಸ್’ ವರದಿ ತಿಳಿಸಿದೆ. 10,000 ಸಬ್ಸ್ಕ್ರೈಬರ್ಗಳನ್ನು ಹೊಂದಿರುವ ಯೂಟ್ಯೂಬರ್ಗಳು ತಮ್ಮ ವಿಡಿಯೊಗಳಿಗೆ ಯೂಟ್ಯೂಬ್ನಿಂದ ಮತ್ತು ಇತರ ಮೂಲಗಳಿಂದ ಆದಾಯ ಗಳಿಸಲು ಯೂಟ್ಯೂಬ್ ಅನುವು ಮಾಡಿಕೊಟ್ಟಿದೆ ಎಂದು ಗೂಗಲ್ ತಿಳಿಸಿದೆ. 10,000ಕ್ಕಿಂತ ಕಡಿಮೆ ಸಬ್ಸ್ಕ್ರೈಬರ್ ಇರುವ ಕೆಲವು ಯೂಟ್ಯೂಬರ್ಗಳಿಗೂ ಆದಾಯ ಗಳಿಸಲು ಅವಕಾಶ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Mon, 19 December 22