ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು

|

Updated on: Mar 15, 2021 | 11:32 PM

ಭಾರತೀಯ ಸೇನಾಪಡೆಯ ಏಳು ಅಧಿಕಾರಿಗಳನ್ನು ಹೊರತುಪಡಿಸಿ 10 ಇತರ ಸಿಬ್ಬಂದಿ ವರ್ಗದವರು ಪ್ರಕರಣದಲ್ಲಿ ಬಾಗಿಯಾಗಿದ್ದಾರೆಂದು ಸಿಬಿಐ ಹೇಳಿದೆ.

ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು
ಸಿಬಿಐ ಕಚೇರಿ
Follow us on

ನವದೆಹಲಿ: ಸೇನಾಪಡೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿರುವ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳವು 23 ಆರೋಪಿಗಳ ಪಟ್ಟಿಯನ್ನು ತಯಾರಿಸಿದ್ದು ಇದರಲ್ಲಿ ಏಳು ಸೇನಾಧಿಕಾರಿಗಳೂ ಸೇರಿದ್ದಾರೆ. ಸಿಬಿಐ ಮೂಲಗಳ ಪ್ರಕಾರ 13 ನಗರಗಳ 30 ಸ್ಥಳಗಳನ್ನು ಅಧಿಕಾರಿಗಳು ಸೋಮವಾರದಂದು ಶೋಧಿಸಿದರು.

ಭಾರತೀಯ ಸೇನಾಪಡೆಯ ಏಳು ಅಧಿಕಾರಿಗಳನ್ನು ಹೊರತುಪಡಿಸಿ 10 ಇತರ ಸಿಬ್ಬಂದಿ ವರ್ಗದವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಸಿಬಿಐ ಹೇಳಿದೆ. ಸೇನಾ ನೇಮಕಾತಿ ಮಂಡಳಿ ಮೂಲಕ ಅಧಿಕಾರಿ ಮತ್ತು ಇತರ ರ‍್ಯಾಂಕಿನ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಇತರ ಅಕ್ರಮಗಳು ನಡೆದಿರುವ ಅರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿ (ಭೂ ಸೇನೆ) ಅಧೀನದ ಹೆಚ್ಚುವರಿ ಮಹಾ ನಿರ್ದೇಶಕ-ಶಿಸ್ತು ಮತ್ತು ಜಾಗೃತಿ, ಅಡ್ಜುಅಂಟ್ ಜನರಲ್ ಅವರ ಶಾಖೆಯಿಂದ ದೂರು ದಾಖಲಾದ ನಂತರ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. 13 ನಗರಗಳ 30 ಸ್ಥಳಗಳಲ್ಲಿ ಇಂದು ನಡೆದ ಶೋಧದಲ್ಲಿ ಬೇಸ್ ಆಸ್ಪತ್ರೆ, ಕಂಟೋನ್ಮೆಂಟ್ ಹಾಗೂ ಸೇನಾ ಮತ್ತು ನಾಗರಿಕ ಪ್ರದೇಶಗಳೂ ಸೇರಿವೆ.

ದೆಹಲಿ, ಲಖನೌ, ಜೈಪುರ, ಗುವಾಹಟಿ, ಕಪುರ್ತಲಾ, ಭಟಿಂಡ, ಕೈತಲ್, ಪಲ್ವಲ್, ಬರೇಲಿ, ಗೊರಖ್​ಪುರ್, ವಿಶಾಖಪಟ್ಟಣಂ, ಜೊರ್ಹಟ್​ ಮತ್ತು ಚಿರಂಗಾವ್ ಸೇರಿದಂತೆ ಮತ್ತೊಂದು ನಗರದಲ್ಲಿ ಸಿಬಿಐ ಅಧಿಕಾರಿಗಳು ಶೋಧನೆ ನಡೆಸಿದರು. ಆರೋಪಗಳನ್ನು ದೃಢಪಡಿಸುವ ಹಲವಾರು ದಾಖಲೆಗಳು ಶೋಧನೆಯ ಸಮಯದಲ್ಲಿ ಸಿಕ್ಕಿದ್ದು ಅವುಗಳನ್ನು ಅಭ್ಯಾಸ ಮಾಡಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ.

ಇದನ್ನೂ ಓದಿ: ಒಂದು ಕೋಟಿ ಲಂಚಕ್ಕೆ ಬೇಡಿಕೆ ಆರೋಪ -CBIನಿಂದ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳ ಬಂಧನ

Published On - 10:22 pm, Mon, 15 March 21