ಹಾಸನ: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಹೇಮಂತ್ ನಾಯಕ್ (23) ಕೊಲೆಯಾದ ಕೊರಿಯರ್ ಬಾಯ್. ಹೇಮಂತ್ ದತ್ತ (20) ಕೊಲೆ ಮಾಡಿದ ಆರೋಪಿ. ಸದ್ಯ ಪೊಲೀಸರು ಆರೋಪಿ ಹೇಮಂತ ದತ್ತನನ್ನು ಬಂಧಿಸಿದ್ದಾರೆ.
ಮೂಲತಃ ಹಳೆಕಲ್ಲನಾಯಕನಹಳ್ಳಿ ಗ್ರಾಮದ ಆರೋಪಿ ಹೇಮಂತ್ ದತ್ತ ಕೂಡ ಡೆಲವರಿ ಬಾಯ್ ಆಗಿದ್ದನು. ಈತನು ಫೆಬ್ರವರಿ 7 ರಂದು 46 ಸಾವಿರಕ್ಕೆ ಆನ್ಲೈನ್ನಲ್ಲಿ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದನು. ಈ ಹಿನ್ನೆಲೆ ಫೆ.10 ರಂದು ಲಕ್ಷ್ನಿಪುರ ಬಡಾವಣೆಯಲ್ಲಿರುವ ಹೇಮಂತ ದತ್ತ ಮೆನೆಗೆ ಐಫೋನ್ ಡೆಲಿವರಿ ಮಾಡಲೆಂದು ಹೇಮಂತ್ ನಾಯಕ್ ಬಂದಿದ್ದನು. ಈ ವೇಳೆ ಹೇಮಂತ್ ದತ್ತ ನನ್ನ ಬಳಿ ಹೆಚ್ಚಿನ ಹಣ ಇಲ್ಲ ಎಂದು ಹೇಳಿದ್ದು, ಹಾಗೇ ಐಫೋನ್ ಬಾಕ್ಸ್ ಓಪನ್ ಮಾಡಲು ಹೇಳಿದ್ದಾನೆ. ಆಗ ಹೇಮಂತ್ ನಾಯಕ್ ಹಣ ನೀಡದೆ ಬಾಕ್ಸ್ ಓಪನ್ ಮಾಡಲ್ಲ ಎಂದಿದ್ದಾನೆ.
ಇದರಿಂದ ಕೋಪಗೊಂಡಿದ್ದ ಆರೋಪಿ ಹೇಮಂತ್ ದತ್ತ, ಹೇಮಂತ್ ನಾಯಕನನ್ನು ಮನೆ ಒಳಗೆ ಕರೆಸಿ ಕೂಡಿಸಿದ್ದಾನೆ. ನಂತರ ನನ್ನ ಸ್ನೇಹಿತ ಹಣ ತರುತ್ತಿದ್ದಾನೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಾನೆ. ಈ ವೇಳೆ ಹೇಮಂತ್ ನಾಯಕ್ ಮೊಬೈಲ್ ನೋಡುತ್ತಾ ಕುಳಿತಿದ್ದನು. ಆಗ ಹೇಮಂತ್ ದತ್ತ ಹಿಂದಿನಿಂದ ಬಂದು ಚಾಕುವಿನಿಂದ ಇರಿದು ಹೇಮಂತ್ ನಾಯಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಗೋಣಿಚೀಲದಲ್ಲಿ ಸುತ್ತಿ 4 ದಿನ ಮನೆಯಲ್ಲಿಟ್ಟಿದ್ದನು.
ಬಳಿಕ ಫೆಬ್ರವರಿ 10 ರ ರಾತ್ರಿ ಬೈಕ್ನಲ್ಲಿ ಶವ ಹೊತ್ತೊಯ್ದು ಅರಸೀಕೆರೆ ನಗರದ ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ಸುಟ್ಟಿರುವ ಆರೋಪ ಕೇಳಿಬಂದಿದೆ. ನಂತರ ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಅರಸೀಕೆರೆ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ