ಊಟ ಮಾಡಿ ಮಲಗಿದ್ದ ವ್ಯಕ್ತಿಯ ಭೀಕರ ಕೊಲೆ ಪ್ರಕರಣ; ಒಡೆದ ಬಳೆ ಚೂರಿನಿಂದ ಆರೋಪಿ ಬಂಧನ

ಕೋಟೆನಾಡು ಚಿತ್ರದುರ್ಗದಲ್ಲಿ ನಡುರಾತ್ರಿ ನಡೆದಿದ್ದ ರಣಭೀಕರ ಕೊಲೆ, ಭಾರೀ ಆತಂಕ ಸೃಷ್ಠಿಸಿತ್ತು. ಸದ್ಯ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಆದ್ರೆ, ಕೊಲೆ ಆರೋಪಿ ಯಾರೆಂದು ತಿಳಿದಾಗ ಖಾಕಿ ಪಡೆಯೇ ಶಾಕ್​ಗೆ ಒಳಗಾಗಿತ್ತು. ಈ ಕುರಿತು ವರದಿ ಇಲ್ಲಿದೆ.

ಊಟ ಮಾಡಿ ಮಲಗಿದ್ದ ವ್ಯಕ್ತಿಯ ಭೀಕರ ಕೊಲೆ ಪ್ರಕರಣ; ಒಡೆದ ಬಳೆ ಚೂರಿನಿಂದ ಆರೋಪಿ ಬಂಧನ
ಮೃತ ವ್ಯಕ್ತಿ
Edited By:

Updated on: Jun 06, 2024 | 6:45 PM

ಚಿತ್ರದುರ್ಗ, ಜೂ.06: ಹೊಳಲ್ಕೆರೆ ತಾಲೂಕಿನ ಕಂಬದ ದೇವರಹಟ್ಟಿ ಗ್ರಾಮದಲ್ಲಿ ನಿನ್ನೆ(ಜೂ.05) ಭೀಕರ ಕೊಲೆ ನಡೆದಿತ್ತು. ಎಂದಿನಂತೆ ರಾತ್ರಿ ಊಟದ ಬಳಿಕ ಮನೆ ಅಂಗಳದಲ್ಲಿ ಮಲಗಿದ್ದ ಕೃಷ್ಣಪ್ಪ(46). ಮದ್ಯರಾತ್ರಿ ವೇಳೆಗೆ ಮಲಗಿದ್ದಲ್ಲೇ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿತ್ತು. ಬಳಿಕ ಯಾರೋ ದುಷ್ಕರ್ಮಿಗಳಿಬ್ಬರು ಕೊಲೆ ಮಾಡಿ ಎಸ್ಕೇಪ್ ಅಗಿದ್ದಾರೆ ಎಂಬುದಾಗಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಒಡೆದ ಬಳೆ ಚೂರಿನಿಂದ ಆರೋಪಿ ಬಂಧನ; ಪತ್ನಿಯೇ ಪತಿಗೆ ಚಟ್ಟ ಕಟ್ಟಿದಳು

ಈ ಬಗ್ಗೆ ಮೃತನ ಸಹೋದರನಿಂದ ದೂರು ಪಡೆದ ಪೊಲೀಸರು, ತನಿಖೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಮೃತನ ಪತ್ನಿ ಕಮಲಮ್ಮ ಕಾಲು, ಕೈಗೆ ರಕ್ತದ ಕಲೆಗಳು ಕಂಡು ಬಂದಿವೆ. ತಲೆ ಮೇಲೆ ಕಲ್ಲು ಹಾಕಲು ಎತ್ತಿಕೊಂಡು ಬರುವಾಗ ಬಳೆ ಚೂರು ಬಿದ್ದಿತ್ತು. ಹೀಗಾಗಿ, ಆರೋಪಿ ಪತ್ನಿ ಕಮಲಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಾಪಿ ಪತ್ನಿ ಸತ್ಯಾಂಶ ಬಾಯಿ ಬಿಟ್ಟಿದ್ದಾಳೆ.

ಇದನ್ನೂ ಓದಿ:ರಾಮನಗರ: ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿ ಶವ ಹೂತಿಟ್ಟ

ಕೊಲೆ ಕಾರಣವೇನು?

ಪತಿ ಕೃಷ್ಣಪ್ಪಗೆ ಅನೈತಿಕ ಸಂಬಂಧವಿತ್ತು, ದುಡಿದಿಟ್ಟಿದ್ದ ಹತ್ತು ಲಕ್ಷ ಹಣವನ್ನ ತನ್ನ ದುಶ್ಚಟಗಳಿಗೆ ಕಳೆದಿದ್ದನು. ಜೊತೆಗೆ ಕುಡಿದು ಬಂದು ಕುಟುಂಬಸ್ಥರಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಓರ್ವ ಪುತ್ರ, ಓರ್ವ ಪುತ್ರಿ ಇದ್ದು, ಮಗಳು ಅಪ್ಪನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಳು. ಹೀಗಾಗಿ, ನಾನೇ ಪತಿಯನ್ನು ಕೊಲೆ ಮಾಡಿದ್ದೇನೆಂದು ಆರೋಪಿ ಕಮಲಮ್ಮ ಒಪ್ಪಿಕೊಂಡಿದ್ದಾಳೆ‌.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಕಂಬದ ದೇವರಹಟ್ಟಿಯಲ್ಲಿ ನಡೆದಿದ್ದ ರಣಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಡಿವೈಎಸ್ಪಿ ದಿನಕರ್, ಇನ್ಸಪೆಕ್ಟರ್ ಸಂತೋಷ್ ನೇತೃತ್ವದ ತಂಡ ಕೊಲೆ ನಡೆದ ಕೆಲ ಹೊತ್ತಿನಲ್ಲೇ ಆರೋಪಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಸಾಕ್ಷ್ಯಾಧಾರ ಸಮೇತ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us