ಬೆಂಗಳೂರಿನಲ್ಲಿ ಗ್ರಾಮಾಂತರ ಎಸ್ಪಿ ಕಚೇರಿ ಆಸ್ತಿಯನ್ನೇ ಮಾರಾಟ ಮಾಡಲು ಯತ್ನ: ಆರೋಪಿಗಳ ಬಂಧನ
ಬೆಂಗಳೂರಿನ ಹೃದಯ ಭಾಗದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆಸ್ತಿ ದಾಖಲೆಯನ್ನು ನಕಲಿ ಮಾಡಿಕೊಂಡಿರೋ ಕೆಲ ಭೂಗಳ್ಳರು ಸದ್ದಿಲ್ಲದೇ ಎಸ್ಪಿ ಕಚೇರಿಯ ಆಸ್ತಿಯನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು, ಜೂನ್ 7: ಬೆಂಗಳೂರು ನಗರದಲ್ಲಿ (Bengaluru) ಖಾಲಿ ಜಾಗ ಕಾಣಿಸಿದರೆ ಸಾಕು. ಯಾರದ್ದೋ ಜಾಗಕ್ಕೆ ಯಾರೋ ಬೇಲಿ ಹಾಕಲು ಮುಂದಾಗುತ್ತಾರೆ. ಇನ್ಯಾರೋ ಬೇಲಿ ಹಾಕ್ತಾರೆ. ಇಂತಹ ಪ್ರಕರಣಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಒಂದು ಸೈಟ್ ತೆಗೆದುಕೊಳ್ಳಬೇಕಾದರೆ ಸಾವಿರ ಸಲ ಯೋಚನೆ ಮಾಡಿ, ದಾಖಲೆಗಳ ಪರಿಶೀಲಿಸಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ, ಖಾಲಿ ಸೈಟ್ಗಳ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡ್ತಿರುವ ಭೂಗಳ್ಳರು ಧೈರ್ಯ ಮಾಡಿ ಸೂಪರಿಡೆಂಟ್ ಆಪ್ ಪೊಲೀಸ್ ಕಚೇರಿಯ (Bengaluru Rural SP Office) ಆಸ್ತಿಯನ್ನೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ನೇಪಾಳ ರಾಜರ ಹೆಸರಿನಲ್ಲಿದೆಯಂತೆ! ಅದೊಂದ್ ಕಡೆ ಸಿವಿಲ್ ಡಿಸ್ಪ್ಯೂಟ್ ಇದೆ. ಇದರ ನಡುವೆ ಎಸ್ಪಿ ಕಚೇರಿಯ ಆಸ್ತಿ ದಾಖಲೆಗಳನ್ನು ನಕಲಿ ಮಾಡಿಕೊಂಡಿರೋ ಕೆಲ ಭೂಗಳ್ಳರು ಸದ್ದಿಲ್ಲದೇ ಎಸ್ಪಿ ಕಚೇರಿಯ ಆಸ್ತಿಯನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ.
ಅದರ ಮೊದಲ ಹಂತವಾಗಿ ಹನೀಫ್ ಎಂಬಾತ ಎಸ್ಪಿ ಕಚೇರಿಯ ಪೋಟೋಗಳು ಹಾಗೂ ವಿಡಿಯೋಗಳನ್ನು ತೆಗೆದು ಗ್ರಾಹಕರಿಗೆ ಶೇರ್ ಮಾಡಲು ಯತ್ನಿಸಿದ್ದಾನೆ. ಅದನ್ನು ಗಮನಿಸಿದ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುವ ವೈರ್ ಲೆಸ್ ವಿಭಾಗದ ಇನ್ಸ್ಪೆಕ್ಟರ್ ಸಂತೋಷ್ ಗೌಡ ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಈ ಜಾಗ ನಮ್ಮದು, ನನ್ನ ಹೆಸರಿಗೆ ಜಿಪಿಎ ಇದೆ ಎಂದು ಅವಾಜ್ ಹಾಕಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಇನ್ಸ್ಪೆಕ್ಟರ್ ಸಂತೋಷ್ ಗೌಡ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿ ಹನೀಫ್ ಸೇರಿದಂತೆ ನಕಲಿ ದಾಖಲೆ ಸೃಷ್ಟಿಸಿ ಎಸ್ಪಿ ಕಚೇರಿ ಆಸ್ತಿಯ ಮಾರಾಟಕ್ಕೆ ಮುಂದಾದ ರಾಜಶೇಖರ್, ಮೊಹಮದ್ ನದೀಮ್, ಮೋಹನ್ ಶೆಟ್ಟಿ ಹಾಗೂ ಗಣಪತಿ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.77 ಕೋಟಿ ರೂ. ಮೌಲ್ಯದ ಚಿನ್ನ ಬೆಂಗಳೂರಿನಲ್ಲಿ ಸೀಜ್: ಇಬ್ಬರ ಬಂಧನ
ಈ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 353, 447 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದಂತೆ ಕೆಲವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೂ ಹೈಗ್ರೌಂಡ್ಸ್ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 am, Fri, 7 June 24