Bengaluru Rain Today: ಬೆಂಗಳೂರು ಸೇರಿ ರಾಜ್ಯಾದ್ಯಂತ ಮುಂದುವರಿದ ಮಳೆ: ಸಿಡಿಲಿಗೆ ಮತ್ತಿಬ್ಬರು ಬಲಿ
Karnataka Rains: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಕೆಲವೆಡೆ ಸಾಧಾರಣ ಮಳೆಯಾದರೆ, ಇನ್ನು ಕೆಲವೆರೆ ವರ್ಷಧಾರೆ ಸುರಿದಿದೆ. ಗದಗ ಮತ್ತು ಕೊಪ್ಪಳದಲ್ಲಿ ಗುರುವಾರ ಸಿಡಿಲು ಬಡಿದು ತಲಾ ಒಬ್ಬರು ಮೃತಪಟ್ಟಿದ್ದಾರೆ.ರಾಜ್ಯದಾದ್ಯಂತ ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ಎಂದು ತಿಳಿಯಲು ಮುಂದೆ ಓದಿ.
ಬೆಂಗಳೂರು, ಜೂನ್ 7: ಬೆಂಗಳೂರು (Bengaluru Rains) ಸೇರಿದಂತೆ ಕರ್ನಾಟಕದ ವಿವಿಧೆಡೆ ಮುಂಗಾರು ಮಳೆಯ (Monsoon Rain) ಅಬ್ಬರ ಭಾರಿ ಜೋರಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ರಿಚ್ಮಂಡ್ ಟೌನ್ ಸೇರಿದಂತೆ ಅನೇಕ ಕಡೆಗಳಲ್ಲಿ ಗುರುವಾರ ತಡರಾತ್ರಿ ಸಾಧಾರಣ ಮಳೆಯಾಯಿತು. ಶುಕ್ರವಾರ ಮುಂಜಾನೆಯೂ ಅನೇಕ ಕಡೆಗಳಲ್ಲಿ ತುಂತುರು ಮಳೆಯಾಯಿತು. ಇನ್ನು ರಾಜ್ಯದ ಇತರ ಕಡೆಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಅಬ್ಬರಿಸಿದೆ.
ಬುಧವಾರವಷ್ಟೇ ಹಾಸನ ಜಿಲ್ಲೆಯಲ್ಲಿ ಸಿಡಿಲಿನಿಂದ ಮೂವರು ಮೃತಪಟ್ಟಿದ್ದರು. ಗದಗ ಜಿಲ್ಲೆಯ ನರಗುಂದ ತಾಲೂಕಿನ ಬಂಡೆಮ್ಮನಗರ ಗ್ರಾಮದ ಬಳಿ ಕುರಿ ಮೇಯಿಸಲು ಹೋಗಿದ್ದ 17 ವರ್ಷದ ಯಲ್ಲಪ್ಪ ಮೃತಪಟ್ಟಿದ್ದಾರೆ. 15 ವರ್ಷದ ಮತ್ತೊಬ್ಬ ಬಾಲಕ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜೆ.ರಾಂಪುರ ಗ್ರಾಮದಲ್ಲಿ ಹೊಲದಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ರತ್ನಮ್ಮ ಓತಗೇರಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಗುರುವಾರ ಸಂಜೆ ದಟ್ಟವಾಗಿ ಮೇಳೈಸಿರುವ ಮೋಡ
Rain bands moving in to our ooru from the southwest 😍#monsoon #mungarumale #bangalorerains #bengalururains@ravikeerthi22 @namma_vjy @Nammahavamana @luru_rains @blrhavaamana @BngWeather pic.twitter.com/jlo7CSGzVc
— RJ (@JoshiRajath) June 6, 2024
ಕೊಪ್ಪಳದ ಹಾಲವರ್ತಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೊಪ್ಪಳ ತಾಲೂಕಿನ ಬಚಿನಾಳ ಗ್ರಾಮದಲ್ಲಿ ಭಾರಿ ಮಳೆಗೆ ಸೇತುವೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.
ಬಾಗಲಕೋಟೆಯ ಕುಳಗೇರಿ ಕ್ರಾಸ್‌ನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ವಸ್ತುಗಳೆಲ್ಲ ನೀರಿನಲ್ಲಿ ತೇಲಿ ಹೋಗಿವೆ. ನಿವಾಸಿಗಳು ರಾತ್ರಿಯೆಲ್ಲಾ ಜಾಗರಣೆ ಮಾಡಿ ಪರದಾಡಿದ್ದಾರೆ.
ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿರುವ ಅಕ್ಕ-ತಂಗಿ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಅಗಸ್ತ್ಯತೀರ್ಥ ಹೊಂಡ ಕೂಡ ಭರ್ತಿಯಾಗ್ತಿದೆ.
ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯ ಜಲಾವೃತವಾಗಿತ್ತು. ಏಕಾಏಕಿ ನೀರು ನುಗ್ಗಿದ್ದರಿಂದ ಭಕ್ತಾದಿಗಳು ಪರದಾಡುವಂತಾಯ್ತು.
ರಾಮದುರ್ಗದ ಮಾಗನೂರಿನಲ್ಲಿ ಮಳೆಯಿಂದಾಗಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿದ್ದರಿಂದ ಮಾಗನೂರಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ: ಟೌನ್ಹಾಲ್, ಕೆಆರ್ ಮಾರ್ಕೆಟ್ ಸೇರಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ ಮಳೆ, ಹಾಸನದಲ್ಲಿ ಮೂವರು ಸಾವು
ಕೋಲಾರದ ಮಾಲೂರು ತಾಲೂಕಿನ ಹುಣಸಿನ ಕೋಟೆಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮತ್ತೊಂದೆಡೆ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು.
ಚಾಮರಾಜನಗರದ ಅಂಡಿಪಾಳ್ಯ ಬಳಿ ಜಡೆತಡಿ ಹಳ್ಳ ಉಕ್ಕಿ ಹರಿದಿದೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬಿಟ್ಟು ಬಿಟ್ಟು ಬರ್ತಿರುವ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧ್ವಾನ, ಅವಾಂತರಗಳಾಗಿವೆ.
ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ