ತಂಗಿ ತಂಟೆಗೆ ಬರಬೇಡ ಎಂದಿದ್ದಕ್ಕೆ ಅಪ್ಪನ ಮೇಲೆ ಹಲ್ಲೆ: ತಂದೆಯನ್ನು ಉಳಿಸಲು ಬಂದ ಮಗನನ್ನೇ ಕೊಂದ್ರು!

| Updated By: ರಮೇಶ್ ಬಿ. ಜವಳಗೇರಾ

Updated on: Nov 16, 2022 | 10:36 PM

ಮನೆಗೆ ಆಧಾರವಾಗಬೇಕಿದ್ದ ಮಗನನ್ನು ದುಷ್ಕರ್ಮಿಗಳು ಬರ್ಬರ ಕೊಲೆ ಮಾಡಿದ್ದಾರೆ. ತನ್ನ ಸಂಬಂಧಿ ಯುವತಿಯ ತಂಟೆಗೆ ಬಾರದಂತೆ ಹೇಳಿದ್ದೆ, ಯುವಕನ ಕೊಲೆಗೆ ಕಾರಣವಾಗಿದೆ.

ತಂಗಿ ತಂಟೆಗೆ ಬರಬೇಡ ಎಂದಿದ್ದಕ್ಕೆ ಅಪ್ಪನ ಮೇಲೆ ಹಲ್ಲೆ: ತಂದೆಯನ್ನು ಉಳಿಸಲು ಬಂದ ಮಗನನ್ನೇ ಕೊಂದ್ರು!
ಮೊಹಮ್ಮದ್ ಮುದ್ದಸೀರ್
Follow us on

ಕಲಬುರಗಿ:  ಆತ ಕಂಪ್ಯೂಟರ್ ಸೈನ್ಸ್​ ವಿದ್ಯಾರ್ಥಿ. ಬಡ ಕುಟುಂಬದ ಆ ಯುವಕ ಹತ್ತಾರು ಕನಸು ಕಂಡಿದ್ದ. ಚೆನ್ನಾಗಿ ದುಡಿದು ತಂದೆ ಜವಾಬ್ದಾರಿ ಕಡಿಮೆ ಮಾಡಬೇಕು ಅಂದ್ಕೊಂಡಿದ್ದ. ಆದ್ರೆ, ಅವನ ಕನಸುಗಳೆಲ್ಲ ಕಮರಿ ಹೋಗಿವೆ. ದುಷ್ಟರಿಂದ ತಂದೆಯನ್ನು ಕಾಪಾಡಲು ಹೋದವನೇ ಬಲಿಯಾಗಿದ್ದಾನೆ. ಕಲಬುರಗಿ ನಗರದ ಬೌಲಿಗಲ್ಲಿಯಲ್ಲಿ ನಡೆದಿರುವ ಘಟನೆ ನಡೆದಿದ್ದು, ಈ ಸಂಬಂಧ ರೋಜಾ ಪೊಲೀಸರು ಆರೋಪಿ ಆಮೀರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

Murder: ರೆಸಾರ್ಟ್​ನಲ್ಲಿ ಯುವತಿಯ ಕತ್ತು ಸೀಳಿ, ಶವದೊಂದಿಗೆ ವಿಡಿಯೋ ಮಾಡಿದ ಕೊಲೆಗಾರ!

ತಾವಾಯ್ತು ತಮ್ಮ ಕೆಲಸವಾಯ್ತು ಅಂತಿದ್ರು. ಕೂಲಿ ನಾಲಿ ಮಾಡುತ್ತಲೇ ಬದುಕಿನ ಕನಸು ಕಾಣ್ತಿದ್ರು.. ಆದ್ರೆ, ಪಾಪಿಗಳ ಅಟ್ಟಹಾಸ ಇವರ ಖುಷಿಗೆ ಕೊಳ್ಳಿ ಇಟ್ಟಿದೆ.ಯಾಕಂದ್ರೆ, ಮನೆಗೆ ಆಧಾರ ಆಗಬೇಕಿದ್ದ ಯುವಕನನ್ನೇ ಕ್ರಿಮಿಗಳು ಕೊಂದಿದ್ದಾರೆ.  19 ವರ್ಷದ ಮೊಹಮ್ಮದ್ ಮುದ್ದಸೀರ್ ಹತ್ಯೆಯಾದ ಯುವಕ.

ಕಂಪ್ಯೂಟರ್​ ಸೈನ್ಸ್ ಓದುತ್ತಿದ್ದ ಮುದ್ದಸೀರ್ . ಕೂಲಿ ಕೆಲಸ ಮಾಡ್ತಿದ್ದ ತಂದೆ ಅಬ್ದುಲ್ ರಹಿಂ, ಮಗನ್ನನ್ನ ಕಷ್ಟಪಟ್ಟು ಓದಿಸುತ್ತಿದ್ದರು. ಆದ್ರೆ, ನಿನ್ನೆ(ನ.15) ಸಂಜೆ ಅಬ್ದುಲ್ ಮೇಲೆ ಮೂರ್ನಾಲ್ಕು ಮಂದಿ ಅಟ್ಯಾಕ್ ಮಾಡಿದ್ದಾರೆ. ಈ ವಿಚಾರ ಗೊತ್ತಾಗ್ತಿದ್ದಂತೆ ಮುದ್ದಸೀರ್ ಅಲ್ಲಿಗೆ ಓಡಿದ್ದಾನೆ. ಈ ವೇಳೆ ಮುದ್ದಸೀರ್ ಗೆ ಅಮೀರ್ ಎಂಬಾತ ಚಾಕು ಇರಿದಿದ್ದಾನೆ. ಕೂಡಲೇ ಮುದ್ದಸೀರ್​​​ನನ್ನ ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರೆ, ದುರದೃಷ್ಟವಶಾತ್, ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾನೆ.

ಇಡೀ ಕುಟುಂಬಕ್ಕೆ ಕುಟುಂಬವೇ ಕಂಗಾಲಾಗಿದೆ. ಮನೆಗೆ ಆಧಾರವಾಗಬೇಕಿದ್ದ ಮಗ, ಬರ್ಬರ ಕೊಲೆಯ ಸುದ್ದಿ ಕೇಳಿ, ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕುಟುಂಬದವರು ತಾವು ಕೂಲಿ ಕೆಲಸ ಮಾಡಿದ್ರು ಚಿಂತೆಯಿಲ್ಲಾ, ಮಗ ಚೆನ್ನಾಗಿರಲಿ ಅಂತ ಅಂದುಕೊಂಡಿದ್ದರು. ಆದ್ರೆ ಬಾಳಿ ಬದುಕಬೇಕಿದ್ದ ಮಗ, ಸಣ್ಣ ವಯಸ್ಸಿಗೆ ಬಾರದ ಲೋಕಕ್ಕೆ ಹೋದನಲ್ಲ, ಮುಂದೆ ತಮಗೆ ದಿಕ್ಯಾರು ಎಂದು ಕುಟುಂಬದವರು ರೋದಿಸುತ್ತಿದ್ದಾರೆ.

ಇನ್ನು ಮುದ್ದಸೀರ್ ಕೊಲೆಗೆ ಕಾರಣವಾಗಿದ್ದು ಯುವತಿ ವಿಚಾರವಂತೆ. ಮುದ್ದಸೀರ್ ಸಂಬಂಧಿಯಾಗಿರುವ ಓರ್ವ ಯುವತಿಯನ್ನು ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿ ಆಮೀರ್ ಅನ್ನೋನು ಪ್ರೀತಿಸುತ್ತಿದ್ದನಂತೆ. ಇದು ಗೊತ್ತಾಗುತ್ತಿದ್ದಂತೆ ಯುವತಿ ತಂದೆಯ ಜೊತೆಗೆ ಆಮೀರ್ ಮನೆಗೆ ಹೋಗಿದ್ದ ಮುದ್ದಸೀರ್, ತನ್ನ ಸಹೋದರಿಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದನಂತೆ. ನಿನ್ನೆ ಕೂಡಾ ಆಮೀರ್ ಯುವತಿಗೆ ಪೋನ್ ಗೆ ಕರೆ ಮಾಡಿದ್ದನಂತೆ. ಪದೇ ಪದೇ ಕರೆ ಮಾಡುವದು ಮಾಡ್ತಿದ್ದರಿಂದ ನಿನ್ನೆ ಮುದ್ದಸೀರ್ ತಂದೆ ಮತ್ತೆ ಬುದ್ದಿ ಹೇಳಲು ಆಮೀರ್ ನನ್ನು ಹುಡುಕಾಡಿದ್ದರು. ಸಂಜೆ ಸಮಯದಲ್ಲಿ ಸಿಕ್ಕಾಗ, ತಮ್ಮ ಕುಟುಂಬದ ಯುವತಿ ತಂಟೆಗೆ ಬರದಂತೆ ಬುದ್ದಿ ಹೇಳಲು ಮುಂದಾಗಿದ್ದರು. ಆದ್ರೆ ತನ್ನ ಪ್ರೀತಿಗೆ ಅಡ್ಡಿ ಬರ್ತಿದ್ದಾರೆ ಎಂದು ಆಮೀರ್ ಅಬ್ದುಲ್ ರಹೀಂ ಮೇಲೆ ಅಟ್ಯಾಕ್ ಮಾಡಿದ್ದ. ದುಷ್ಕರ್ಮಿಗಳಿಂದ ತಂದೆಯನ್ನು ಕಾಪಾಡಲು ಬಂದ ಮಗ ಕೊಲೆಯಾಗಿದ್ದಾನೆ.

ಮುದ್ದಸೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ನಡೆದ ಹನ್ನೆರಡು ಗಂಟೆಯಲ್ಲಿ ಆರೋಪಿ ಆಮೀರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಇನ್ನು ಕೆಲ ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಲಬುರಗಿ ನಗರದಲ್ಲಿ ಮತ್ತೆ ಕೊಲೆಗಳು ಹೆಚ್ಚಾಗುತ್ತಿದ್ದು, ಪೊಲೀಸರು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ.

ವರದಿ: ಸಂಜಯ್,ಟಿವಿ9 ಕಲಬುರಗಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Wed, 16 November 22