ಧಾರವಾಡ: ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಜನರು ಸಾವನ್ನಪ್ಪಿರುವಂತಹ ಭೀಕರ ರಸ್ತೆ ಅಪಘಾತವು ತಾಲೂಕಿನ ಬಾಡ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಮಹೇಶ್ವರಯ್ಯ(11), ಶಂಭುಲಿಂಗಯ್ಯ(35) ಮೃತಪಟ್ಟವರು. 4 ಜನರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಗದಿ ಗ್ರಾಮದ ಯುವಕನ ನಿಶ್ಚಿತಾರ್ಥ ಮುಗಿಸಿಕೊಂಡು ಮನ್ಸೂರು ಗ್ರಾಮದಿಂದ ಬೆನಕಟ್ಟಿಗೆ ಹಿಂದಿರುಗುವಾಗ ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಭೀಕರ ಅಪಘಾತ ನಡೆದಿದ್ದು, ಕ್ರೂಸರ್ ಚಾಲಕನ ಅಜಾಗರೂಕತೆಯೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಮಳೆಯಿಂದಾಗಿ ಮನ್ಸೂರು ರೇವಣಸಿದ್ದೇಶ್ವರ ಮಠಕ್ಕೆ ಮದುವೆ ಸ್ಥಳಾಂತರಿಸಿದ್ದರು. ಮದುವೆ ಮುನ್ನ ದಿನ ನಿಶ್ಚಿತಾರ್ಥಕ್ಕೆ ಸಂಬಂಧಿಕರು ತೆರಳಿದ್ದರು. ಇಂದು ಮದುವೆ ನಡೆಯಬೇಕಾಗಿತ್ತ. ಆದರೆ ಆಘಾತದಿಂದ ಸಂಬಂಧಿಕರು ಕಲ್ಯಾಣ ಮಂಟಪದ ಕಡೆಗೆ ಬರುತ್ತಿಲ್ಲ. ಸಂಭ್ರಮದ ಬದಲಿಗೆ ಮದುವೆ ನಡೆಯಬೇಕಾದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ. ಅಪಘಾತ ಸ್ಥಳಕ್ಕೆ ಎಸ್ಪಿ ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಸಂಖ್ಯೆ 9ಕ್ಕೇರಿಕೆ ಏರಿಕೆ
ಅಪಘಾತದ ಮೃತರ ಸಂಖ್ಯೆ 9ಕ್ಕೇರಿಕೆ ಏರಿಕೆಯಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚನ್ನವ್ವ(45) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬಾ ಗ್ರಾಮದ ನಿವಾಸಿ.
ಇದನ್ನೂ ಓದಿ: ಒಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ; ಒಂದು ವಾರಕ್ಕೆ ಆದ ವೀಕ್ಷಣೆ ಎಷ್ಟು?
ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ಹೇಳಿಕೆ ನೀಡಿದ್ದು, ಅಪಘಾತಕ್ಕೀಡಾದ ಕ್ರೂಸರ್ನಲ್ಲಿ 13 ಜನ ಪ್ರಯಾಣಿಸುತ್ತಿದ್ದರು. ಕ್ರೂಸರ್ನಲ್ಲಿದ್ದ 13 ಜನರ ಪೈಕಿ 7 ಜನರು ಮೃತಪಟ್ಟಿದ್ದಾರೆ. 6 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿಕೊಂಡು ತೆರಳುತ್ತಿದ್ರು. ಮನ್ಸೂರಿನಿಂದ ಬೆನಕಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಮರಕ್ಕೆ ಡಿಕ್ಕಿಯಾಗಿತ್ತು. ಘಟನೆ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಲ್ಯಾಣ ಮಂಟಮದ ಅಡುಗೆ ಕೋಣೆಯಲ್ಲೂ ಸಶ್ಮಾನ ಮೌನ
ಈ ಭೀಕರ ದುರಂತ ಸಂಭವಿಸಿರಲಿಲ್ಲ ಅಂದ್ರೆ ಇಷ್ಟೊತ್ತಿಗೆ ಅಡುಗೆ ರೆಡಿ ಇರುತ್ತಿತ್ತು. ಮದುವೆಗೆ ೬೦೦ ಕ್ಕೂ ಹೆಚ್ಚು ಜನರಿಗೆ ಊಟಕ್ಕೆ ಹೇಳಿದ್ದರು. ಅದಕ್ಕಾಗಿ ಎಲ್ಲವನ್ನೂ ರೆಡಿ ಮಾಡಿದ್ದೆವು ಎಂದು ಟಿರ್ವಿಗೆ ಅಡುಗೆ ಬಸಣ್ಣೆಪ್ಪ ಹೇಳಿಕೆ ನೀಡಿದ್ದಾರೆ. ಆದ್ರೆ ಬೆಳಂಬೆಳಿಗ್ಗೆ ಈ ಅಪಘಾತ ನಡೆದಿದೆ. ಬೆಳಿಗ್ಗೆ ೩:೩೦ ವರೆಗೆ ನಮಗೆ ಅಡುಗೆ ಬೇಡ ಅಂದ್ರು. ಕಲ್ಯಾಣ ಮಂಟಮದ ಅಡುಗೆ ಕೋಣೆಯಲ್ಲೂ ಸಶ್ಮಾನ ಮೌನ ಆವರಿಸಿದೆ ಎಂದರು. ಮದುವೆ ಕಾರ್ಯಕ್ರಮ ರದ್ದಾದ ಹಿನ್ನೆಲೆ ಎಲ್ಲ ಸಾಮಗ್ರಿ ತೆಗೆದುಕೊಂಡು ಬಾಣಸಿಗರು ಹೋಗುತ್ತಿದ್ದಾರೆ. ಅಡುಗೆ ಪಾತ್ರೆ, ಕಿರಾಣಿ ಸಾಮಗ್ರಿ ಸಂಭ್ರಮದಲ್ಲಿರಬೇಕಾಗಿದ್ದವರಿಗೆ ನೋವುಂಟ್ಟಾಗಿದೆ. ಮನ್ಸೂರು ಗ್ರಾಮದ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ದೃಶ್ಯ ಕಂಡುಬಂದಿದೆ.
ನಿನ್ನೆ ಮಧ್ಯಾಹ್ನ ಮಠಕ್ಕೆ ವರನ ಸಂಬಂಧಿಕರು ಬಂದಿದ್ದರು. ಮಳೆ ಹಿನ್ನೆಲೆಯಲ್ಲಿ ಮದುವೆ ಶಿಫ್ಟ್ ಮಾಡೋದಾಗಿ ಹೇಳಿ, ನನಗೆ ಮನವಿ ಮಾಡಿಕೊಂಡರು ಎಂದು ಬಸವರಾಜ, ರೇವಣಸಿದ್ಧೇಶ್ವರ ಮಠದ ಸ್ವಾಮೀಜಿ ಟಿವಿ-೯ ಗೆ ಹೇಳಿಕೆ ನೀಡಿದ್ದಾರೆ. ಅನಿವಾರ್ಯವಾಗಿ ನಾನು ಒಪ್ಪಿಕೊಂಡಿದ್ದೆ. ಇದು ಅತ್ಯಂತ ಭೀಕರ ಘಟನೆ. ಇಂಥದ್ದು ನಡೆಯಬಾರದಿತ್ತು. ಚಾಲಕನ ಬೇಜವಾಬ್ದಾರಿಯಿಂದ ಘಟನೆ ನಡೆದಿದೆ ಎಂದು ಹೇಳಿದರು.
ಪೋಷಕರ ಆಕ್ರಂದನ
ಮದುವೆಗೆ ಮುಂಚೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ನಡೆದ ಘಟನೆಯ ನೆನೆದು ಕಣ್ಣೀರು ಹಾಕಿದ್ದು ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳನ್ನು ನೆನೆದು ತಂದೆ ಬಸವರಾಜ್ ಕಣ್ಣೀರು ಹಾಕಿದ್ದಾರೆ. ಮೃತ ಮಹೇಶ್ವರ (11) ತಾಯಿ ಅನ್ನಪೂರ್ಣ ಕಣ್ಣೀರ ಕೊಡಿ ಹರಿಸಿದ್ದಾರೆ. ಇನ್ನೂ ಮೊಮ್ಮಗಳು ಅನನ್ಯ ನೆನೆದು ತಾತ ಗುರುಸಿದ್ದಪ್ಪ ಕಣ್ಣೀರು ಹಾಕಿದ್ದಾರೆ. ಇತ್ತೀಚಿಗೆ ಅನನ್ಯ ಯೋಗ ಪ್ರದರ್ಶನ ನೀಡಿದ್ದನ್ನು ಸ್ಮರಿಸಿ ಆಕ್ರಂದನ. ಪ್ರತಿಭಾವಂತೆ ಮೊಮ್ಮಗಳು ಅನನ್ಯ ಕಳಕೊಂಡು ಕುಟುಂಬ ಅನಾಥವಾಗಿದೆ. ಧಾರವಾಡ ಜಿಲ್ಲಾಸ್ಪತ್ರೆಯ ನಾಲ್ಕು ಮೃತದೇಹಗಳು ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:36 am, Sat, 21 May 22