ಬಿಳಿಯರೇ ಶ್ರೇಷ್ಠರು, ಕಪ್ಪು ವರ್ಣೀಯರು ತುಚ್ಛರು ಎಂಬ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅದನ್ನು ಪೋಷಿಸುತ್ತಾ ಅದರೊಂದಿಗೆ ತಾನೂ ಬೆಳೆದ ಅಮೆರಿಕದ ಹದಿಹರೆಯದ ಯುವಕನೊಬ್ಬ ಕಪ್ಪು ಜನರ ಮೇಲೆ ಗುಂಡಿನ ದಾಳಿ ನಡೆಸಿ ಅವರ ಪೈಕಿ 10 ಜನರನ್ನು ಕೊಂದು ಮೂವರನ್ನು ಗಾಯಗೊಳಿಸಿದ್ದನ್ನು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾನೆ. ನ್ಯೂ ಯಾರ್ಕ್ (New York) ನಗರದ ಬಿಂಗ್ಹ್ಯಾಮ್ಟನ್ ನಲ್ಲಿರುವ ತನ್ನ ಮನೆಯಿಂದ ಹತ್ಯೆ ನಡೆಸಿದ ಸ್ಥಳಕ್ಕೆ ಮೂರು ಗಂಟೆ ಕಾಲ ಡ್ರೈವ್ ಮಾಡಿಕೊಂಡು ಹೋಗುವ ಮೊದಲು 19-ವರ್ಷ-ವಯಸ್ಸಿನ ಪೇಟನ್ ಗೆಂಡ್ರಾನ್ (Payton Gendron) ಆನ್ಲೈನ್ ನಲ್ಲಿ ಒಂದು ರೇಸಿಸ್ಟ್ ಪ್ರಣಾಳಿಕೆಯನ್ನು (racist manifesto) ಅಪ್ಲೋಡ್ ಮಾಡಿದ್ದ.
ಈ ಸಾಮೂಹಿಕ ಹತ್ಯಾಕಾಂಡ ನಡೆದಿದ್ದು ಮೇ 2022 ರಂದು ಬುಫ್ಯಾಲೊದಲ್ಲಿರುವ ಟಾಪ್ ಫ್ರೆಂಡ್ಲಿ ಮಾರ್ಕೆಟ್ಸ್ ಸ್ಟೋರ್ ನಲ್ಲಿ. ಅಲ್ಲಿಗೆ ತಲುಪಿದ ಮೇಲೆ ಪೇಟನ್ ಗೆಂಡ್ರಾನ್ ತನ್ನಲ್ಲಿದ್ದ ಎಅರ್-15 ಶೈಲಿ ಸೆಮಿ ಆಟೋಮ್ಯಾಟಿಕ್ ಅಸ್ಸಾಲ್ಟ್-ಶೈಲಿಯ ರೈಫಲ್ ನಿಂದ ಗುಂಡಿನ ಸುರಿಮಳೆಗೈದಿದ್ದ. ಅವನಿಗೆ ಬಲಿಯಾದ ಮತ್ತು ಗಾಯಗೊಂಡವರಲ್ಲಿ 11 ಜನ ಕಪ್ಪು ವರ್ಣೀಯರಾಗಿದ್ದರು. ಆ ಪ್ರದೇಶದಲ್ಲಿ ಕಪ್ಪು ಜನಾಂಗದವರು ಅತ್ಯಧಿಕ ಸಂಖ್ಯೆಯಲ್ಲಿ ವಾಸವಾಗಿದ್ದು ಗೊತ್ತಿದ್ದರಿಂದ ದಾಳಿ ನಡೆಸಲು ಅದನ್ನು ಆಯ್ದುಕೊಂಡಿದ್ದೆ ಎಂದು ಅವನು ಹೇಳಿದ್ದಾನೆ.
ಅವನಿಂದ ಹತ್ಯೆಗೊಳಗಾದ ಜನರ ಕುಟುಂಬಗಳ ಸದಸ್ಯರು ದುಃಖಿಸುತ್ತಿದ್ದುದನ್ನು ಕಂಡು ಜಡ್ಜ್ ಸೂಸಾನ್ ಈಗರ್ ಅವರು ‘ಇದೊಂದು ಅತ್ಯಂತ ಯಾತನಾಮಯ ಮತ್ತು ಘೋರ ದುಃಖಕರ ಘಟನೆ ಅಂತ ಬಲ್ಲೆ,’ ಎಂದರು.
ಪೇಟನ್ ಗೆಂಡ್ರಾನ್ ಗೆ ಬಲಿಯಾದವರಲ್ಲಿ 20 ರಿಂದ ಹಿಡಿದು 86 ವರ್ಷದ ವೃದ್ಧರು ಸೇರಿದ್ದರು. ತನ್ನ ವಿರುದ್ಧ ಮಾಡಿದ ಎಲ್ಲ ಆರೋಪಗಳನ್ನು ಗೆಂಡ್ರಾನ್ ಅಂಗೀಕರಿಸಿದ್ದಾನೆ. ಅವನೆಸಗಿದ ಅಪರಾಧಗಳಲ್ಲಿ ಕೊಲೆ, ದ್ವೇಷ, ಮತ್ತು ದ್ವೇಷ ಉತ್ತೇಜಿತ ಡೊಮೆಸ್ಟಿಕ್ (ದೇಶೀಯ) ಭಯೋತ್ಪಾದನೆ ಸೇರಿವೆ.
ನ್ಯೂಯಾರ್ಕ್ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ್ವೇಷದಿಂದ ಪ್ರೇರಿತ ದೇಶೀಯ ಭಯೋತ್ಪಾದನೆಯ ಆರೋಪದಲ್ಲಿ ವ್ಯಕ್ತಿಯೊಬ್ಬ ದೋಷಿಯೆಂದು ಸಾಬೀತಾಗಿದೆ.
ಗೆಂಡ್ರಾನ್ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪಣೆ ಪಟ್ಟಿಯು ಅವನಿಗೆ ಒಂದಾದ ನಂತರ ಒಂದರಂತೆ ಪರೋಲ್ ರಹಿತ 10 ಆಜೀವ ಸೆರೆವಾಸದ ಶಿಕ್ಷೆಗಳಿಗೆ ಗುರಿಮಾಡುತ್ತದೆ. ಅದಲ್ಲದೆ, ಮೂವರನ್ನು ಗಂಭೀರವಾಗಿ ಗಾಯಗೊಳಿಸಿದ್ದಕ್ಕೆ ಅವನಿಗೆ ಹೆಚ್ಚುವರಿ ಶಿಕ್ಷೆಯೂ ಆಗಲಿದೆ.
ಹದಿಹರೆಯದ ಈ ಸಾಮೂಹಿಕ ಹಂತಕ ಒಂದು ಶೋಷಿತ ಸಮುದಾಯದ ಮೇಲೆ ನಡೆಸಿದ ದೌರ್ಜನ್ಯವನ್ನು ಲೈವ್-ಸ್ಟ್ರೀಮ್ ಮಾಡಿದ್ದ.
‘ಪ್ರತಿವಾದಿಯು, ಕೇವಲ ಎರಡೇ ನಿಮಿಷಗಳಲ್ಲಿ ತನಗೆ ಸಾಧ್ಯವಾಗುವಷ್ಟು ಆಫ್ರಿಕನ್ ಅಮೆರಿಕನ್ನರನ್ನು ಕೊಲ್ಲುವ ಉದ್ದೇಶದೊಂದಿಗೆ, 10 ಅಮಾಯಕ ಕಪ್ಪು ಜನರನ್ನು ಕೊಂದು ಇತರ ಮೂವರನ್ನು ಕೊಲ್ಲಲು ಪ್ರಯತ್ನಿಸಿದ,’ ಎಂದು ಎರಿ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಜಾನ್ ಫ್ಲಿನ್ ಹೇಳಿದರು.
ಗೆಂಡ್ರಾನ್ ವಿರುದ್ಧ ಪುರಾವೆಗಳನ್ನು ಪ್ಲಿನ್ ಕೋರ್ಟ್ನಲ್ಲಿ ಹಾಜರುಪಡಿಸುತ್ತಿದ್ದಂತಯೇ, ಪ್ರತಿವಾದಿಯಲ್ಲಿ ಅಡಗಿದ್ದ ಜನಾಂಗೀಯ ದ್ವೇಷದ ಕಡೆ ಅವರು ನ್ಯಾಯಾಲಯದ ಗಮನಸೆಳೆದರು. ‘ಕೊಲೆಗಾರ ಬಿಳಿಯ ವ್ಯಕ್ತಿಯೊಬ್ಬನ ಬಳಿ ತಾನು ಮೇನಲ್ಲಿ ಕೊಂದವರಲ್ಲಿ ಇಬ್ಬರು ಬಿಳಿಯರು ಕೂಡ ಸೇರಿದ್ದರೆಂದು ಕ್ಷಮೆಯಾಚಿಸುತ್ತಿರುವುದನ್ನು ಸ್ಟ್ರೀಮ್‌ನಲ್ಲಿ ಕೇಳಿಸಿಕೊಳ್ಳಬಹುದು,’ ಎಂದರು
‘ಈ ನಿರ್ಣಾಯಕ ಹೆಜ್ಜೆಯು ಮೇ 14 ರಂದು ಅವನು ಎಸಗಿದ ಭಯಾನಕ ಕೃತ್ಯಗಳಿಗೆ ಉತ್ತೇಜನ ನೀಡಿದ ಜನಾಂಗೀಯ ಸಿದ್ಧಾಂತದ ಖಂಡನೆಯನ್ನು ಪ್ರತಿನಿಧಿಸುತ್ತದೆ. ಫೆಬ್ರವರಿ 15 ರಂದು ಪೆರೋಲ್‌ನ ಸಾಧ್ಯತೆಯಿಲ್ಲದ ಜೀವಾವಧಿ ಶಿಕ್ಷೆಗೆ ಅವನು ಒಳಗಾಗುವ ಮೊದಲು, ಬದುಕುಳಿದಿರುವ ಸಂತ್ರಸ್ತರು ಮತ್ತು ಮೃತ ದುರ್ದೈವಿಗಳ ಕುಟುಂಬ ಸದಸ್ಯರು ನ್ಯಾಯಾಲಯ, ಸಮುದಾಯ ಮತ್ತು ನನ್ನ ಕಕ್ಷಿದಾರನನ್ನು ನೇರವಾಗಿ ಸಂಪರ್ಕಿಸುವ ಅವಕಾಶ ಹೊಂದಿದ್ದಾರೆ’ ಎಂದು ಗೆಂಡ್ರಾನ್ ಪರ ವಕೀಲ ಬ್ರಿಯಾನ್ ಪಾರ್ಕರ್ ಹೇಳಿದರು.
ಗೆಂಡ್ರಾನ್ ಬಗ್ಗೆ ಸಲ್ಲದ ಕನಿಕರ ವ್ಯಕ್ತಪಡಿಸಲಾಗುತ್ತಿದೆ ಮತ್ತು ಅವನು ಎಸಗಿದ ಘೋರ ಅಪರಾಧಗಳ ಬಗ್ಗೆ ಮೃದು ಧೋರಣೆ ತಾಳಲಾಗಿದೆ ಎಂದು ಬಲಿಯಾದ ಜನರ ಕುಟುಂಬಸ್ಥರು ತಮ್ಮ ವೇದನೆ ಹಾಗೂ ಅಸಮಾಧಾನ ಹೊರಹಾಕಿದರು.
‘ಒಬ್ಬ 6 ನೇ ಗ್ರೇಡ್ ವಿದ್ಯಾರ್ಥಿಯೊಂದಿಗೆ ಮಾತಾಡುವ ಹಾಗೆ ನ್ಯಾಯಾಧೀಶರು ಗೆಂಡ್ರಾನ್‌ಗೆ ಸಂಬೋಧಿಸುತ್ತಿದ್ದಿದ್ದ್ದು ಕಂಡು ಕೋಪವುಕ್ಕಿ ಮೈ ಪರಚಿಕೊಳ್ಳುವಂತಾಗಿತ್ತು,’ ಎಂದು ದಾಳಿಯಲ್ಲಿ ಬಲಿಯಾದ ಜೆರಾಲ್ಡಿನ್ ಟ್ಯಾಲಿ ಅವರ 33-ವರ್ಷದ ಮಗ ಮಾರ್ಕ್ ಟ್ಯಾಲಿ ಹೇಳಿದರು.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ