ಬಳ್ಳಾರಿ: ಅಕ್ಕಿ ವ್ಯಾಪಾರಿ ಮಂಜುನಾಥನ ಹತ್ಯೆ ಪ್ರಕರಣವನ್ನು ಬೇಧಿಸಿದ ಕೌಲಬಜಾರ್ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥನ ಹತ್ಯೆಗೆ 10 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಅದರಂತೆ ಹತ್ಯೆ ಮಾಡಲು ಸಜ್ಜಾದ ಹಂತಕರು, 50 ಸಾವಿರ ರೂಪಾಯಿ ಅಡ್ವಾನ್ಸ್ ಸಿಗುತ್ತಿದ್ದಂತೆ ಮಚ್ಚು ಬೀಸಿ ಆತನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದು ಪರಾರಿಯಾಗಿದ್ದರು. ಪೊಲೀಸ್ ವಿಚಾರಣೆ ವೇಳೆ ಹಂತಕರು ಈ ಸ್ಫೋಟಕ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅಡ್ವಾನ್ಸ್ ಹಣವನ್ನ ಪಡೆದ ಹಂತಕರು ಸೆಪ್ಟೆಂಬರ್ 28ರಂದು ಬಳ್ಳಾರಿಯ ರೇಡಿಯೋ ಪಾರ್ಕ್ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯದ ಅಂಗಳದ ಮುಂದೆ ಇರುವ ರಸ್ತೆಯಲ್ಲಿ ಮಧ್ಯರಾತ್ರಿ ಹೊಂಚು ಹಾಕಿ ಕುಳಿತಿದ್ದರು. ಅದರಂತೆ ಅನ್ನಭಾಗ್ಯ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮಂಜುನಾಥ ಅಲಿಯಾಸ್ ಕುಂಟ ಮಂಜ ಕಾರಿನಿಂದ ಇಳಿಯುತ್ತಿದ್ದಂತೆ ದಾಳಿ ನಡೆಸಿದ ಹಂತಕರು ನಡುರಸ್ತೆಯಲ್ಲೇ ಕೊಚ್ಚಿ ಕೊಂದುಬಿಟ್ಟಿದ್ದಾರೆ.
ಅನ್ನಭಾಗ್ಯದ ಅಕ್ಕಿ ವ್ಯಾಪಾರದ ವಿಚಾರದಲ್ಲಿ ಇಲಿಯಾಸ್ ಜೊತೆ ವೈಷ್ಯಮ ಕಟ್ಟಿಕೊಂಡಿದ್ದ ಕುಂಟ ಮಂಜನನ್ನ ಕೊಲೆ ಮಾಡಲೇಬೇಕೆಂದು ಇಲಿಯಾಸ್ ಪಣ ತೊಟ್ಟಿದ್ದ. ಅದಕ್ಕಾಗಿಯೇ ಕುಂಟ ಮಂಜನ ಹತ್ಯೆಗೆ ಸುಪಾರಿ ಕೊಟ್ಟಿದ್ದನು. ತನ್ನ ಆಪ್ತ ಭಾಸ್ಕರ್ಗೆ ಸುಪಾರಿ ಹತ್ಯೆ ಮಾಡಿಸುವಂತೆ ಕಾಂಟ್ರ್ಯಾಕ್ಟ್ ಕೊಟ್ಟಿದ್ದ ಇಲಿಯಾಸ್ ಮಾತು ನಂಬಿ ಭಾಸ್ಕರ್ ಹತ್ಯೆ ಮಾಡಿಸಲು ಸುಪಾರಿ ಕೊಡಲು ಒಪ್ಪಿಕೊಂಡಿದ್ದ.
ಅದರಂತೆ, ಭಾಸ್ಕರ್ ತನಗೆ ಆಪ್ತರಾಗಿದ್ದ ಸರ್ವರ್ ಸಂತೋಷ್, ಕೋಳಿ ಅನಿಲ್, ಹುಸೇನಿಗೆ 10 ಲಕ್ಷ ಕೊಡುವುದಾಗಿ ಹೇಳಿ ಮಂಜುನಾಥನನ್ನ ಕೊಲೆ ಮಾಡುವಂತೆ ಸೂಚಿಸಿ 50 ಸಾವಿರ ಅಡ್ವಾನ್ಸ್ ಕೂಡ ನೀಡಿದ್ದಾನೆ. ಅದರಂತೆ ಸಂಚು ರೂಪಿಸಿದ ಹಂತಕರು ಮಂಜುನಾಥನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಸದ್ಯ ಒಬ್ಬೋಬ್ಬರಾಗಿ ಪೊಲೀಸರ ಬಲಗೆ ಬಿದ್ದ ಹಂತಕರು, ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಮುಂದೆ ಒಪ್ಪಿಕೊಂಡಿದ್ದಾರೆ.
ವರದಿ: ವೀರೇಶ್ ದಾನಿ, ಟಿವಿ9 ಬಳ್ಳಾರಿ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Sun, 23 October 22