‘ಹೆಡ್ ​​​ಬುಷ್’​​ ಸಿನಿಮಾದ ಪೋಸ್ಟರ್​ ಅಂಟಿಸಿಕೊಂಡು ಪ್ರಚಾರ; ಐವರ ವಿರುದ್ಧ ಎಫ್​ಐಆರ್

| Updated By: Rakesh Nayak Manchi

Updated on: Oct 30, 2022 | 11:19 AM

ಹೆಡ್ ಬುಷ್ ಸಿನಿಮಾದ ಪೋಸ್ಟರ್​ಗಳನ್ನು ವಾಹನಗಳ ಮೇಲೆ ಅಂಟಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಪೊಲೀಸರೊಬ್ಬರು ನೀಡಿದ ದೂರಿನ ಅನ್ವಯ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೆಡ್ ​​​ಬುಷ್’​​ ಸಿನಿಮಾದ ಪೋಸ್ಟರ್​ ಅಂಟಿಸಿಕೊಂಡು ಪ್ರಚಾರ; ಐವರ ವಿರುದ್ಧ ಎಫ್​ಐಆರ್
‘ಹೆಡ್ ​​​ಬುಷ್’​​ ಸಿನಿಮಾದ ಪೋಸ್ಟರ್​ ಅಂಟಿಸಿಕೊಂಡು ಪ್ರಚಾರ; ಐವರ ವಿರುದ್ಧ ಎಫ್​ಐಆರ್
Follow us on

ಬೆಂಗಳೂರು: ಧನಂಜಯ್ (Dhananjay) ನಟನೆಯ ‘ಹೆಡ್ ಬುಷ್’ (Headbush) ಸಿನಿಮಾ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಚಿತ್ರದಲ್ಲಿ ವೀರಗಾಸೆಯವರಿಗೆ ಅವಮಾನ ಮಾಡಲಾಗಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ನಟ ಸ್ಪಷ್ಟನೆಯೂ ನೀಡಿದ್ದರು. ಇದೀಗ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದ ಒಂದುಷ್ಟ ಮಂದಿ ವಿರುದ್ಧ ನಗರ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕಾರುಗಳ ಮೇಲೆ ಪೋಸ್ಟರ್ ಅಂಟಿಸಿ ವಿಧಾನಸೌಧದ ಮೆಟ್ರೋ ನಿಲ್ದಾಣ ಬಳಿ ಜೋರಾಗಿ ಕೂಗಿ ಪ್ರಚಾರ ನಡೆಸುತ್ತಿದ್ದ ಐವರ ವಿರುದ್ಧ ಪೊಲೀಸರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಯುವಕರ ಗುಂಪೊಂದು ಕಾರುಗಳ ಮೇಲೆ ‘ಹೆಡ್​​ ಬುಷ್’ ಭಿತ್ತಿಪತ್ರ ಅಂಟಿಸಿ ಪ್ರಚಾರ ನೀಡುವಲ್ಲಿ ನಿರತರಾಗಿದ್ದರು. ಅಷ್ಟಕ್ಕೂ ಸುಮ್ಮನಾಗದ ಯುವಕರ ತಂಡ ವಿಧಾನಸೌಧದ ಮೆಟ್ರೋ ನಿಲ್ದಾಣ ಬಳಿ ಜೋರಾಗಿ ಕೂಗಿ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದರು. 2 ಕಾರುಗಳು, ಒಂದು ಬೈಕ್​​ನಲ್ಲಿ ವಿಧಾನಸೌಧ ಕಡೆಯಿಂದ ಕೆಆರ್ ಸರ್ಕಲ್ ಕಡೆ ಹೊರಟಿದ್ದ ಯುವಕರು ಸಿನಿಮಾದ ಪ್ರಚಾರ ಮಾಡುತ್ತಾ ಸಾರ್ವಜನಿಕರ ಓಡಾಟ, ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಅದರಂತೆ ಕರ್ತವ್ಯದಲ್ಲಿದ್ದ ಹೆಡ್​ ಕಾನ್ಸ್​ಟೇಬಲ್​ ಶಿವಕುಮಾರ್​​ಅವರು ನೀಡಿದ​ ದೂರು ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಐವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಖತರ್ನಾಕ್ ಪ್ಲಾನ್

ಬೆಂಗಳೂರು: ಜನರಿಗೆ ಯಾವುದೇ ಅನುಮಾನ ಬರದಂತೆ ಸಂಚು ರೂಪಿಸಿ ಸರಗಳ್ಳತನ ಮಾಡುತ್ತಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮಹಮ್ಮದ್ ರಫೀಕ್ ಮತ್ತು ಮಹಮ್ಮದ್ ಅನೀಸ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬೈಕ್​ನಲ್ಲಿ ಏರಿಯಾಗೆ ಮೊದಲೇ ಬಂದಿದ್ದ ಸರಗಳ್ಳ ವಿಳಾಸ ಹುಡುಕುವ ನೆಪದಲ್ಲಿ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ. ಇದಕ್ಕೂ ಮುನ್ನ ತನ್ನ ಸಹಚರನನ್ನ ಅಲ್ಲಿಗೆ ಕಳಿಸುತ್ತಾನೆ. ವಿಳಾಸ ಕೇಳುವ ನೆಪದಲ್ಲಿ ಇಬ್ಬರು ಮಾತುಕತೆ ನಡೆಸುತ್ತಾರೆ. ದಾರಿ ತೋರಿಸುವ ರೀತಿಯಲ್ಲಿ ವರ್ತಿಸುತ್ತಾ ಬೈಕ್ ಬಳಿ ನಿಂತಿದ್ದ. ಇದೇ ವೇಳೆ ಹಾಲು ತರಲು ಮನೆಯಿಂದ ಹೊರ ಬಂದ ಮಹಿಳೆಯ ಕತ್ತಿಗೆ ಕೈ ಹಾಕಿ ಸರ ಕಸಿದು ಇಬ್ಬರೂ ಪರಾರಿಯಾಗಿದ್ದಾರೆ.

ಖತರ್ನಾಕ್ ಫ್ಲಾನ್ ಮೂಲಕ ಮಹಿಳೆಯ ಸುಮಾರು 2.50 ಲಕ್ಷ ಮೌಲ್ಯದ 60 ಗ್ರಾಂ ಮಾಂಗಲ್ಯ ಸರ ಕಸಿದು ಎಸ್ಕೇಪ್ ಆಗಿದ್ದು, ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಇಬ್ಬರು ಸರಗಳ್ಳರನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಜೋಳ ಒಕ್ಕಣೆ ಯಂತ್ರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ, ಮೂವರ ಸಾವು

ಮೈಸೂರು: ಜೋಳ ಒಕ್ಕಣೆ ಯಂತ್ರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಚಿಟಗಯ್ಯನಕೊಪ್ಪಲು ಗ್ರಾಮದ ಬಳಿ ನಡೆದಿದೆ. ಪ್ರಕಾಶ್(19), ಸಂತೋಷ್(29), ಮರಿಜೋಗಿ(44) ದುರ್ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಜೋಳ ಒಕ್ಕಣೆ ಯಂತ್ರ ಸಾಗಾಣಿಕೆ ಮಾಡುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದು ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಟಿ ನರಸೀಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವು

ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್​ನಲ್ಲಿ ನಡೆದಿದೆ. ಮೂತ್ರ ವಿಸರ್ಜಿಸಲು ರಸ್ತೆ ಬದಿ ಸ್ವಿಫ್ಟ್ ಕಾರು ನಿಲ್ಲಿಸಿದ್ದ ವೇಳೆ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಮೇಲೆ ಹಲವು ವಾಹನಗಳು ಹರಿದು ಗುರುತು ಸಿಗದಷ್ಟು ನಜ್ಜುಗುಜ್ಜಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Sun, 30 October 22