ಬಂಟ್ವಾಳ: ಅನೈಸರ್ಗಿಕ ಸಲಿಂಗಕಾಮ (Homosexuality)ದ ಪ್ರಕರಣಗಳು ಸಹ ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಇಂತಹ ಪ್ರಕರಣದ ಸಾಲಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿರುವ ಘಟನೆಯೊಂದು ಸೇರ್ಪಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಿವಾಸಿ ಅಬ್ದುಲ್ ಸಮಾದ್ (19), ಸುಲೈಮಾನ್ ಎಂಬವರ ಎಂಟು ಜನ ಮಕ್ಕಳಲ್ಲಿ ದೊಡ್ಡವನಾಗಿದ್ದ. ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡಿದ್ದ ಈತ ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್ ಒಂದರಲ್ಲಿ ಉದ್ಯೋಗದಲ್ಲಿದ್ದ. ಬಾಳಿ ಬದುಕಿ ವೃದ್ಧಾಪ್ಯದಲ್ಲಿ ಪೋಷಕರನ್ನ ನೋಡಿಕೊಳ್ಳಬೇಕಿದ್ದ ಈತ ಅತ್ಯಂತ ಅಮಾನುಷವಾಗಿ ಕೊಲೆಯಾಗಿದ್ದಾನೆ.
ಈತ ಕೊಲೆಯಾಗಿದ್ದು ಯಾವುದೋ ದ್ವೇಷಕ್ಕಲ್ಲ ಅಥವಾ ಈತ ಊರಿಡಿ ಸಾಲ ಮಾಡಿಕೊಂಡವನೂ ಅಲ್ಲ. ಹುಡುಗೀರ ಚಟವಂತೂ ಇಲ್ಲ, ಈತನ ಭೀಕರ ಹತ್ಯೆಗೆ ಕಾರಣ ಸಲಿಂಗ ಕಾಮ. ಇದೇ ಗ್ರಾಮದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬನ ಸಹವಾಸದಿಂದಾಗಿ ಈತನ ಬಾಳು ಬೆಂಕಿಯಲ್ಲಿ ಬೆಂದು ಹೋಗಿದೆ. ಸಮದ್ ಎಸ್ಎಸ್ಎಲ್ಸಿ ಮುಗಿಯುವ ಮುನ್ನವೇ ತನ್ನದೇ ಊರಿನ ಆಟೋ ಚಾಲಕ ನಲ್ವತೈದು ವರ್ಷ ವಯಸ್ಸಿನ ಅಬ್ದುಲ್ ರಹಿಮಾನ್ ಅಲಿಯಾಸ್ ಅದ್ರಾಮನ ಪರಿಚಯ ಮಾಡಿಕೊಂಡಿದ್ದ. ಅಸಲಿಗೆ ಈ ಅದ್ರಾಮ ಸಮಾದ್ ತಂದೆ, ಸುಲೈಮಾನ್ ಅವರ ಸ್ನೇಹಿತನೂ ಆಗಿದ್ದ. ಆದರೆ ಈ ಅದ್ರಾಮ ಎಲ್ಲರಂತೆ ಆಗಿರದೇ ಸಲಿಂಗಕಾಮಿಯಾಗಿದ್ದ. ಈತನ ಈ ನೀಚ ಕೃತ್ಯಕ್ಕೆ ಹಲವು ಬಾರಿ ಪಕ್ಕದ ಊರುಗಳಲ್ಲಿ ಸಾರ್ವಜನಿಕರಿಂದ ಸರಿಯಾದ ಗೂಸವನ್ನು ತಿಂದಿದ್ದ.
ಅದ್ರಾಮ ಅಟೋ ಚಾಲಕನಾಗಿದ್ದರಿಂದ ಹುಡುಗರಿಗೆ ಅಟೋ ಕಲಿಸಿಕೊಡುವ ನೆಪದಲ್ಲಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಮಾದಕ ದೃವ್ಯವನ್ನ ನೀಡಿ ಬಳಿಕ ತನ್ನ ಆಸೆ ತೀರಿಸಿಕೊಳ್ಳುತ್ತಿದ್ದ. ಇದೇ ರೀತಿ ತನ್ನ ಸ್ನೇಹಿತನ ಮಗ ಸಮಾದ್‌ನನ್ನು ಸಹ ಅದ್ರಾಮ ಪರಿಚಯ ಮಾಡಿಕೊಂಡಿದ್ದ. ಅಬ್ದುಲ್ ರಹಿಮಾನ್ ಅಲಿಯಾಸ್ ಅದ್ರಾಮ ಹಾಗೂ ಅಬ್ದುಲ್ ಸಮಾದ್ ಬಹಳ ವರ್ಷಗಳಿಂದ ಜೊತೆಯಾಗಿಯೇ ಇದ್ದರು. ಆದರೆ ಈ ಅದ್ರಾಮನ ಕೆಟ್ಟ ದೃಷ್ಟಿ ಸಮಾದ್ ಮೇಲೂ ಬಿದ್ದಿತ್ತು. ಈತನನ್ನೂ ಪುಸಲಾಯಿಸಿ ಸಲಿಂಗಕಾಮವನ್ನು ಮಾಡುತ್ತಿದ್ದ. ಈ ವಿಚಾರ ಅಬ್ದುಲ್ ಸಮಾದ್ ಮನೆಗೆ ತಿಳಿದ ಅದ್ರಾಮನಿಗೆ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರು.
ಸಮಾದ್ ಕುಟುಂಬಸ್ಥರು ಇಬ್ಬರ ಸ್ನೇಹವನ್ನು ತಪ್ಪಿಸಿ ಸಮಾದ್‌ನನ್ನ ಬೆಂಗಳೂರಿಗೆ ಕಳಿಸಿದರು. ಅತ್ತ ಮಗ ಬೆಂಗಳೂರಿಗೆ ಹೋದರೆ ಇತ್ತ ಸಮಾದ್ ತಂದೆ ಸ್ನೇಹಿತ ಅದ್ರಾಮನ ತಂದೆ ಜೊತೆ ಮಾತನಾಡುವುದನ್ನೆ ಬಿಟ್ಟಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಅದ್ರಾಮ, ಸೂಪರ್ ಮಾರ್ಕೆಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಮಾದ್‌ನನ್ನು ಹುಡುಕಿಕೊಂಡು ಬೆಂಗಳೂರಿಗೂ ಹೋಗಿದ್ದ. ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದ ಸಮಾದ್ ಮತ್ತೆ ಬೆಂಗಳೂರಿಗೆ ಹೋಗಿದ್ದ. ಇದೇ ತಿಂಗಳ ಒಂದನೇ ತಾರೀಕಿನಂದು ತನ್ನ ತಂದೆಗೆ ಕಾಲ್ ಮಾಡಿದ ಸಮಾದ್ ನನ್ನ ಮೊಬೈಲ್ ಹ್ಯಾಂಗ್ ಆಗುತ್ತಿದೆ ರಿಪೇರಿಗೆ ಕೊಡಬೇಕು ಎಂದು ಹೇಳಿಕೊಂಡಿದ್ದ. ಆ ಬಳಿಕ ಸಮಾದ್ ಮೊಬೈಲ್ ಸ್ವಿಚ್ಛ್ ಆಫ್ ಎಂದೇ ಬರುತ್ತಿತ್ತು. ಹೀಗಾಗಿ ತನ್ನ ಮಗನ ಬಗ್ಗೆ ಅನುಮಾನಗೊಂಡ ತಂದೆ ಸುಲೈಮಾನ್ ಮಗ ನಾಪತ್ತೆಯಾಗಿದ್ದಾನೆ ಎಂದು ವಿಟ್ಲ ಠಾಣೆಯಲ್ಲಿ ದೂರನ್ನು ಸಹ ನೀಡುತ್ತಾರೆ.
ಆಟೋ ಚಕ್ರದಡಿ ಸಿಲುಕಿ ಆಡು ಸತ್ತಿದೆ, ಧಫನ್ ಮಾಡಲು ಬಾ
ನವೆಂಬರ್ 7ರಂದು ಅದ್ರಾಮ ತನ್ನ ಅಳಿಯನಿಗೊಂದು ಫೋನ್ ಕಾಲ್ ಮಾಡುತ್ತಾನೆ. ಬಂಟ್ವಾಳದ ಇರಾದ ಮೂಳೂರು ಎಂಬಲ್ಲಿ ಆಡು ನನ್ನ ಆಟೋ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ, ಇದನ್ನ ಧಫನ್ ಮಾಡಲು ಹೋಗುವು ಎಂದು ಬೈಕ್ನಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಇರಾದ ಮೂಳೂರು ಎಂಬಲ್ಲಿ ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಮಾವ ಅದ್ರಾಮನ ಮಾತು ನಂಬಿ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಅಳಿಯನಿಗೆ ಶಾಕ್ ಆಗಿದೆ.
ನವೆಂಬರ್ 1ರಂದು ರಾತ್ರಿ 8:30ರ ಸುಮಾರಿಗೆ ಇದೇ ಅದ್ರಾಮ ಸಮಾದ್ನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಂದಿರುತ್ತಾನೆ. ಅಲ್ಲದೇ ಈ ಎಲ್ಲಾ ಘಟನೆಯನ್ನು ಖುದ್ದು ಅದ್ರಾಮನೇ ತನ್ನ ಅಳಿಯನಿಗೆ ತಿಳಿಸುತ್ತಾನೆ. ತಾನು ಸಮಾದ್ ಜೊತೆಯಲ್ಲಿ ಜಗಳವಾಡಿ ಈ ಕೃತ್ಯ ಎಸಗಿದ್ದನ್ನು ಬಾಯ್ಬಿಡುತ್ತಾನೆ. ಅರೆಬೆಂದ ಸಮಾದ್‌ನ ಶವವನ್ನು ನೋಡಿದ ಅಳಿಯನಿಗೆ ದಿಕ್ಕೇ ತೋಚಂದತಾಗಿದೆ. ಗುಂಡಿ ತೋಡಲು ಅದ್ರಾಮನಿಗೆ ನಿರಾಕರಿಸಿದ ಅಳಿಯ ಬೈಕ್ ಹತ್ತಿಕೊಂಡು ಮನೆಗೆ ಮರಳುತ್ತಾನೆ.
ತನ್ನ ಮಾವ ಮಾಡಿರುವ ಕೃತ್ಯವನ್ನು ಕೇಳಿ ಸುಧಾರಿಸಿಕೊಂಡ ಅಳಿಯ ತನ್ನ ಮನೆಯವರ ಜೊತೆ ಚರ್ಚೆ ಮಾಡಿ ನವೆಂಬರ್ 8ರಂದು ಕೃತ್ಯ ನಡೆದ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಅದ್ರಾಮನ ವಿರುದ್ದ ದೂರು ನೀಡುತ್ತಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅದ್ರಾಮನನ್ನು ವಶಕ್ಕೆ ಪಡೆಯುತ್ತಾರೆ. ಪ್ರಾರಂಭದಲ್ಲಿ ಎಷ್ಟೇ ವಿಚಾರಣೆ ನಡೆಸಿದರು ಬಾಯಿ ಬಿಡದ ಅದ್ರಾಮ, ಪೊಲೀಸ್ ಶೈಲಿಯಲ್ಲೇ ವಿಚಾರಣೆ ಆರಂಭಿಸಿದಾಗ ಬಾಯಿಬಿಟ್ಟಿದ್ದಾನೆ.
ಸಮಾದ್‌ನನ್ನು ಸೀಮೆ ಎಣ್ಣೆ ಹಾಕಿ ಸುಟ್ಟ ಸ್ಥಳವನ್ನು ಮತ್ತು ಮೃತದೇಹವನ್ನು ಯಾರಿಗೂ ಗೊತ್ತಾಗದ ಹಾಗೇ ಗುಡ್ಡ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಇಟ್ಟಿರುವ ಸ್ಥಳವನ್ನು ಆತನೇ ತೋರಿಸಿಕೊಟ್ಟಿದ್ದಾನೆ. ಕೊಲೆ ಕೃತ್ಯ ನಡೆದು ಬರೋಬ್ಬರಿ ಎಂಟು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟರಲ್ಲಾಗಲೇ ಅರ್ಧಂಬರ್ಧ ಬೆಂದ ಸಮಾದ್‌ನ ಶವ ಬಹುತೇಕ ಕೊಳೆತು ಹೋಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ತಂಡ ಶವ ಮಹಜರು ನಡೆಸಿದ್ದಾರೆ. ಪ್ರಕರಣದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಬಂದು ಸ್ಥಳದಲ್ಲಿ ಸಿಕ್ಕಂತಹ ವಸ್ತುಗಳನ್ನು ಪರೀಕ್ಷೆಗೊಳಪಡಿಸಿದ್ದಾರೆ.
ಈ ಕೊಲೆ ಕೃತ್ಯ ನಡೆದ ಸ್ಥಳ ಬಯಲು ಗುಡ್ಡ ಪ್ರದೇಶವಾಗಿದ್ದು ನಿರ್ಜನ ಸ್ಥಳವಾಗಿದೆ. ಹಗಲು ಹೊತ್ತಿನಲ್ಲೇ ಈ ಕೃತ್ಯ ನಡೆದರೂ ಹೊರಗಿನ ಜನರಿಗೆ ಪಕ್ಕಕ್ಕೆ ತಿಳಿಯುವುದಿಲ್ಲ. ನವೆಂಬರ್ 1ರಂದು ಈ ಸ್ಥಳಕ್ಕೆ ಬಂದಿರುವ ಅದ್ರಾಮ ಹಾಗೂ ಸಮಾದ್ ಕೆಲ ಹೊತ್ತು ಇಲ್ಲಿ ಕಾಲ ಕಳೆದಿದ್ದಾರೆ. ಆದರೆ ಇದಾದ ಸ್ವಲ್ಪ ಹೊತ್ತಿನಲ್ಲೇ ಅದ್ರಾಮ ಮತ್ತು ಸಮಾದ್‌ನ ನಡುವೆ ಘರ್ಷಣೆ ನಡೆದು ಸಮಾದ್‌ನ ಕೊಲೆಯಲ್ಲಿ ಅಂತ್ಯವಾಗಿದೆ. ಆ ಬಳಿಕ ಸೀಮೆಎಣ್ಣೆಯನ್ನು ಸಮಾದ್ ದೇಹದ ಮೇಲೆ ಚೆಲ್ಲಿ ಬೆಂಕಿ ಹಚ್ಚಿದ್ದಾನೆ. ಬೆಂಕಿಯನ್ನು ಇನ್ನಷ್ಟು ಹೆಚ್ಚಿಸಲು ಅಲ್ಲೇ ಇದ್ದ ಒಣಗಿದ ಮರದ ತುಂಡುಗಳನ್ನು ಬಳಸಿದ್ದಾನೆ. ಶವ ಅರ್ಧಬಂರ್ಧ ಬೇಯುತ್ತಿದ್ದಂತೆ ಗುಡ್ಡದ ಮೇಲ್ಬಾಗದಿಂದ ಪೊದೆಗಳ ನಡುವೆ ಮನುಷ್ಯರು ಹೋಗಲು ಸಾಧ್ಯವೇ ಇಲ್ಲ ಎಂಬಂತಹ ಜಾಗದಲ್ಲಿ ಗುಂಡಿಯೊಂದಕ್ಕೆ ಎಳೆದೊಯ್ದು ಬಿಸಾಡಿದ್ದಾನೆ.
ಬೆಂಗಳೂರಿನಲ್ಲಿದ್ದ ಸಮಾದ್ ಊರಿಗೆ ಬಂದಿದ್ದು ಯಾವಾಗ?
ಕೊಲೆಯಾದ ದಿನವೇ ಮನೆಯವರಿಗೆ ಕಾಲ್ ಮಾಡಿದ್ದ ಸಮಾದ್ ನನ್ನ ಮೊಬೈಲ್ ಸರಿಯಿಲ್ಲ ಎಂದು ಹೇಳಿದ್ದ. ಆದರೆ ಊರಿಗೆ ಬಂದಿರುವ ವಿಚಾರವನ್ನು ಮನೆಯವರಿಗೆ ಹೇಳಿರಲಿಲ್ಲ. ಹೀಗಾಗಿ ಸಮದ್ ಊರಿಗೆ ಬಂದಿದ್ದು ಯಾವಾಗ? ಆತನ ಜೊತೆ ಯಾರು ಬಂದಿದ್ದರು? ಊರಿಗೆ ಬಂದಿದ್ದರೂ ಮನೆಯವರಿಗೆ ಯಾಕೆ ವಿಷಯ ತಿಳಿಸಿಲ್ಲ? ಬಂದಾದ ಬಳಿಕ ಯಾವ್ಯಾವ ಕಡೆ ತೆರಳಿದ್ದ? ಎಂಬ ಪ್ರಶ್ನೆಗಳಿಗೆ ಇನ್ನು ಕೂಡಾ ಉತ್ತರ ದೊರಕಿಲ್ಲ. ಇನ್ನು ಅದ್ರಾಮ ಪೂರ್ವಯೋಜಿತವಾಗಿಯೇ ಈ ಕೊಲೆ ಕೃತ್ಯವನ್ನು ಎಸಗಿದ್ದಾನೆ ಎಂಬ ಬಗ್ಗೆಯು ಪೊಲೀಸರಿಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಈ ಕೃತ್ಯ ನವೆಂಬರ್ ಮೊದಲ ದಿನ ನಡೆದರೂ ಆ ಬಳಿಕ ಅದ್ರಾಮ ಊರಿನಲ್ಲಿ ಏನು ಆಗೇ ಇಲ್ಲ ಎಂಬಂತೆ ಒಡಾಡಿಕೊಂಡಿದ್ದ. ಇದೇ 6ರಂದು ಬೋಳಂತೂರಿನಲ್ಲಿ ನಡೆದ ಕಬ್ಬಡ್ಡಿ ಪಂದ್ಯಾಟದಲ್ಲಿ ವೀಕ್ಷಕನಾಗಿ ಬಂದು ಕಬಡ್ಡಿ ನೋಡಿಕೊಂಡು ಹೋಗಿದ್ದ. ಆದರೆ ಯಾವಾಗ ಈ ಕೊಲೆ ಕೃತ್ಯವನ್ನು ಮುಚ್ಚಿ ಹಾಕಲು ಸಂಬಂಧಿಕನೊಬ್ಬನನ್ನು ಘಟನಾ ಸ್ಥಳಕ್ಕೆ ಕರೆದೊಯ್ದನೋ ಆಗ ಕೃತ್ಯ ಬಹಿರಂಗಗೊಂಡಿದೆ.
ಮದುವೆಯಾಗಿ ಮಕ್ಕಳಿದ್ದರೂ ಎಳೆಯ ವಯಸ್ಸಿನ ಮಕ್ಕಳ ಮೇಲೆ ವಕ್ರದೃಷ್ಟಿ
ಇನ್ನು ಈ ಅದ್ರಾಮ ವಿಕೃತ ಮನಸ್ಸಿನವನಾಗಿದ್ದ. ಸಲಿಂಗಕಾಮ ಬಿಡುವಂತೆ ಎಷ್ಟೇ ಗೂಸ ನೀಡಿದರೂ ಬುದ್ದಿ ಮಾತು ಹೇಳಿದರೂ ಅದ್ರಾಮ ಮಾತ್ರ ಬದಲಾಗಿರಲಿಲ್ಲ. ಈತನಿಗೆ ಮದುವೆಯಾಗಿ ಮಕ್ಕಳಿದ್ದರೂ ಸಹ ಎಳೆಯ ವಯಸ್ಸಿನ ಬಾಲಕರ ಮೇಲೆಯೇ ಈತ ತನ್ನ ಸಲಿಂಗಕಾಮದ ದೃಷ್ಟಿ ಬೀರುತ್ತಿದ್ದ. ದುರಂತ ಅಂದರೆ ಈ ಸಲಿಂಗಕಾಮಿಗೆ ಮಗಳು ಸಹ ಇದ್ದು ಆಕೆಗೆ ಮದುವೆ ಮಾಡಿ ಕೊಡಲಾಗಿದೆ. ಇಷ್ಟೆಲ್ಲಾ ಆದರೂ ಸಹ ಅದ್ರಾಮನ ಸಲಿಂಗಕಾಮದ ಚಟಕ್ಕೆ ಕೊನೆ ಬಿದ್ದಿರಲಿಲ್ಲ.
ಇನ್ನು ಈ ಕೃತ್ಯ ನಡೆದ ಸ್ಥಳದಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಇದು ಹೊಸದಲ್ಲ. ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಇಲ್ಲಿ ಸಾವಿರಾರು ಎಕರೆ ಜಾಗವನ್ನು ಭೂ ಸ್ವಾಧೀನ ಮಾಡಿಕೊಂಡಿದ್ದು ಇದು ಈಗ ನಿರ್ಜನ ಪ್ರದೇಶವಾಗಿದೆ. ರಾತ್ರಿಯಾದರೆ ಸಾಕು ಇದು ಮಾದಕ ವ್ಯಸನಿಗಳ ಅಡ್ಡೆಯಾಗಿ ಬದಲಾಗುತ್ತದೆ. ಈ ಹಿಂದೆಯೂ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ಹೆಣ ತಂದು ಎಸೆದು ಹೋಗಿರುವ ಉದಾಹರಣೆಯು ಇದೆ ಎಂದು ಜನ ದೂರಿದ್ದಾರೆ. ಜನ ಇಲ್ಲಿ ಹಗಲೊತ್ತಿನಲ್ಲೇ ಒಡಾಡಲು ಭಯ ಪಡುವಂತಹ ವಾತವರಣವಿದೆ. ಹೀಗಾಗಿ ಈ ನಿರ್ಜನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಪ್ರಕರಣದಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಮಾದ್‌ನನ್ನು ಕೊಂದಿರುವುದಾಗಿ ಆರೋಪಿ ಅದ್ರಾಮಾ ಬಾಯ್ಬಿಟ್ಟಿದ್ದಾನೆ. ಸದ್ಯ ಅದ್ರಾಮನನ್ನು ಬಂಧಿಸಿರುವ ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 302, 201 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತಿದೆ.
ವರದಿ: ಅಶೋಕ್, ಟಿ.ವಿ 9 ಮಂಗಳೂರು
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Thu, 10 November 22