ವೀಸಾ ಹೆಸರಿನಲ್ಲಿ ಮಹಾ ಮೋಸ: 2 ಕೋಟಿ ವಂಚಕ ಇದೀಗ ಪೊಲೀಸರ ಅತಿಥಿ
ಕೊಡಗು ಮತ್ತು ದಕ್ಷಿಣ ಕನ್ನಡದಲ್ಲೂ ವೀಸಾ ನೀಡುವ ಹೆಸರಲ್ಲಿ ಮಹಾ ಮೋಸ ನಡೆದಿದೆ. ನಯವಂಚಕ ನಂಬಿಕೆ ದ್ರೋಹ ಮಾಡಿ 2 ಕೋಟಿ ರೂ. ವಂಚಿಸಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕೊಡಗು: ಸಮಾಜದಲ್ಲಿ ಬಹಳಷ್ಟು ಮಧ್ಯಮ ವರ್ಗದ ಮಂದಿಗೆ ಹೇಗಾದರೂ ತಮ್ಮ ಮಕ್ಕಳನ್ನ ವಿದೇಶಕ್ಕೆ ಕಳುಹಿಸಿ ಉದ್ಯೋಗ ಮಾಡಿಸುವ ಕನಸಲ್ಲಿ ಇರುತ್ತಾರೆ. ಈ ಕನಸೇ ವಂಚಕನೊಬ್ಬ ಬಂಡವಾಳವನ್ನಾಗಿ ಮಾಡಿಕೊಂಡು ವೀಸಾ ನೀಡುವ ಹೆಸರಿನಲ್ಲಿ ಮಹಾ ವಂಚನೆ ಎಸಗಿ ಇದೀಗ ಜೈಲು ಪಾಲಾಗಿದ್ದಾನೆ. ಆಯಾ ಜಾತಿ, ಸಮುದಾಯದ ಮುಖಂಡರನ್ನ , ಧರ್ಮ ಗುರುವನ್ನ ಸಂಪರ್ಕಿಸಿ ತಮ್ಮ ಸಮುದಾಯದ ಯುವಕರಿಗೆ ವಿದೇಶಕ್ಕೆ ತೆರಳಲು ವೀಸಾ ನೀಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ ಆರೋಪಿ ಶ್ರೀನಾಥ್, ಬಳಿಕ ಹಣ ನೀಡಿದವರ ಸಂಪರ್ಕಕ್ಕೆ ಸಿಗದೆ ವಂಚಿಸುತ್ತಿದ್ದನು. ಇದೀಗ ಶ್ರೀನಾಥ್ನಿಂದ ವಂಚನೆಗೆ ಒಳಗಾದವರು ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡುತ್ತಿದ್ದಾರೆ.
ಆರಂಭದಲ್ಲಿ ವಂಚಕ ಶ್ರೀನಾಥ್, ಆಯಾ ಜಾತಿ, ಸಮುದಾಯದ ಮುಖಂಡರನ್ನ , ಧರ್ಮ ಗುರುವನ್ನ ಸಂಪರ್ಕಿಸಿ ತಮ್ಮ ಸಮುದಾಯದ ಯುವಕರಿಗೆ ವಿದೇಶಕ್ಕೆ ತೆರಳಲು ವೀಸಾ ನೀಡುವುದಾಗಿ ನಂಬಿಸುತ್ತಾನೆ. ವಿಸಾ ನೀಡಲು ಇಂತಿಷ್ಟು ಲಕ್ಷ ಹಣ ಪಾವತಿಸಬೇಕಾಗುತ್ತದೆ ಎನ್ನುತ್ತಾನೆ. ಹಾಗೆ ಪ್ರತಿ ಯೊಬ್ಬರಿಂದ ಒಂದರಿಂದ 2 ಲಕ್ಷದವರೆಗೆ ಹಣ ಸಂಗ್ರಹಿಸಿದ್ದಾನೆ. ಹೀಗೆ ಸುಮಾರು 60ಕ್ಕೂ ಅಧಿಕ ಮಂದಿಯಿಂದ ಹಣ ಸಂಗ್ರಹಿಸಿದ್ದಾನೆ. ಆದರೆ ಹಣ ಪಡೆದು ಹಲವು ತಿಂಗಳು ಕಳೆದರೂ ವಿಸಾ ಮಾತ್ರ ಸಿಗುವುದಿಲ್ಲ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗುತ್ತದೆ.
ಕೊಡಗಿನ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಪೀಟರ್ ಕೂಡ ಶ್ರೀನಾಥ್ ಬೀಸಿದ ವಂಚನೆ ಬಲೆಗೆ ಸಿಲುಕಿಕೊಂಡಿದ್ದಾರೆ. ತಾನು ಶ್ರೀನಾಥ್ ಎಂಬವನಿಂದ ವಂಚನೆಗೆ ಒಳಗಾಗಿರುವುದಾಗಿ ಆರೋಪಿಸಿ ಪೀಟರ್ ಅವರು ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ವಂಚನ ಶ್ರೀನಾಥ್ನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.
ಹಣ ಪಡೆಯಲು ಚೈನ್ ಲಿಂಕ್ ತಂತ್ರ
ಇನ್ನು ಶ್ರೀನಾಥ್ ಮಹಾ ಚಾಣಕ್ಷ್ಯನಾಗಿದ್ದಾನೆ. ಹಣ ಪಡೆಯಲು ಚೈನ್ ಲಿಂಕ್ ತಂತ್ರ ಬಳಸುತ್ತಿದ್ದನಂತೆ. ಯಾರಾದರೊಬ್ಬ ಸಾಮಾನ್ಯ ವ್ಯಕ್ತಿ ಸಿಕ್ಕಿದರೆ ಆತನನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಇನ್ನೂ ಯಾರಾದರೂ ಇದ್ದರೆ ಸಂಪರ್ಕ ಮಾಡಿಸಿ ನಿಮಗೆ ರಿಯಾಯಿತಿ ಕೊಡುತ್ತೇನೆ ಎಂದು ಯಾಮಾರಿಸುತ್ತಿದ್ದ. ರಿಯಾಯಿತಿ ಆಸೆಗೆ ಜನರು ಮತ್ತಷ್ಟು ಜನರನ್ನು ಈತನ ಸಂಪರ್ಕ ಮಾಡಿಕೊಟ್ಟಿದ್ದಾರೆ. ಈತ ಕೊಡಗು, ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ನೂರಕ್ಕೂ ಅಧೀಕ ಮಂದಿಗೆ ವಂಚಿಸಿರುವ ಶಂಕೆ ಇದೆ. ಕೋಟ್ಯಂತರ ರೂಪಾಯಿ ಹಣ ಈತನ ಕೈಪಾಲಾಗಿದೆ ಎಂದು ವಂಚನೆಗೆ ಒಳಗಾದವರು ಹೇಳುತ್ತಿದ್ದಾರೆ. ಹಾಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆ ನಡೆಸಬೇಕಾಗಿದೆ.
ವರದಿ: ಗೋಪಾಲ್ ಸೋಮಯ್ಯ, ಟಿವಿ9 ಕೊಡಗು
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Thu, 10 November 22