
ಬೆಂಗಳೂರು, ಜೂನ್ 24: ಬೆಂಗಳೂರಿನ (Bengaluru) ಬಂಡೆಪಾಳ್ಯದ ಅಂಬೇಡ್ಕರ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಉತ್ತರ ಪ್ರದೇಶ ಮೂಲದ ಸತೀಶ್ ಯಾದವ್ ಎಂಬಾತ ಕಳೆದ ಗುರುವಾರ ಮಧ್ಯರಾತ್ರಿ ಪೊಲೀಸರಿಗೆ ಕರೆ ಮಾಡಿ ತನ್ನ ಸ್ನೇಹಿತ ಶೈಲೆಂದ್ರ ಯಾದವ್ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣವೇ ಬಂಡೇಪಾಳ್ಯ ಪೊಲೀಸರು (Bandepalya Police) ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮೃತದೇಹದ ಮೈ ಮೇಲೆ ಯಾವ ಗಾಯದ ಗುರುತು ಇಲ್ಲದ್ದರಿಂದ ಯುಡಿಆರ್ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ, ಸೋಮವಾರ (ಜೂ.23) ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶೈಲೆಂದ್ರ ಸಾವಿನ ಅಸಲಿ ಕಹಾನಿ ಬಯಲಾಗಿದೆ.
ಸತೀಶ್ ಯಾದವ್ ಬಂಡೆಪಾಳ್ಯದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದನು. ಈತನ ಸ್ನೇಹಿತ ಬೀರೇಂದ್ರ ಯಾದವ್ ಎಂಬಾತನಿಗೆ ಓರ್ವ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ಈ ಅಕ್ರಮ ಸಂಬಂಧದ ಬಗ್ಗೆ ಶೈಲೆಂದ್ರ ಎಲ್ಲರಿಗೂ ಹೇಳಿಕೊಂಡು ಬರುತ್ತಿದ್ದನು. ಹೀಗಾಗಿ, ಶೈಲೆಂದ್ರನ ಕಥೆ ಮುಗಿಸಬೇಕು ಅಂತ ನಿರ್ಧಾರ ಮಾಡಿದ ಬೀರೇಂದ್ರ, ಕಳೆದ ಬುಧವಾರ ರಾತ್ರಿ ತನ್ನ ಸ್ನೇಹಿತ ಸತೀಶ್ ಯಾದವ್ ಮನೆಗೆ ಶೈಲೇಂದ್ರನನ್ನು ಕರೆಸಿಕೊಂಡಿದ್ದಾನೆ. ತನ್ನ ಸ್ನೇಹಿತರಾದ ಸತೀಶ್ ಮತ್ತು ಅರುಣ್ ಯಾದವ್ ಜೊತೆ ಎಣ್ಣೆ ಪಾರ್ಟಿ ಮಾಡಿದ್ದಾನೆ. ಇದೇ ಎಣ್ಣೆ ಮತ್ತಲ್ಲಿ ಶೈಲೆಂದ್ರ ಮೇಲೆ ಕೈಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.
ಶೈಲೆಂದ್ರ ಉಸಿರು ನಿಂತಿದ್ದರಿಂದ ಗಾಬರಿಯಾದ ಬೀರೆಂದ್ರ ಮತ್ತು ಅರುಣ್ ಮನೆಯಿಂದ ಪರಾರಿಯಾಗಿದ್ದಾರೆ. ಆದರೆ ಮೃತದೇಹವನ್ನು ಏನ್ ಮಾಡಬೇಕು ಅಂತ ಗೊತ್ತಾಗದ ಸತೀಶ್ 24 ಗಂಟೆ ಮನೆಯಲ್ಲೇ ಶವವನ್ನು ಇಟ್ಟುಕೊಂಡಿದ್ದನು. ಯಾವಾಗ ಮೃತದೇಹ ವಾಸನೆ ಬರಲು ಶುರುವಾಯಿತು ಮನೆಯ ಮಾಲೀಕರಿಗೆ ವಿಚಾರ ಮುಟ್ಟಿಸಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾನೆ.
ಶೈಲೆಂದ್ರನ ಸಾವು ಆಕಸ್ಮಿಕ ಅಂತ ಹೇಳಿ ಪೊಲೀಸರನ್ನು ಯಾಮಾರಿಸಲು ನೋಡಿದ್ದಾನೆ. ಆದರೆ, ಮರಣೋತ್ತರ ಪರೀಕ್ಷೆ ವೇಳೆ ಶೈಲೇಂದ್ರನ ಎದೆ ಮೇಲೆ ಬಲವಾದ ಏಟು ಬಿದ್ದಿದ್ದು, ಇದರಿಂದಲೇ ಮೃತಪಟ್ಟಿರುವುದು ಎಂಬುವುದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಪೊಲೀಸರು ಕೊಲೆ ಕೇಸ್ ದಾಖಲು ಮಾಡಿ ಸತೀಶ್ ಮತ್ತು ಅರುಣ್ನನ್ನು ಬಂಧಿಸಿದ್ದು, ಬೀರೇಂದ್ರನಿಗಾಗಿ ಬಲೆಬೀಸಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನ ಕೊಲೆ
ಸದ್ಯ ಬಂಡೆಪಾಳ್ಯ ಪೊಲೀಸರು ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿ ಬೀರೇಂದ್ರ ಪರಾರಿಯಾಗಿದ್ದಾನೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ.