ಬೆಂಗಳೂರು, ಡಿಸೆಂಬರ್ 10: ನಗರದ 52 ವರ್ಷದ ಉದ್ಯಮಿಯೊಬ್ಬರು (Businessman) ಸೈಬರ್ ವಂಚಕರ (Cyber Crime) ಜಾಲದಲ್ಲಿ ಸಿಲುಕಿ 1.98 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಉದ್ಯಮಿ ಚೇತನ್ ಶರ್ಮಾ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಡಿಸೆಂಬರ್ 2 ರಂದು ಫೆಡ್ಎಕ್ಸ್ ಕೊರಿಯರ್ ಬಾಯ್ ಕರೆ ಮಾಡುತ್ತಾನೆ. ನಿಮಗೆ (ಚೇತನ್ ಶರ್ಮಾ) ತೈವಾನ್ನಿಂದ ಒಂದು ಪ್ಯಾಕೇಟ್ನಲ್ಲಿ ಸಿಂಥೆಟಿಕ್ ಡ್ರಗ್ ಮೆಥಿಲೆನೆಡಿಯೋಕ್ಸಿಮೆಥಾಂಫೆಟಮೈನ್ (MDMA) ಪಾರ್ಸಲ್ ಬಂದಿದೆ ಎಂದು ಹೇಳಿದನು.
ನಂತರ ಕೋರಿಯರ್ ಬಾಯ್ ಕರೆಯನ್ನು ಮುಂಬೈ ಸೈಬರ್ ಕ್ರೈಮ್ ಬ್ರ್ಯಾಂಚ್ಗೆ ವರ್ಗಾಯಿಸಿದನು. ಬಳಿಕ ಓರ್ವ ಅಧಿಕಾರಿ ಮಾತನಾಡಿ “ಸ್ಕೈಪ್ ವೀಡಿಯೊ ಕರೆಯಲ್ಲಿ ನಿಮ್ಮ ಹೆಸರು ಕೇಳಿಬಂದಿದೆ” ಎಂದು ಹೇಳಿದನು. ಇದರಿಂದ ಚೇತನ್ ಶರ್ಮಾ ಗಾಭರಿಗೊಂಡಿದ್ದಾರೆ. ನಂತರ ಅಧಿಕಾರಿ ಈ ಬಗ್ಗೆ ತನಿಖೆ ನಡೆಸಲು ನನ್ನ ಬ್ಯಾಂಕ್ ಖಾತೆ ಹಣ ವರ್ಗಾಯಿಸುವಂತೆ ಚೇತನ್ ಶರ್ಮಾ ಅವರಿಗೆ ಹೇಳಿದ್ದಾನೆ.
ಈ ನಡುವೆ ಶರ್ಮಾ ಸಂಜೆಯಾದರೂ ಮನೆಗೆ ಬಾರದೇ ಇದ್ದುದರಿಂದ ಆತಂಕಗೊಂಡು ಅವರ ಪತ್ನಿ ಕಚೇರಿಗೆ ಬಂದರು. ವಂಚಕರು ಚೇತನ್ ಶರ್ಮಾ ಅವರನ್ನು ಮಹಿಳೆ ಯಾರು ಎಂದು ಕೇಳಿದರು. ಆಗ ಚೇತನ್ ಶರ್ಮಾ, ಅವರು ನನ್ನ ಪತ್ನಿ ಎಂದು ಹೇಳಿದರು. ಆಗ ವಂಚಕರು ಇಬ್ಬರನ್ನೂ ವಿಚಾರಣೆ ಮಾಡಬೇಕಾಗಿದೆ ಖಾಸಗಿ ಹೋಟೆಲ್‌ವೊಂದಕ್ಕೆ ಹೋಗಲು ಹೇಳಿದ್ದಾರೆ. ಅದರಂತೆ ದಂಪತಿಗಳು ಹೋಟೇಲ್ಗೆ ಹೋಗಿ, ಪ್ರತ್ಯೇಕ ಕೊಠಡಿಯಲ್ಲಿದ್ದರು.
ಇದನ್ನೂ ಓದಿ: Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್ಲೈನ್ ವಂಚನೆ: ಈ ಸ್ಕ್ಯಾಮ್ಗಳ ಬಗ್ಗೆ ಎಚ್ಚರದಿಂದಿರಿ
ನಂತರ ವಂಚಕರು ಆನ್ಲೈನ್ಲ್ಲಿ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಉದ್ಯಮಿ ಚೇತನ್ ಶರ್ಮಾ ಅವರಿಂದ 1.98 ಕೋಟಿ ರೂ.ವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಐಟಿ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಡಿಸೆಂಬರ್ 7 ರಂದು ಆಗ್ನೇಯ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ಸಿಕೆ ಬಾಬಾ ಮಾತನಾಡಿ, ಇಂತಹ ಫೇಕ್ ಕರೆಗಳು ಬಂದರೆ ಜನರು ತಕ್ಷಣ ಕರೆಗಳನ್ನು ಕಟ್ ಮಾಡಬೇಕು. ಮತ್ತು ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ನಿಜವಾದ ಸೈಬರ್ ಕ್ರೈಮ್ ಪೋಲೀಸರು ಸ್ಕೈಪ್ ಅಥವಾ ಫೋನ್‌ನಲ್ಲಿ ವಿಚಾರಣೆ ನಡೆಸುವುದಿಲ್ಲ. ಆರೋಪಗಳಿದ್ದರೆ, ನೋಟಿಸ್ ನೀಡಲಾಗುವುದು. ಮತ್ತು ನಿಮ್ಮನ್ನು ಠಾಣೆಗೆ ಕರೆಸಲಾಗುತ್ತದೆ ಅಥವಾ ಕರೆದೊಯ್ಯಲಾಗುತ್ತದೆ. ಸ್ಕೈಪ್ ಅಥವಾ ವೀಡಿಯೊ ಕರೆಯಲ್ಲಿ ವಿಚಾರಣೆಯನ್ನು ಎಂದಿಗೂ ನಡೆಸಲಾಗುವುದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ