ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಫಾರಿ ಪ್ರಕರಣ: ಆರೋಪಿಗಳ ಮೊಬೈಲ್​ನಲ್ಲಿ ಫೋಟೋಗಳು ಪತ್ತೆ, ಚುರುಕುಗೊಂಡ ತನಿಖೆ

|

Updated on: Feb 23, 2023 | 4:43 PM

ಆರೋಪಿ ಗಿರೀಶ್ ಮೊಬೈಲ್ ಪರಿಶೀಲನೆ ಮಾಡಿದಾಗ ಮೊಬೈಲ್ ನಲ್ಲಿತ್ತು ಶಾಸಕ ಸತೀಶ್ ರೆಡ್ಡಿ ಪೋಟೋ ಪತ್ತೆಯಾಗಿದ್ದು, ರೌಡಿಶೀಟರ್ ನಾಗನ ಫೋಟೋ ಕೂಡ ಕಂಡುಬಂದಿದೆ. ಹೀಗಾಗಿ ಬೊಮ್ಮನಹಳ್ಳಿ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಫಾರಿ ಪ್ರಕರಣ: ಆರೋಪಿಗಳ ಮೊಬೈಲ್​ನಲ್ಲಿ ಫೋಟೋಗಳು ಪತ್ತೆ, ಚುರುಕುಗೊಂಡ ತನಿಖೆ
ಬಿಜೆಪಿ ಶಾಸಕ ಸತೀಶ್ ರೆಡ್ಡಿ
Follow us on

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ (Bommanahalli BJP MLA Sathish Reddy) ಹತ್ಯೆಗೆ 2 ಕೋಟಿ ರೂಪಾಯಿ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಿರೀಶ್ ಮೊಬೈಲ್​ನಲ್ಲಿ ಫೋಟೋಗಳು ಪತ್ತೆಯಾದ ಹಿನ್ನಲೆ ಎಫ್​ಐಆರ್ (FIR) ದಾಖಲಿಸಿರುವ ಬೊಮ್ಮನಹಳ್ಳಿ ಠಾಣಾ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಬಂಧಿತ ಆರೋಪಿ ಗಿರೀಶ್ ಮೊಬೈಲ್ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದ ಪೊಲೀಸರು, ಕೊನೆಗೂ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಪರಿಶೀಲನೆ ನಡೆಸಿದಾಗ ಶಾಸಕ ಸತೀಶ್ ರೆಡ್ಡಿ ಪೋಟೋ ಪತ್ತೆಯಾಗಿದೆ. ಈ ಫೋಟೋದ ಜೊತೆಗೆ ರೌಡಿಶೀಟರ್ ನಾಗನ ಪೋಟೋ ಕೂಡ ಪತ್ತೆಯಾಗಿದೆ. ಸದ್ಯ ಈ ಎರಡು ಫೋಟೋಗಳು ಗಿರೀಶ್ ಮೊಬೈಲ್ ಸೇರಿದ್ದು ಹೇಗೆ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗಿರೀಶ್ ಮೊಬೈಲ್​ಗೆ ಇಬ್ಬರ ಪೋಟೋಗಳು ಬಂದಿದ್ದು ಹೇಗೆ ಗೊತ್ತಾ?

ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಮೊಬೈಲ್​ನಲ್ಲಿ ಪತ್ತೆಯಾದ ಶಾಸಕ ಸತೀಶ್ ರೆಡ್ಡಿ ಹಾಗೂ ನಾಗನ ಫೋಟೋ ಬಗ್ಗೆ ಪ್ರಶ್ನಿಸಿಸಲಾಗಿದೆ. ಈ ವೇಳೆ ತಾನು ಗೂಗಲ್​ನಿಂದ ಪೋಟೋಗಳನ್ನು ಡೌನ್ ಲೋಡ್ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ ಸತೀಶ್ ರೆಡ್ಡಿ ಪೋಟೋ ಹಾಗೂ ವಿಲ್ಸನ್ ಗಾರ್ಡನ್ ನಾಗನ ಪೋಟೋಗಳೇ ಯಾಕೆ ಡೌನ್ ಲೋಡ್ ಮಾಡಿದರು ಅಂತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟಾಗಿಯೂ ಶಾಸಕರ ಹತ್ಯೆಗೆ ಸುಫಾರಿ ಕೊಟ್ಟ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಅದಾಗ್ಯೂ, ಆರೋಪಿ ಗಿರೀಶ್ ಮೊಬೈಲ್​ನಲ್ಲಿ ಪೋಟೋಗಳು ಪತ್ತೆಯಾಗಿರುವ ಕಾರಣಕ್ಕೆ ಬಹಳ ಗಂಭೀರವಾಗಿ ತನಿಖೆ ಮಾಡುತ್ತಿರುವ ಬೊಮ್ಮನಹಳ್ಳಿ ಪೊಲೀಸರು, ಗಿರೀಶ್ ಸೇರಿದಂತೆ ಇತರೆ ಆರೋಪಿಗಳ ಬ್ಯಾಂಕ್ ಖಾತೆಗಳು, ಕುಟುಂಬಸ್ಥರ ಬ್ಯಾಂಕ್ ಅಕೌಂಟ್​ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸುಫಾರಿ ಪಡೆದಿದ್ದರೆ ಮುಂಗಡ ರೂಪದಲ್ಲಿ ಹಣ ಏನಾದರೂ ಬಂದಿದೆಯೇ ಎಂದೂ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರು ಪೊಲೀಸ್ ವಶಕ್ಕೆ, ರಹಸ್ಯ ಸ್ಥಳದಲ್ಲಿ ವಿಚಾರಣೆ

ಆರೋಪಿಗಳ ಮೊಬೈಲ್ ಎಫ್​ಎಸ್​ಎಲ್​ಗೆ ರವಾನೆ

ಸದ್ಯ ಬಂಧಿತರಾಗಿರುವ ಆರೋಪಿಗಳ ಮೊಬೈಲ್​ಗಳಲ್ಲಿ ಮೆಸೆಜ್​ಗಳು ಡಿಲಿಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾತ್ರವಲ್ಲದೆ, ಆರೋಪಿಗಳು ಹೇಳಿದಂತೆ ಫೋಟೋಗಳನ್ನು ಡೌನ್​ಲೋಡ್ ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ಜಪ್ತಿ ಮಾಡಿರುವ ಮೊಬೈಲ್​ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ರವಾನಿಸಲಾಗಿದೆ. ಆರೋಪಿಗಳು ಪೋಟೋ ಡೌನ್ ಲೋಡ್ ಮಾಡಿರುವ ವಿಚಾರದ ಬಗ್ಗೆ ಅನುಮಾನ ವ್ಯಕ್ತವಾಗಿರುವ ಹಿನ್ನಲೆ ಆರೋಪಿಗಳಿಗೆ ಬ್ರೈನ್ ಮ್ಯಾಪಿಂಗ್ ಮಾಡಲು ಚಿಂತನೆ ನಡೆಸಲಾಗುತ್ತಿದ್ದು, ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೂ ಸಹ ತರಲಾಗಿದೆ. ಒಂದೊಮ್ಮೆ ಬ್ರೈನ್ ಮ್ಯಾಪಿಂಗ್ ನಡೆಸಿದರೆ ಅಸಲಿಯತ್ತು ಪತ್ತೆಹಚ್ಚಲು ಪೊಲೀಸರಿಗೆ ಸುಲಭವಾಗಲಿದೆ.

ಏನಿದು ಪ್ರಕರಣ?

ಶಾಸಕ ಸತೀಶ್ ರೆಡ್ಡಿ ಬಿಜೆಪಿಯ ಪ್ರಭಾವಿ ಶಾಸಕರಾಗಿದ್ದು, ಕಳೆದ ಹದಿನೈದು ದಿ‌ನದಿಂದ ಅಪರಿಚಿತ ಹುಡುಗರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಸತೀಶ್ ರೆಡ್ಡಿ ಮನೆ ಹಾಗೂ ಕಛೇರಿ ಬಳಿ ಅಪರಿಚಿತರಿಂದ ಓಡಾಟ ನಡೆಯುತ್ತಿದ್ದು, ಶಾಸಕ ಸತೀಶ್ ರೆಡ್ಡಿ ಆಪ್ತರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ಶಾಸಕ ಸತೀಶ್ ರೆಡ್ಡಿ ಆಪ್ತಸಹಾಯಕ (ಪಿಎ) ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಲ್ಸನ್ ಗಾರ್ಡನ್ ನಾಗನಿಂದ ಎರಡು ಕೋಟಿಗೆ ಸುಪಾರಿ ಪಡೆದು, ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೊದಲು ಎನ್​ಸಿ ಆರ್ ದಾಖಲಿಸಿದ್ದ ಬೊಮ್ಮನಹಳ್ಳಿ ಪೊಲೀಸರು, ಕೋರ್ಟ್  ಅನುಮತಿ ಪಡೆದು ವಿಲ್ಸನ್ ಗಾರ್ಡನ್ ನಾಗಾ, ಆಕಾಶ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದರು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Thu, 23 February 23