ಚಿಕನ್ ರೋಲ್ ಕೊಡದ್ದಕ್ಕೆ ಹೋಟೆಲ್ ಹುಡುಗರಿದ್ದ ರೂಂಗೆ ಬೆಂಕಿ ಹಚ್ಚಿದ ದೇವರಾಜ್ ಆ್ಯಂಡ್ ಟೀಂ

| Updated By: Rakesh Nayak Manchi

Updated on: Dec 13, 2022 | 12:51 PM

ಚಿಕನ್ ರೋಲ್ ಇಲ್ಲ ಅಂತ ಹೇಳಿದ್ದಕ್ಕೆ ಹೊಟೇಲ್ ಸಿಬ್ಬಂದಿಗಳ ಜೊತೆ ಜಗಳ ಮಾಡಿದ್ದಲ್ಲದೆ ಸಿಬ್ಬಂದಿ ನೆಲೆಸಿರುವ ಕೊಠಡಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಿಕನ್ ರೋಲ್ ಕೊಡದ್ದಕ್ಕೆ ಹೋಟೆಲ್ ಹುಡುಗರಿದ್ದ ರೂಂಗೆ ಬೆಂಕಿ ಹಚ್ಚಿದ ದೇವರಾಜ್ ಆ್ಯಂಡ್ ಟೀಂ
ಕುಮಾರ್ ಹೊಟೇಲ್ ಸಿಬ್ಬಂದಿ ನೆಲೆಸಿದ್ದ ಕೊಠಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
Follow us on

ಬೆಂಗಳೂರು: ಟೈಮ್ ಆಯ್ತು, ಚಿಕನ್ ರೋಲ್ (Chicken Roll) ಇಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಕಿಡಿಗೇಡಿಗಳ ತಂಡವೊಂದು ಹೊಟೇಲ್ ಸಿಬ್ಬಂದಿ ಜೊತೆ ಜಗಳ ಮಾಡಿದ್ದಲ್ಲದೆ ಅವರು ನೆಲೆಸುವ ಕೊಠಡಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ ಘಟನೆ ನಗರದ ಹನುಮಂತನಗರ ಪೊಲೀಸ್ ಠಾಣಾ (Hanumantha Nagar Police Station) ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೇವರಾಜ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಚಿಕನ್ ರೋಲ್ ತಿನ್ನಲು ದೇವರಾಜ್ ಮತ್ತು ಸಹಚರರು ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿನ ಕುಮಾರ್ ಹೋಟೆಲ್​ಗೆ ಆಗಮಿಸಿದ್ದಾರೆ. ಈ ವೇಳೆ ಚಿಕನ್ ರೋಲ್ ಇಲ್ಲ, ಹೊಟೇಲ್ ಸಮಯ ಮುಕ್ತಾಯ ಆಗಿದ್ದು, ಬಾಗಿಲು ಮುಚ್ಚುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ದೇವರಾಜ್ ಮತ್ತು ತಂಡ ಚಿಕನ್ ರೋಲ್​ಗಾಗಿ ಜಗಳ ನಡೆಸಿದ್ದಾರೆ.

ಇದನ್ನೂ ಓದಿ: ದೆಹಲಿ ಹತ್ಯೆ ಮಾದರಿಯಲ್ಲಿ ತಂದೆಯನ್ನೇ ಕೊಂದು ದೇಹವನ್ನು 30 ತುಂಡು ಮಾಡಿ ಬೋರ್​ವೆಲ್​ಗೆ ಹಾಕಿದ ಮಗ!

ಗಲಾಟೆ ವೇಳೆ ಕುಡಿದ ಅಮಲಿನಲ್ಲಿದ್ದ ಮೂವರನ್ನು ಹೊಟೇಲ್ ಸಿಬ್ಬಂದಿ ಥಳಿಸಿ ಕಳುಹಿಸಿದ್ದಾರೆ. ಏಟು ತಿಂದ ಬಳಿಕ ದೇವರಾಜ್ ಮತ್ತು ಸಹಚರರು ಪೆಟ್ರೋಲ್ ಬಂಕ್​ಗೆ ತೆರಳಿ ಅಲ್ಲಿ ಬಾಟಲ್​ಗಳಲ್ಲಿ ಒಟ್ಟು ಎಂಟು ಲೀಟರ್ ಪೆಟ್ರೋಲ್ ಖರೀದಿ ಮಾಡಿದ್ದಾರೆ. ನಂತರ ಸೀದಾ ಕುಮಾರ್ ಹೋಟೆಲ್ ಪಕ್ಕದಲ್ಲೇ ಇರುವ ಹೋಟೆಲ್‌ ಸಿಬ್ಬಂದಿಯ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

ಘಟನೆಯಲ್ಲಿ ಸುಟ್ಟು ಹೋದ ಕಿಟಕಿ ಮತ್ತು ಬಾಗಿಲು

ಮನೆಯ ಬಾಗಿಲು, ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಲಾಗಿದ್ದು ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದೇವರಾಜ್ ಹಾಗೂ ಗಣೇಶ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ