ಕೊಲೆ ಯತ್ನ ಆರೋಪ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರಿ ಸೇರಿ ಐವರ ವಿರುದ್ಧ ಎಫ್​ಐಆರ್

|

Updated on: Feb 27, 2023 | 3:42 PM

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರಿ ವಿರುದ್ಧ ಕೊಲೆ ಯತ್ನ ಆರೋಪದಡಿ ಬೆಂಗಳೂರು ನಗರದ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ರಾಜೀ ಪಂಚಾಯಿತಿಗೆಂದು ತೆರಳಿ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ.

ಕೊಲೆ ಯತ್ನ ಆರೋಪ: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರಿ ಸೇರಿ ಐವರ ವಿರುದ್ಧ ಎಫ್​ಐಆರ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜೀ ಪಂಚಾಯಿತಿಗೆಂದು ತೆರಳಿ ಕೊಲೆ ಯತ್ನ (Murder Attempt) ನಡೆಸಿದ ಆರೋಪಡಿದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ (Congress MLA Akhanda Srinivas Murthy) ಸೋದರಿ ಚಂದ್ರಕಲಾ ಸೇರಿದಂತೆ ಐವರ ವಿರುದ್ಧ ನಗರದ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ (FIR) ದಾಖಲಾಗಿದೆ. ಲಗ್ಗರೆಯ ನಿವಾಸಿ ಮಹೇಶ್ ಎಂಬವರನ್ನು ಕೋಣೆಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ (Fatal assault) ನಡೆಸಿದ ಆರೋಪ ಸಂಬಂಧ ಈ ಎಫ್​ಐಆರ್ ದಾಖಲಾಗಿದೆ.

ಮಹೇಶ್ ಮತ್ತು ಇವರ ಪತ್ನಿ ಶಿಲ್ಪಾ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಈ ನಿಟ್ಟಿನಲ್ಲಿ ಇವರಿಬ್ಬರ ರಾಜೀ ಪಂಚಾಯತಿ ಮಾಡಲು ಫೆಬ್ರವರಿ 23ರಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರಿ ಚಂದ್ರಕಲಾ, ಭಾಗ್ಯಮ್ಮ, ಸುನೀತ ಮತ್ತಿತರರು ತೆರಳಿದ್ದಾರೆ. ಇವರೆಲ್ಲರೂ ಶಿಲ್ಪಾ ಪರ ಮಾತನಾಡಿ ರಾಜೀ ಪಂಚಾಯತಿಗೆ ಯತ್ನ ನಡೆಸಿದ್ದಾರೆ. ಆದರೆ ರಾಜೀ ಪಂಚಾಯಿತಿ ವೇಳೆ ಶಿಲ್ಪಾ ಮತ್ತು ಪತಿ ಮಹೇಶ ನಡುವೆ ವಾಗ್ವಾದ ಆರಂಭಗೊಂಡಿದೆ.

ಇದನ್ನೂ ಓದಿ: ಬೆಂಗಳೂರು: 1 ಕೋಟಿ ರೂ. ಸುಪಾರಿ ನೀಡಿ ತಂದೆ ಕೊಲ್ಲಿಸಿದ್ದ ಮಗ ಅರೆಸ್ಟ್

ದಂಪತಿ ನಡುವೆ ಮಾತಿನ ಚಕಾಮಕಿ ನಡೆದಾಗ ಮಹೇಶ್​ನನ್ನು ಕೋಣೆಯೊಳಗೆ ಎಳೆದೊಯ್ದು ಭಾಗ್ಯಮ್ಮ, ಸುನೀತ, ಚಂದ್ರಕಲಾ ಮತ್ತು ಕಾರು ಚಾಲಕ ಸೇರಿಕೊಂಡು ಕಬ್ಬಿಣದ ರಾಡ್​ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಕೈ ಕಾಲುಗಳಿಗೆ ಗಂಭೀರ ಏಟುಗಳು ಆಗಿವೆ ಎಂದು ಆರೋಪಿಸಿ ಮಹೇಶ್ ಸೋದರ ರಾಜು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದು, ಗಾಯಾಳು ಮಹೇಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Mon, 27 February 23