ಬೆಂಗಳೂರು, ಮೇ 24: ಬೆಂಗಳೂರಿನ (Bengaluru) ಝಿಯು ಹೋಮ್ಸ್ ಕಂಪನಿ ಮಾಲೀಕ, ಮನೆ ಮಾಲೀಕರಿಗೆ (House Owners) ಮತ್ತು ಬಾಡಿಗೆದಾರರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಝಿಯು ಹೋಮ್ಸ್ ಕಂಪನಿ ಮಾಲೀಕ ಅಹ್ಮದ್ ಅಲಿಬೇಗ್ ವಂಚನೆ ಮಾಡಿದ ಆರೋಪಿ. ಶಿವಕುಮಾರ್, ದೀಪಾಂಕರ್, ಆಯಿಶಾ, ಇರ್ಫಾನ್ ಮೋಸ ಹೋದ ಮನೆ ಮಾಲೀಕರು. ಪೀಟರ್ ಮೋಸ ಹೋದ ಬಾಡಿಗೆದಾರರು.
ಆರೋಪಿ ಮನೆ ಅಹ್ಮದ್ ಅಲಿಬೇಗ್ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಮಧ್ಯವರ್ತಿ ರೀತಿ ಕೆಲಸ ಮಾಡುತ್ತಿದ್ದನು. ಖಾಲಿ ಇದ್ದ ಮನೆಗಳನ್ನು ಬಾಡಿಗೆ ಕೊಡಿಸುವುದಾಗಿ ಮಾಲೀಕರ ಬಳಿ ಒಪ್ಪಂದ ಮಾಡಿಕೊಳ್ಳುತ್ತಿದ್ದನು. ಅಹ್ಮದ್ ಅಲಿಬೇಗ್ ಬಾಡಿಗೆದಾರರಿಗೆ “ಈ ಮನೆ ಮಾಲಿಕ ನಾನೇ” ಎಂದು ಹೇಳಿ ಮನೆಯನ್ನು ಲೀಸ್ಗೆ ಕೊಡುತ್ತಿದ್ದನು.
ಮನೆ ಮಾಲೀಕರಿಗೆ ಒಂದೆರಡು ತಿಂಗಳ ಬಾಡಿಗೆ ನೀಡಿ ನಂತರ ಬಾಡಿಗೆ ಹಣ ಕೊಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡು ನಿಜವಾದ ಮಾಲೀಕರು ಬಾಡಿಗೆದಾರರು ಇದ್ದ ಮನೆ ಬಳಿ ವಿಚಾರಿಸಿದಾಗ ಅಸಲಿಯತ್ತು ಬಯಲಾಗಿದೆ.
ಈ ಬಗ್ಗೆ ಅಹ್ಮದ್ ಅಲಿಬೇಗ್ ಬಳಿ ವಿಚಾರಿಸಿದಾಗ ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿ ಹತ್ತಾರು ಮನೆ ಮಾಲೀಕರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪವಿದೆ.
ಮತ್ತೊಂದು ಕಡೆ ಬಾಡಿಗೆದಾರರಿಗೆ ತನ್ನದೇ ಮನೆ ಎಂದು ಅವರಿಂದ ಲಕ್ಷಾಂತರ ರೂ. ಲೀಸ್ ಹಣ ಪಡೆದಿದ್ದಾನೆ. ಆದರೆ ವಿಚಾರ ತಿಳಿದು ಮನೆಗಳ ಅಸಲಿ ಮಾಲೀಕರು ಮನೆ ಖಾಲಿ ಮಾಡುವಂತೆ ಬಾಡಿಗೆದಾರರಿಗೆ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗೆಳೆಯನ ಜೊತೆ ಬೆಂಗಳೂರಿಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕ
ಇದರಿಂದ ಬಾಡಿಗೆದಾರರು ಅಹ್ಮದ್ ಅಲಿಬೇಗ್ ಬಳಿ ಹೋದಾಗ ಪರಿಹಾರ ನೀಡದೆ ಕಳಿಸಿದ್ದಾನೆ. ಆರೋಪಿ ಅಹ್ಮದ್ ಅಲಿಬೇಗ್ ವಿರುದ್ಧ ಕಳೆದ ವರ್ಷ ಡಿಸೆಂಬರ್ನಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಅಹ್ಮದ್ ಅಲಿಬೇಗ್ ನೂರಾರು ಜನರಿಂದ ಕೋಟ್ಯಾಂತರ ರೂ. ಹಣ ಪಡೆದು ಪರಾರಿಯಾಗಿದ್ದಾನೆ.
ಫ್ರೇಜರ್ ಟೌನ್, ಹೆಣ್ಣೂರು, ನಾಗವಾರ, ಬಾಣಸವಾಡಿ, ಗೋವಿಂದಪುರ, ಕೊತ್ತನೂರು, ರಾಮಮೂರ್ತಿ ನಗರ, ಬಿಟಿಎಂ ಲೇಔಟ್ ಸೇರಿ ಹಲವೆಡೆ ಸುಮಾರು 168 ಮನೆ ಮಾಲೀಕರು ಹಾಗೂ 486 ಬಾಡಿಗೆದಾರರಿಗೆ ವಂಚಿಸಿ ಪರಾರಿಯಾಗಿದ್ದಾನೆ.
ಮೋಸ ಹೋದ ನೂರಾರು ಮಂದಿ ಮನೆ ಮಾಲೀಕರು, ಬಾಡಿಗೆದಾರರು ನ್ಯಾಯ ಕೊಡಿಸಿ ಅಂತ ಎನ್ಸಿಆರ್, ಪುಲಕೇಶಿ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ದೂರು ದಾಖಲಸಿದ್ದಾರೆ. ಇದೀಗ ವಂಚನೆ ಒಳಗಾದವರು ನಗರ ಪೊಲೀಸ್ ಆಯುಕ್ತರಿಗೆ ವಂಚನೆಗೆ ದೂರು ನೀಡಿದ್ದಾರೆ. ದೂರು ಪರಿಶೀಲಿಸಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುವುದಾಗಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಭರವಸೆ ನೀಡಿದ್ದಾರೆ.
ಇನ್ನ ಈ ಬಗ್ಗೆ ತಿಂಗಳ ಹಿಂದೆ ಅಹ್ಮದ್ ಅಲಿಬೇಗ್ ಮಾತನಾಡಿ “ನನ್ನಿಂದ ತೊಂದರೆ ಆಗಿರುವವರಿಗೆ ಬೇಗ ಹಣ ನೀಡುತ್ತೇನೆ. ಸಮಸ್ಯೆ ಬಗೆಹರಿಸುತ್ತೇನೆ” ಎಂದು ವಿಡಿಯೋ ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ