Bengaluru: ವಿವೇಕನಗರ ಪೊಲೀಸರ ಕಾರ್ಯಾಚರಣೆ; ಕಳವಾಗಿದ್ದ 40 ಲಕ್ಷ ರೂ. ಮೌಲ್ಯದ ಫೋನ್​ ಸಹಿತ ಕಳ್ಳರ ಬಂಧನ

|

Updated on: Mar 22, 2023 | 7:23 PM

ಸಾರ್ವಜನಿಕರಿಂದ ಮೊಬೈಲ್ ಫೋನ್ ದೋಚುತ್ತಿದ್ದ ಮೂವರು ಕಳ್ಳರ ತಂಡವನ್ನು ಬೆಂಗಳೂರಿನ ವಿವೇಕನಗರ ಪೊಲೀಸರು ಬಂಧಿಸಿದ್ದು, ಸುಮಾರು 40 ಲಕ್ಷ ರೂ. ಮೌಲ್ಯದ 109 ಕದ್ದ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

Bengaluru: ವಿವೇಕನಗರ ಪೊಲೀಸರ ಕಾರ್ಯಾಚರಣೆ; ಕಳವಾಗಿದ್ದ 40 ಲಕ್ಷ ರೂ. ಮೌಲ್ಯದ ಫೋನ್​ ಸಹಿತ ಕಳ್ಳರ ಬಂಧನ
ವಶಪಡಿಸಿಕೊಂಡ ಫೋನ್​ ಜತೆ ಪೊಲೀಸರು
Follow us on

ಬೆಂಗಳೂರು: ಸಾರ್ವಜನಿಕರಿಂದ ಮೊಬೈಲ್ ಫೋನ್ ದೋಚುತ್ತಿದ್ದ (Mobile Phone theft) ಮೂವರು ಕಳ್ಳರ ತಂಡವನ್ನು ಬೆಂಗಳೂರಿನ ವಿವೇಕನಗರ (Vivekanagar Police) ಪೊಲೀಸರು ಬಂಧಿಸಿದ್ದು, ಸುಮಾರು 40 ಲಕ್ಷ ರೂ. ಮೌಲ್ಯದ 109 ಕದ್ದ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಗೋರಿಪಾಳ್ಯ ನಿವಾಸಿಗಳಾದ ಎಜಾಜ್ ಪಾಷಾ (20), ಸುಹೇಲ್ (20), ಮಹಮ್ಮದ್ ಸಕ್ಲೇನ್ (23) ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ಫೋನ್‌ಗಳಲ್ಲಿ 40 ಐಫೋನ್‌ಗಳು. ಈ ಗ್ಯಾಂಗ್ ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿರುವ ಪಾದಚಾರಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿತ್ತು. ಅವರಿಂದ ಫೋನ್​ಗಳನ್ನು ಅಪಹರಿಸಿಕೊಳ್ಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2022 ರ ನವೆಂಬರ್​​​ನಲ್ಲಿ ದಾಖಲಾದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಕೋರಮಂಗಲ ನಿವಾಸಿಯೊಬ್ಬರು ಕಳ್ಳರು ಫೋನ್ ಕಿತ್ತುಕೊಂಡಿರುವ ಬಗ್ಗೆ ದೂರು ನೀಡಿದ್ದರು. ಆರೋಪಿಯನ್ನು ಸೆರೆ ಹಿಡಿಯಲು 300ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ತಿಂಗಳುಗಟ್ಟಲೆ ಸ್ಕ್ಯಾನ್ ಮಾಡಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಗೋರಿಪಾಳ್ಯ ವೃತ್ತದಲ್ಲಿ ನಿಲ್ಲಿಸಿದ್ದ ಬೈಕ್‌ ಅನ್ನು ಕಳ್ಳತನ ಮಾಡಲು ಬಂದಿದ್ದ ವೇಳೆ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಸಂಘಟಿತವಾಗಿ ಕಳ್ಳತನದಲ್ಲಿ ಶಾಮೀಲಾಗಿದ್ದಲ್ಲದೆ, ಹೆಚ್ಚಾಗಿ ವಸತಿ ಪ್ರದೇಶಗಳ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಕದ್ದ ಬೈಕ್​ನಲ್ಲಿ ತೆರಳಿ ಕೋರಮಂಗಲ, ಅಶೋಕ್ ನಗರ ಮತ್ತು ವಿಲ್ಸನ್ ಗಾರ್ಡನ್ ಮತ್ತು ಇತರ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ತಮ್ಮ ಊರಿನ ಯುವತಿಗೆ ಹೋಳಿ ಹಚ್ಚಿದನೆಂದು ಸ್ನೇಹಿತನನ್ನೇ ಕಿಡ್ನಾಪ್ ಮಾಡಿ ಬೆತ್ತಲೆಗೊಳಿಸಿ ಹಲ್ಲೆ

ಕದ್ದ ಫೋನ್‌ಗಳನ್ನು ಹೈದರಾಬಾದ್​ನ ಸಂಡೇ ಮಾರುಕಟ್ಟೆಗೆ ರವಾನಿಸಲಾಗುತ್ತಿತ್ತು. ಅಲ್ಲಿ ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಕೆಲವು ಫೋನ್​ಗಳನ್ನು ಬಿಚ್ಚಿ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿಯೂ ಕಳವಾಗಿದ್ದ ಮೊಬೈಲ್​ಗಳ ಪತ್ತೆ

ಮೊಬೈಲ್ ಕಳೆದುಕೊಂಡವರಿಗೆ ಯುಗಾದಿ ಹಬ್ಬದ ದಿನವೇ ಮೈಸೂರು ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. 2.79 ಲಕ್ಷ ರೂ. ಮೌಲ್ಯದ 19 ಮೊಬೈಲ್‌ಗಳನ್ನು ಪತ್ತೆ ಮಾಡಿದ ಪೊಲೀಸರು ಅವರುಗಳನ್ನು ವಾರಸುದಾರರಿಗೆ ವಾಪಸ್ ನೀಡಿದ್ದಾರೆ. ಕಳೆದು ಹೋಗಿದ್ದ ಮೊಬೈಲ್‌ಗಳನ್ನು ತಂತ್ರಜ್ಞಾನ ಬಳಸಿ ಪತ್ತೆ ಹಚ್ಚಲಾಗಿದೆ. ಮೊಬೈಲ್‌ನಲ್ಲಿ ಬಳಕೆಯಾಗುತ್ತಿದ್ದ ಸಿಮ್ ನಂಬರ್, ಲೊಕೇಶನ್ ವಿವರಗಳನ್ನು ಪಡೆದು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೋಬೈಲ್​ ಫೋನ್​ಗಳು​ ಕಳೆದುಹೋಗಿದ್ದ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ