ಬೆಂಗಳೂರು: ಬಾಲಿವುಡ್ ನಟ ಬೊಮನ್ ಇರಾನಿ ಸೋದರ ಸಂಬಂಧಿ, ಖುರ್ಷೀದ್ ಇರಾನಿ ಮನೆಯಲ್ಲಿ ಕಳ್ಳತನ ನಡೆಸುತ್ತಿದ್ದ ಮನೆಯ ಕೆಲಸದಾಕೆ ಮತ್ತು ಆಕೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಅಬ್ಬಾಸ್ ಅಲಿ ರಸ್ತೆಯ, ಎಂಬಸ್ಸಿ ಕ್ರೌನ್ ಅಪಾರ್ಟ್ಮೆಂಟ್ನಲ್ಲಿ ಕಳೆದ ಮೂರು ವರ್ಷಗಳಿಂದ ಈ ಖದೀಮರು ಸ್ವಲ್ಪ ಸ್ವಲ್ಪವೇ ಸಂಪತ್ತನ್ನು ದೋಚುತ್ತಿದ್ದರು. ಹೀಗೆ ಕಳ್ಳತನವಾಗುತ್ತಿದ್ದದ್ದನ್ನು ಈ ಡಿಸೆಂಬರ್ನಲ್ಲಿ ಖುರ್ಷೀದ್ ಇರಾನಿ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು.
ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಕಳ್ಳತನ ನಡೆಸುತ್ತಿದ್ದ ಮನೆಕೆಲಸದವಳು ಮತ್ತು ಆತನ ಮಗನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕೆ.ಜಿ. ಹಳ್ಳಿಯ ಮೇರಿ ಅಲೈಸ್ (65) ಮತ್ತು ಮೈಕೆಲ್ ವಿನ್ಸೆಂಟ್ (22) ಕಳ್ಳತನ ನಡೆಸುತ್ತಿದ್ದ ಆರೋಪಿಗಳು.
ಖುರ್ಷೀದ್ ಇರಾನಿ ನೀಡಿದ ದೂರಿನಂತೆ, 700 ಗ್ರಾಂ ತೂಕದ ಒಟ್ಟು ಏಳು ಚಿನ್ನದ ಬಿಸ್ಕೆಟ್ಗಳು, ₹ 85 ಲಕ್ಷ ಹಣ, ₹ 11 ಲಕ್ಷ ಮೊತ್ತದ 15 ಸಾವಿರ ಅಮೆರಿಕ ಡಾಲರ್ ಮನೆಯಿಂದ ಕಳುವಾಗಿತ್ತು.
ಕಳ್ಳತನ ಮಾಡುತ್ತಿದ್ದ ತಾಯಿ ಮೆರಿ ಅಲೈಸ್ ಕಳೆದ 25 ವರ್ಷಗಳಿಂದ ಖುರ್ಷೀದ್ ಇರಾನಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ವಿನ್ಸೆಂಟ್ ಅನಿಮೇಷನ್ ಕೋರ್ಸ್ ನಡೆಸುತ್ತಿದ್ದ. ಐಪಿಎಲ್ ಬೆಟ್ಟಿಂಗ್ನಲ್ಲೂ ಆತ ತೊಡಗಿಸಿಕೊಂಡು ನಷ್ಟ ಅನುಭವಿಸಿದ್ದ ಎಂದು ತಿಳಿದುಬಂದಿದೆ. ಐಪಿಎಲ್ ಬೆಟ್ಟಿಂಗ್ನಿಂದ ಆದ ನಷ್ಟ ಸರಿದೂಗಿಸಲು ತಾಯಿ-ಮಗ ಕಳ್ಳತನದ ಕೃತ್ಯ ಆರಂಭಿಸಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
Published On - 7:02 pm, Mon, 14 December 20