ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆ ಸಂಚು ಪ್ರಕರಣ: ಸೈಲೆಂಟ್ ಸುನೀಲ್‌ನಿಗೆ ರಿಲೀಫ್ ನೀಡಿದ ಹೈಕೋರ್ಟ್

| Updated By: Rakesh Nayak Manchi

Updated on: Jan 20, 2023 | 7:36 PM

ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ ಹೈಕೋರ್ಟ್ ಸೈಲೆಂಟ್ ಸುನೀಲ್‌ನಿಗೆ ರಿಲೀಫ್ ನೀಡಿದೆ.

ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆ ಸಂಚು ಪ್ರಕರಣ: ಸೈಲೆಂಟ್ ಸುನೀಲ್‌ನಿಗೆ ರಿಲೀಫ್ ನೀಡಿದ ಹೈಕೋರ್ಟ್
ಸೈಲೆಂಟ್ ಸುನಿಲ್ (ಎಡ ಚಿತ್ರ) ಮತ್ತು ಕರ್ನಾಟಕ ಹೈಕೋರ್ಟ್ (ಬಲ ಚಿತ್ರ)
Follow us on

ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ರೌಡಿ ನಾಗನ (Wilson Garden Rowdy Naga) ಕೊಲೆಗೆ ಸಂಚು ರೂಪಿಸಿದ ಸಂಬಂಧ ಸುನೀಲ್ ಅಲಿಯಾಸ್ ಸೈಲೆಂಟ್ ಸುನೀಲ್ (Sunil @ Silent Sunil) ವಿರುದ್ಧ ದಾಖಲಾದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ತನ್ನ ವಿರುದ್ಧ ದಾಖಲಾದ ಪ್ರಕರಣ ರದ್ದು ಕೋರಿ ಸೈಲೆಂಟ್ ಸುನೀಲ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದನು. ವಿನಾ ಕಾರಣ ತನ್ನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸೈಲೆಂಟ್ ಸುನೀಲ್ ಅರ್ಜಿಯಲ್ಲಿ ಆರೋಪಿಸಿದ್ದಾನೆ. ವಿಚಾರಣೆ ನಡೆಸಿದ ಕೋರ್ಟ್, ಸುನೀಲ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿತು.

ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ ಆರೋಪಿ ಸಮೀವುಲ್ಲಾ ಖಾನ್ ಎಂಬಾತನ ಹೇಳಿಕೆ ಆಧರಿಸಿ ಪೊಲೀಸರು ತನ್ನನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಹೀಗಾಗಿ ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿ ಸೈಲೆಂಟ್ ಸುನೀಲ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದನು.

ಸೈಲೆಂಟ್ ಸುನೀಲ ಯಾರು?

ಸೈಲೆಂಟ್ ಸುನೀಲ ನಟೋರಿಯಸ್ ರೌಡಿಯಾಗಿದ್ದು, ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿದ್ದು, ಕೇರಳದ ಮೂಲದವನಾಗಿದ್ದಾನೆ. ಹತ್ತನೇ ತರಗತಿ ಓದುವಾಗಲೇ ಕ್ರಿಕೆಟ್ ಆಡುವ ವಿಚಾರದಲ್ಲಿ ಜಗಳ ನಡೆದು ಬಾಲಾಪರಾಧಿಯಾಗಿ ಜೈಲುವಾಸ ಅನುಭವಿಸಿದ್ದ ಈತನ ಮೇಲೆ ಮೊದಲು ಬೆಂಗಳೂರಿನ ಸುಬ್ರಮಣ್ಯನಗರ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ನಂತರ 1996ರಲ್ಲಿ ಗೆಳೆಯರ ಜೊತೆ ಸೇರಿಕೊಂಡು ಹೆಡ್ ಕಾನ್​ಸ್ಟೆಬಲ್ ಶೆಟ್​ಕಾಳಪ್ಪ ಎನ್ನುವವರನ್ನು ಹತ್ಯೆ ಮಾಡಿದ್ದ ಈತ ಜೈಲು ಸೇರಿದ ನಂತರ ಕೈದಿಗಳೊಂದಿಗೆ ಸೇರಿಕೊಂಡು ಭೂಗತ ಜಗತ್ತಿನ ಎಂಟ್ರಿ ಕೊಟ್ಟನು.

ಇದನ್ನೂ ಓದಿ: Praveen Nettar: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 20 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ NIA

ಅಸಲಿಗೆ ಸೈಲೆಂಟ್ ಸುನೀಲನ ಮೇಲೆ 1996ರಿಂದ ಈವರೆಗೆ 4 ಕೊಲೆ ಯತ್ನ, 6 ಕೊಲೆ, 2 ಡಬಲ್ ಮರ್ಡರ್ ಸಹಿತ ಒಟ್ಟು 17 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 16 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಂಡಿವೆ. ಒಂದು ಪ್ರಕರಣ ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅದಕ್ಕೂ ಸಹ ಕೊರ್ಟ್ ಸ್ಟೇ ನೀಡಿತ್ತು. ರೌಡಿ ಜಗತ್ತಿನ ಜೊತೆ ಜೊತೆಗೆ ಕುಟುಂಬಿಕ ಜೀವನ ಆರಂಭಿಸಿದ್ದ ಈತ ಈಗ ರೌಟಿ ಚಟುವಟಿಕೆಗಳನ್ನು ಬಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ, ರಾಜಕೀಯಕ್ಕೆ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾನೆ.

ಚಾಮರಾಜಪೇಟೆಯಲ್ಲಿ ಕಾಂಗ್ರೆಸ್​ನ ಪ್ರಭಾವಿ ಶಾಸಕ ಜಮೀರ್ ಎದುರಿಗೆ ಭವಿಷ್ಯ ಕಟ್ಟಿಕೊಳ್ಳಲು ಸೈಲೆಂಟಾಗಿ ಸುನೀಲ ಸ್ಕೆಚ್ ಹಾಕಿದ್ದಾನೆ ಎನ್ನಲಾಗಿದೆ. ಇದು ಬೆಂಗಳೂರಿನ ಮಟ್ಟಿಗೆ ಭಾರಿ ಸಂಚಲನದ ಜೊತೆಗೆ ವಿವಾದವನ್ನೂ ಸೃಷ್ಟಿಸಿದೆ. ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಕೆಲವೊಂದು ಬಿಜೆಪಿ ನಾಯಕರೊಂದಿಗೆ ಸೈಲೆಂಟ್ ಸುನೀಲ ಕಾಣಿಸಿಕೊಂಡಿದ್ದು, ಇತ್ತೀಚೆಗೆ ನಡೆದ ರಕ್ತದಾನ ಶಿಬಿರದಲ್ಲೂ ಆತ ಕಾಣಿಸಿಕೊಂಡಿದ್ದ. ಇದು ವಿಪಕ್ಷಗಳ ಕಣ್ಣಿಗೆ ಬಿದ್ದು ಬಿಜೆಪಿ ವಿರುದ್ಧ ಮುಗಿಬೀಳಲು ಆರಂಭಿಸಿದ್ದವು.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:36 pm, Fri, 20 January 23