ಬೆಂಗಳೂರು, ಏಪ್ರಿಲ್ 10: ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಆನ್ಲೈನ್ ವಂಚಕರು (Online Fraud) ಮಾಡಿದ ಕುತಂತ್ರಕ್ಕೆ ಬಲಿಯಾಗಿ ಬೆಂಗಳೂರಿನ (Bengaluru) ಮಹಿಳೆಯೊಬ್ಬರು 14.57 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ವರದಿಯಾಗಿದೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚಕರು ವಿಡಿಯೋ ಕಾಲ್ನಲ್ಲಿ (Video Call) ಮಹಿಳೆಯನ್ನು ವಿವಸ್ತ್ರಗೊಳ್ಳುವಂತೆ ಸೂಚಿಸಿದ್ದಲ್ಲದೆ, ಆ ವಿಡಿಯೋವನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದರು. ಪರಿಣಾಮವಾಗಿ, ನಗ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಬಹುದು ಎಂಬ ಭೀತಿಯಿಂದ ಮಹಿಳೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನ ಪ್ರತಿಯನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯಿಂದ ತಿಳಿದು ಬಂದಿರುವ ಪ್ರಕಾರ, ಬೆಂಗಳೂರಿನ 29 ವರ್ಷ ವಯಸ್ಸಿನ ಮಹಿಳೆಗೆ ಫೆಡೆಕ್ಸ್ ಇಂಟರ್ನ್ಯಾಷನಲ್ ಕೊರಿಯರ್ ಕಂಪನಿಯಿಂದ ಎಂದು ಹೇಳಿಕೊಂಡು ವ್ಯಕ್ತಿ ಒಬ್ಬ ದೂರವಾಣಿ ಕರೆ ಮಾಡಿದ್ದಾನೆ. ಮುಂಬೈಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರಿಗೆ ಥಾಯ್ಲೆಂಡ್ನಿಂದ ಒಂದು ಪಾರ್ಸೆಲ್ ವಾಪಸ್ ಬಂದಿದೆ. ಅದರಲ್ಲಿ 140 ಎಂಡಿಎಂಎ (ಸಿಂಥೆಟಿಕ್ ನಾರ್ಕೋಟಿಕ್ಸ್) ಡ್ರಗ್, 5 ಪಾಸ್ ಪೋರ್ಟ್ ಹಾಗೂ 3 ಕ್ರೆಡಿಟ್ ಕಾರ್ಡ್ಗಳು ಇವೆ ಎಂದು ವಂಚಕ ಹೇಳಿದ್ದಾನೆ.
ಕೊರಿಯರ್ ಕಂಪನಿಯಿಂದ ಕಾಲ್ ಮಾಡಿದ್ದು ಎನ್ನಲಾದ ವ್ಯಕ್ತಿ, ‘ಪಾರ್ಸೆಲ್ ಮಾದಕ ದ್ರವ್ಯವನ್ನು ಹೊಂದಿರುವುದರಿಂದ ಅದನ್ನು ತಡೆಹಿಡಿಯಲಾಗಿದೆ. ನೀವು ಅದನ್ನು ಇರಿಸಿಲ್ಲ ಎಂದಾದರೆ ವಂಚನೆಯ ದೂರು ದಾಖಲಿಸಲು ಮುಂಬೈನಲ್ಲಿರುವ ಸೈಬರ್ ಕ್ರೈಮ್ ತಂಡವನ್ನು ಸಂಪರ್ಕಿಸಬೇಕು’ ಎಂದಿದ್ದಾನೆ.
ವಂಚನೆಯ ಸುಳಿವು ದೊರೆಯದ ಮಹಿಳೆ, ದೂರು ನೀಡಲು ಬಯಸುವುದಾಗಿಯೂ, ಸೈಬರ್ ಕ್ರೈಮ್ ತಂಡಕ್ಕೆ ಕರೆ ವರ್ಗಾಯಿಸುವಂತೆಯೂ ಸೂಚಿಸಿದ್ದಾರೆ. ಕರೆ ವರ್ಗಾವಣೆಯಾದ ನಂತರ, ಸೈಬರ್ ಕ್ರೈಮ್ ವಿಭಾಗದವರದ್ದು ಎನ್ನಲಾದ ತಂಡವು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಲು ಮತ್ತು ಅವರೊಂದಿಗೆ ಚಾಟ್ ಮಾಡಲು ಇಮೇಲ್ ಐಡಿಯನ್ನು ನಮೂದಿಸಲು ಸೂಚನೆ ನೀಡಿತ್ತು. ನಂತರ ಅವರು ‘ಅಕ್ರಮ ಪಾರ್ಸೆಲ್’ ಮತ್ತು ಆಕೆಯ ಆಧಾರ್ ಕಾರ್ಡ್ ವಿವರಗಳ ಬಗ್ಗೆ ಕೇಳಿದರು. ನಂತರ ಸೈಬರ್ ಕ್ರೈಂ ತಂಡ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಹೇಳಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಯು ಹೆದರಿದ್ದಾರೆ ಎಂಬುದನ್ನು ಅರಿತ ವಂಚಕರ ತಂಡ, ಕರೆಯನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಮತ್ತು ಸಿಬಿಐ ಅಧಿಕಾರಿಗೆ ವರ್ಗಾಯಿಸಲಾಗುತ್ತಿದೆ ಎಂದಿತು. ನಂತರ ಅಭಿಷೇಕ್ ಚೌಹಾಣ್ ಎಂಬ ಹೆಸರಿನಲ್ಲಿ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಮಹಿಳೆಯನ್ನು ತನಿಖೆಗೆ ಒಳಪಡಿಸಿದ. ಇದು ಬಲು ದೊಡ್ಡ ಪ್ರಕರಣವಾಗಿದ್ದು, ರಾಜಕಾರಣಿಗಳು ಸೇರಿದಂತೆ ಹಲವರು ಶಾಮೀಲಾಗಿದ್ದಾರೆ. ಮಾನವ ಕಳ್ಳಸಾಗಣೆ, ಮನಿ ಲಾಂಡರಿಂಗ್ನಂಥ ಗಂಭೀರ ಅಪರಾಧ ಪ್ರಕರಣಗಳ ಜತೆ ಸಂಪರ್ಕ ಹೊಂದಿದೆ ಎಂದ ಆತ ಮಹಿಳೆಯನ್ನು ಮತ್ತಷ್ಟು ಹೆದರಿಸಿದ್ದಾನೆ. ಹೀಗಾಗಿ ಮಹಿಳೆಯು ಆತನಿಗೆ ತನ್ನ ವೇತನ, ತೆರಿಗೆ ಪಾವತಿ, ಆಧಾರ್, ಪಾನ್ ಇತ್ಯಾದಿ ಎಲ್ಲ ವಿವರಗಳನ್ನೂ ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಆಕೆಯ ಪೋಷಕರ ಜತೆ ಮಾತನಾಡದಂತೆ ತಡೆಯಲಾಯಿತು. ಪೊಲೀಸರಿಗೆ ದೂರು ನೀಡದಂತೆ ಮಾಡಲು ಕ್ಯಾಮೆರಾವನ್ನು ಸದಾ ಆನ್‌ಲೈನ್‌ನಲ್ಲಿ ಇರಿಸುವಂತೆಯೂ ಸ್ಕ್ರೀನ್ ಶೇರಿಂಗ್ ಸದಾ ಆನ್ ಮಾಡಿ ಇಡುವಂತೆಯೂ ಸೂಚಿಸಲಾಗಿತ್ತು. ಇದರಿಂದ ಮಹಿಳೆ ಯಾರಿಗಾದರೂ ಕರೆ ಮಾಡಿದರೆ ಅಥವಾ ಸಂದೇಶ ಕಳುಹಿಸಿದರೆ ತಿಳಿಯುವ ಉದ್ದೇಶ ವಂಚಕರದ್ದಾಗಿತ್ತು. ಅದರಂತೆ ಮಹಿಳೆ ನಡೆದುಕೊಂಡಿದ್ದರು.
ಇದನ್ನೂ ಓದಿ: ಮತ್ತೊಂದು ಸ್ಕ್ಯಾಮ್ ಬೆಳಕಿಗೆ: 1 ರೂ. ಕುಳುಹಿಸಿ ಸಾವಿರಾರು ರೂ. ದೋಚುತ್ತಾರೆ ವಂಚಕರು, ಹುಷಾರ್!
ಇಡೀ ದಿನ ಅವರ ಕಣ್ಗಾವಲಿನಲ್ಲಿಯೇ ನಾನಿದ್ದೆ. ಇಡೀ ದಿನ ನನ್ನನ್ನು ರಾತ್ರಿಯ ವೇಳೆಯೂ ಅವರು ನೋಡುತ್ತಿದ್ದರು. ಕ್ಯಾಮೆರಾ ಆನ್ ಮಾಡಿ ಮಲಗುವಂತೆ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದೆ. ಆಮೇಲೆ, ಕಸ್ಟಮ್ಸ್ ಅಧಿಕಾರಿಗಳು ‘ನಾರ್ಕೋಟಿಕ್ ಟೆಸ್ಟ್’ ನಡೆಸಬೇಕಿದೆ ಎಂದು ಹೇಳಿ ಆ ನೆಪದಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಕ್ಯಾಮೆರಾದಲ್ಲಿ ಪೋಸ್ ಕೊಡಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಎಲ್ಲ ವಿದ್ಯಮಾನಗಳು ನಡೆದ ನಂತರ ವಂಚಕರು ಬ್ಲ್ಯಾಕ್ಮೇಲ್ ಆರಂಭಿಸಿದ್ದರು. ಹಣ ವರ್ಗಾವಣೆ ಮಾಡದಿದ್ದರೆ ನಗ್ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ ಮಹಿಳೆ, ಏಪ್ರಿಲ್ 5 ರಂದು ಅಮೆಜಾನ್‌ನಲ್ಲಿ 2.04 ಲಕ್ಷ ಮತ್ತು 1.74 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದರು. ನಂತರ ಏಪ್ರಿಲ್ 5 ರಂದು ಮಧ್ಯಾಹ್ನ 3 ಗಂಟೆಯೊಳಗೆ ನಾನು 10 ಲಕ್ಷ ರೂಪಾಯಿ ನೀಡುವಂತೆಯೂ, ಒಂದು ವೇಳೆ ಹಣ ವರ್ಗಾವಣೆ ಮಾಡದಿದ್ದರೆ ವೀಡಿಯೊವನ್ನು ಡಾರ್ಕ್ ವೆಬ್ ಸೇರಿದಂತೆ ಅನೇಕರಿಗೆ ಮಾರಾಟ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಏಪ್ರಿಲ್ 3ರಿಂದ 5ರ ಅವಧಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚನೆಗೆ ಒಳಗಾದ ಮಹಿಳೆ ವೃತ್ತಿಯಲ್ಲಿ ವಕೀಲರಾಗಿದ್ದಾರೆ ಎನ್ನಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Wed, 10 April 24