ಬೆಂಗಳೂರು: ಬಿಎಂಟಿಸಿ ಬಸ್ಗೆ ಬೆಂಕಿ ತಗುಲಿ ನಿರ್ವಾಹಕ(BMTC Bus Conductor) ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಾರ್ಚ್ 9 ರಂದು ಬ್ಯಾಡರಹಳ್ಳಿ ನಿಲ್ದಾಣದಲ್ಲಿ ಸುಮ್ಮನಹಳ್ಳಿ ಡಿಪೋ 31ಕ್ಕೆ ಸೇರಿದ್ದ ಬಿಎಂಟಿಸಿ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಕಂಡಕ್ಟರ್ ಮುತ್ತಯ್ಯ ಸಜೀವ ದಹನವಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ರೋಚಕ ವಿಚಾರಗಳು ಬೆಳಕಿಗೆ ಬಂದಿವೆ. ಮೃತ ಕಂಡಕ್ಟರ್ ಮುತ್ತಯ್ಯ ಅವರ ಮೊಬೈಲ್ ಹಾಗೂ ಯುಪಿಐ ಐಡಿ ಪರಿಶೀಲನೆ ನಡೆಸಿದ್ದು, ಅಗ್ನಿ ದುರಂತದ ರಾತ್ರಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಅಗ್ನಿ ದುರಂತ ಸಂಭವಿಸಿದ ಸ್ಥಳದಿಂದ ಕೊಂಚ ದೂರ ಇರುವ ಪೆಟ್ರೋಲ್ ಬಂಕ್ ಖಾತೆಗೆ 700 ರೂಪಾಯಿ ಹಣ ವರ್ಗಾವಣೆಯಾಗಿದ್ದು, ಪೆಟ್ರೋಲ್, ಡಿಸೇಲ್ ಖರೀದಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಎರಡು ಲೀಟರ್ ಪೆಟ್ರೋಲ್, ಐದು ಲೀಟರ್ ಡಿಸೇಲ್ ತಂದು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎನ್ನುವ ಬಗ್ಗೆ ಕೆಲವು ಪೂರಕ ಅಂಶಗಳು ಪತ್ತೆಯಾಗಿವೆ.
ಇದನ್ನೂ ಓದಿ: ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಸಜೀವ ದಹನ: ನಿರ್ವಾಹಕ ಸಾವಿನ ಸುತ್ತ ಅನುಮಾನಗಳ ಹುತ್ತ
ಬಸ್ ಹಾಲ್ಟ್ ಆದ ನಂತರ ಹೊರ ಹೋಗಿ ಬಂದಿದ್ದ ಮುತ್ತಯ್ಯ, ಡ್ರೈವರ್ ಪ್ರಕಾಶ್ ನನ್ನ ಮಲಗುವಂತೆ ಹೇಳಿ ಕಳುಹಿಸಿದ್ದರು. ಬಳಿಕ ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಸಿಕ್ಕಿದೆ. ಅಲ್ಲದೇ ಬಸ್ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಆಗಿದ್ದವು ಎನ್ನುವುದು ಕೂಡು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಬೆಂಕಿ ಹೊತ್ತಿಕೊಂಡ ನಂತರ ಬೆಂಕಿಯ ತೀವ್ರತೆ ಮತ್ತು ಹೊಗೆಯಿಂದಾಗಿ ಕಿಟಕಿ ಗಾಜುಗಳು ಸ್ಪೋಟಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆದ್ರೆ ಈ ಎಲ್ಲದಕ್ಕೂ ಎಫ್ಎಸ್ಎಲ್ ರಿಪೋರ್ಟ್ ನಿಂದ ಅಂತಿಮ ಸತ್ಯ ತಿಳಿಯಲಿದೆ. ಇದಲ್ಲದೆ ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಎವಿಡೆನ್ಸ್ ಕಲೆ ಹಾಕುತ್ತಿರುವ ಪೊಲೀಸರು, ಮುತ್ತಯ್ಯ ಹಣಕಾಸು ವಿಚಾರದ ಬಗ್ಗೆ ಸಂಬಂಧಪಟ್ಟವರನನ್ನು ವಿಚಾರಣೆ ನಡೆಸಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ, ಕಾರಣ ಏನು ಎಂಬುದು ತಿಳಿಯಬೇಕು.
Published On - 11:16 am, Thu, 23 March 23