ಚಾಮರಾಜನಗರ, ಡಿ.4: ನಾಪತ್ತೆಯಾಗಿದ್ದ ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ (CP Yogeshwar) ಅವರ ಭಾವ ಮಹದೇವಯ್ಯ ಅವರು ಶವವಾಗಿ ಪತ್ತೆಯಾಗಿದ್ದಾರೆ. ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹದೇವಯ್ಯನವರ ಮೃತದೇಹ ಪತ್ತೆಯಾಗಿದೆ. ಬೆಡ್ಶೀಟ್ ಹೊದಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹದೇವಯ್ಯ ಅವರನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಸ್ಥಳದಿಂದ 6 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಡಿಸೆಂಬರ್ 2 ರಂದು ಏಕಾಏಕಿ ನಾಪತ್ತೆಯಾಗಿದ್ದರು. ಇವರ ಮತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಡಿಸೆಂಬರ್ 3 ರಂದು ಮಹದೇವಯ್ಯ ಅವರ ಕಾರು ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ; ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಭಾವ ಮಹದೇವಯ್ಯ ಸುಪಾರಿ ಹತ್ಯೆ ಶಂಕೆ: ತನಿಖೆ ಚುರುಕು
ಕಾರು ಪತ್ತೆಯಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಮನಗರ ಪೊಲೀಸರು ತನಿಖಾ ತಂಡಕ್ಕೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಈ ವೇಳೆ ಕಾರಿನಲ್ಲಿ ರಕ್ತದ ಕಲೆ ಇರುವುದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಶೋಧಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದರು.
ಡಿಸೆಂಬರ್ 1ರ ಮಧ್ಯರಾತ್ರಿ ರಾಮನಗರ ಜಿಲ್ಲೆ ಚನ್ನಪಟ್ಟಣ ಹೊರವಲಯದಲ್ಲಿರುವ ತೋಟದ ಮನೆಗೆ ನುಗ್ಗಿದ್ದ ಮೂವರು ಅಪರಿಚಿತರು, ಮಹದೇವಯ್ಯ ಅವರಿಂದ ಲಾಕರ್ ತೆಗೆಸಿ ಹಣ, ದಾಖಲೆ ಕೊಂಡೊಯ್ದಿರುವ ಅನುಮಾನ ವ್ಯಕ್ತವಾಗಿತ್ತು. ಮಹದೇವಯ್ಯ ಕಾರಿನಲ್ಲೇ ಅವರನ್ನು ಕರೆದೊಯ್ದಿರುವ ಅಪರಿಚಿತರು, ಚನ್ನಪಟ್ಟಣದಿಂದ ಚಾಮರಾಜನಗರ ಜಿಲ್ಲೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಳಿ ಡಾಬಾದಲ್ಲಿ ಪಾರ್ಟಿ ಮಾಡಿರುವ ದುಷ್ಕರ್ಮಿಗಳ ಗುಂಪು, ಅದೇ ಮಾರ್ಗದ ಅಂಗಡಿಯೊಂದರಲ್ಲಿ ನೀರಿನ ಬಾಟಲಿ ಖರೀದಿಸಿತ್ತು. ನಂತರ ಹನೂರು ತಾಲೂಕಿನ ನಾಲಾರೋಡ್ ಬಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ