ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಆಕೆಯ ತಂದೆ ಕೋರ್ಟ್ ಆವರಣದಲ್ಲಿಯೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶ(Uttar Pradesh)ದ ಗೋರಖ್ಪುರದಲ್ಲಿ ನಡೆದಿದೆ. ಈ ಅತ್ಯಾಚಾರ ಸಂತ್ರಸ್ತೆಯ ತಂದೆ ಗಡಿ ಭದ್ರತಾ ಪಡೆಯ (BSF) ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರಿಗೀಗ ಸುಮಾರು 50 ವರ್ಷ. ಆರೋಪಿ ದಿಲ್ಶಾದ್ ಹುಸೇನ್ (30)ನನ್ನು ಗೋರಖ್ಪುರ ಜಿಲ್ಲೆ ಸಿವಿಲ್ ಕೋರ್ಟ್ ಆವರಣದಲ್ಲಿಯೇ ಕೊಂದಿದ್ದಾರೆ. ಆರೋಪಿಯ ತಲೆಗೆ ನೇರವಾಗಿ ಗುಂಡುಹೊಡೆದು ಹತ್ಯೆ ಮಾಡಿದ್ದಾರೆ. ಆವರಣದಲ್ಲಿ ಆರೋಪಿಯನ್ನು ಕೊಂದ ಮಾಜಿ ಬಿಎಸ್ಎಫ್ ಯೋಧನನ್ನು ಅಲ್ಲಿಯೇ ಇದ್ದ ಪೊಲೀಸರು ಹಿಡಿದಿದ್ದಾರೆ. ಹಾಗಂತ ಅವರ ವಿರುದ್ಧ ಪ್ರಕರಣ ದಾಖಲಾದ ಬಗ್ಗೆ ಸದ್ಯ ಮಾಹಿತಿ ಇಲ್ಲ.
ದಿಲ್ಶಾದ್ ಹುಸೇನ್ ಮೂಲತಃ ಬಿಹಾರದ ಮುಜಾಫರ್ಪುರದವನು. ಈತ ನಿವೃತ್ತ ಬಿಎಸ್ಎಫ್ ಯೋಧನ ಅಪ್ರಾಪ್ತ ಪುತ್ರಿಯ ಮೇಲೆ ಎರಡು ವರ್ಷಗಳ ಹಿಂದೆ ಅತ್ಯಾಚಾರ ಮಾಡಿದ್ದ. ಆತನ ವಿರುದ್ಧ ಪೋಕ್ಸೋ ಕಾಯ್ದೆ (POCSO Act)ಯಡಿ ಪ್ರಕರಣ ದಾಖಲಾಗಿತ್ತು. ಹಾಗಿದ್ದಾಗ್ಯೂ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಆದರೆ ಗೋರಖ್ಪುರದ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಆತ ವಿಚಾರಣೆಗೆ ಹಾಜರಾಗಬೇಕಿತ್ತು. ಅದರಂತೆ ಶುಕ್ರವಾರ ಆರೋಪಿ ಕೋರ್ಟ್ಗೆ ಬಂದಿದ್ದ. ತನ್ನ ಪರ ವಕೀಲನನ್ನು ಭೇಟಿಯಾಗಲು ನ್ಯಾಯಾಲಯ ಆವರಣದೊಳಗೆ ಬಂದಿದ್ದರೂ, ಒಳಗೆ ಪ್ರವೇಶಕ್ಕೆ ತಡೆಯಲಾಯಿತು. ಕೊವಿಡ್ 19 ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆತನನ್ನು ಅಲ್ಲಿ ತಡೆದು ನಿಲ್ಲಿಸಲಾಗಿತ್ತು. ಇದೇ ವೇಳೆ ಅಲ್ಲಿದ್ದ ಮಾಜಿ ಯೋಧ, ಸಂತ್ರಸ್ತೆಯ ಅಪ್ಪ ಆತನ ತಲೆಗೆ ಗುಂಡು ಹೊಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಗೋರಖ್ಪುರ ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ತಾಡಾ, ಮಾಜಿ ಯೋಧನನ್ನು ನಾವು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ. ಈ ವೇಳೆ ಅವರು ದಿಲ್ಶಾದ್ ಕೃತ್ಯದ ಬಗ್ಗೆ ವಿವರಿಸಿದ್ದಾರೆ. 2020ರ ಫೆಬ್ರವರಿಯಲ್ಲಿ ತಮ್ಮ ಮಗಳ ಮೇಲೆ ಆತ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಇನ್ನು ಮೃತ ಅತ್ಯಾಚಾರ ಆರೋಪಿಯ ಶವವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. ದಿಲ್ಶಾದ್ ಹುಸೇನ್, ಬರ್ಹಲ್ಗಂಜ್ ಎಂಬಲ್ಲಿ ಸೈಕಲ್ ರಿಪೇರಿ ಮಾಡುವ ಅಂಗಡಿಯಿಟ್ಟಿದ್ದ. ಈತನ ಶಾಪ್ ಬಳಿಯೇ ಈ ಮಾಜಿ ಯೋಧನ ಮನೆಯಿತ್ತು. 2020ರ ಫೆಬ್ರವರಿ 12ರಂದು ದಿಲ್ಶಾದ್, ಮಾಜಿ ಯೋಧನ ಅಪ್ರಾಪ್ತ ಪುತ್ರಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಅದಾದ ನಂತರ ಆಕೆಯ ತಂದೆಯೇ ದೂರು ನೀಡಿದ್ದರು. 2021ರ ಮಾರ್ಚ್ 12ರಂದು ಹೈದರಾಬಾದ್ನಲ್ಲಿ ದಿಲ್ಶಾದ್ ಅರೆಸ್ಟ್ ಆಗಿದ್ದ. ಆದರೆ ನಂತರದ ದಿನಗಳಲ್ಲಿ ಈತನಿಗೆ ಜಾಮೀನು ಸಿಕ್ಕಿತ್ತು.
ಇದನ್ನೂ ಓದಿ: ಗದಗ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು! ಒಂದು ನರ್ಸಿಂಗ್ ಹುದ್ದೆಗೆ 1 ಲಕ್ಷ ರೂ. ಡಿಮ್ಯಾಂಡ್