ಆನೇಕಲ್ ನ.27: ಒಂದೂವರೆ ಗುಂಟೆ ಜಾಗಕ್ಕಾಗಿ ಅಣ್ಣನ ಹತ್ಯೆಗೆ ಸಹೋದರೇ ಸುಪಾರಿ ನೀಡಿದ್ದಾರೆ. ಕ್ಯಾಲಸನಹಳ್ಳಿ ನಿವಾಸಿ ಚಂದ್ರಪ್ಪನ ಹತ್ಯೆಗೆ ಚಿಕ್ಕಪ್ಪನ ಮಕ್ಕಳಾದ ಸಂಪಂತ್ ಕುಮಾರ್ ಅಲಿಯಾಸ್ ಸಂತೋಷ್, ಅರುಣ್ ಕುಮಾರ್ 1.5 ಲಕ್ಷ ರೂ. ಸುಪಾರಿ ನೀಡಿದ್ದರು. ಸುಪಾರಿ ಪಡೆದಿದ್ದ ಆನಂದ್, ಹರ್ಷವರ್ಧನ್ ಹಾಗೂ ವಿಜಯ್ ಕುಮಾರ್ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದ ಬಳಿಯ ಸಾಯಿಬಾಬಾ ದೇಗುಲದ ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಚಂದ್ರಪ್ಪ ಮೇಲೆ ಲಾಂಗ್ನಿಂದ ಹಲ್ಲೆ ಮಾಡಲು ಯತ್ನಿಸಿದರು.
ಆರೋಪಿಗಳು ಲಾಂಗ್ ಬೀಸುತ್ತಿದ್ದಂತೆ ಎಚ್ಚೆತ್ತ ಚಂದ್ರಪ್ಪ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಚಂದ್ರಪ್ಪ ಅವರ ಕೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೆಚ್ ಫೆಲ್ಯೂರ್ ಆಗುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕೋಲಾರ: ಮಚ್ಚಿನಿಂದ ಹಲ್ಲೆ ನಡೆಸಿ ಸೆಕ್ಯೂರಿಟಿ ಗಾರ್ಡ್ ಹತ್ಯೆ
ಆಸ್ಪತ್ರೆಯಿಂದ ಮನೆಗೆ ಬಂದ ಚಂದ್ರಪ್ಪ ಅವರನ್ನು ನೋಡಲು ಸಂಪತ್ ಅಲಿಯಾಸ್ ಸಂತೋಷ್ ಬಂದಿದ್ದನು. ತನಗೇನು ತಿಳಿಯದಂತೆ ಚಂದ್ರಪ್ಪ ಅವರ ಎದರು ನಾಟಕವಾಡಿದ್ದನು. ಆದರೆ ಹೆಬ್ಬಗೋಡಿ ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಪ್ರಕರಣ ಹೊರಬಂದಿದ್ದು, ಚಂದ್ರಪ್ಪನ ಹತ್ಯೆ ಮಾಡಲು ಯತ್ನಿಸಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ