ಚಿಕ್ಕಬಳ್ಳಾಪುರ: ಎಸಿಬಿ ರದ್ದುಗೊಂಡ ನಂತರ ರಾಜ್ಯದಲ್ಲಿ ಭ್ರಷ್ಟರ ಬೇಟೆಯಾಡುತ್ತಿರುವ ಲೋಕಾಯುಕ್ತ ಅಲ್ಲೊಂದು ಇಲ್ಲೊಂದು ಬೇಟೆಯಾಡುತ್ತಲೇ ಇದೆ. ನಿನ್ನೆ ಬೆಂಗಳೂರು, ಕೊಡಗು, ಮೈಸೂರಿನಲ್ಲಿ ಒಟ್ಟು ಮೂವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಇಂದು ಚಿಕ್ಕಬಳ್ಳಾಪುರದಲ್ಲಿ ಮತ್ತು ಕೋಲಾರದಲ್ಲಿ ಬೇಟೆಯಾಡುತ್ತಿದೆ. ವಾಹನ ಚಾಲಕರಿಂದ ಹೆಚ್ಚುವರಿ ಹಣ ವಸೂಲಿ ಆರೋಪ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಆರ್ಟಿಒ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಈ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿದಾಗ ಹಣ ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ದಾಖಲೆಗಳ ಜೊತೆ ಹಣದ ಮೂಲದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರ್ಟಿಒ ಇನ್ಸ್ಪೆಕ್ಟರ್ ಮಹಾದೇವಪ್ಪ ಮತ್ತು ಸಿಬ್ಬಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಎಇಇ ಲೋಕಾಯುಕ್ತ ಬಲೆಗೆ
ಕೋಲಾರ: ನಿನ್ನೆಯಷ್ಟೇ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಸ್ಕಾಂ ಎಇ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಇದೀಗ ಕೋಲಾರದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಲಂಚಕ್ಕೆ ಕೈಯೊಡ್ಡುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕೋಲಾರ ಸಣ್ಣನೀರಾವರಿ ಇಲಾಖೆ ಎಇಇ ಗುರುಶಂಕರ್ ಅವರು ಚೆಕ್ ಡ್ಯಾಂ ನಿರ್ಮಾಣದ ಬಿಲ್ ನೀಡಲು ಮಾಲೂರು ಗುತ್ತಿಗೆದಾರ ರಾಘವೇಂದ್ರ ಎಂಬುವರಲ್ಲಿ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಕೋಲಾರ ತಾಲ್ಲೂಕು ನರಸಾಪುರ ರಾಷ್ಟ್ರೀಯ ಹೆದ್ದಾರಿ-75 ರ ಕಾಫಿಡೇ ಡೇ ಬಳಿ 40 ಲಕ್ಷ ರೂ. ಪೈಕಿ 40 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿ ಗುರುಶಂಕರ್ರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Sat, 22 October 22