ಗಂಡನ ಅನುಮಾನದ ಭೂತಕ್ಕೆ ಬಲಿಯಾದ ಹೆಂಡ್ತಿ: ಪೊಲೀಸ್​​ ಮುಂದೆ ಪತ್ನಿಯ ಲವ್ವಿಡವ್ವಿ ಬಿಚ್ಚಿಟ್ಟ ಪತಿ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಎಮ್ಮಿಗನೂರಿ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ದಾರುಣ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಲಾಗಿದೆ. ಸದ್ಯ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡನ ಅನುಮಾನದ ಭೂತಕ್ಕೆ ಬಲಿಯಾದ ಹೆಂಡ್ತಿ: ಪೊಲೀಸ್​​ ಮುಂದೆ ಪತ್ನಿಯ ಲವ್ವಿಡವ್ವಿ ಬಿಚ್ಚಿಟ್ಟ ಪತಿ
ಪತಿಯಿಂದಲೇ ಪತ್ನಿಯ ಹತ್ಯೆ
Edited By:

Updated on: Jan 27, 2026 | 4:26 PM

ಚಿತ್ರದುರ್ಗ, ಜನವರಿ 27: ಆ ಕುಟುಂಬಕ್ಕೆ ಪತ್ನಿಯೇ ಆಧಾರ ಸ್ತಂಭವಾಗಿದ್ದರು. ಕ್ಯಾನ್ಸರ್ ಪೀಡಿತ ಪತಿಯ ಆರೈಕೆ ಜತೆಗೆ ಮನೆಯ ಜವಾಬ್ದಾರಿ ಕೂಡ ಹೊತ್ತಿದ್ದರು. ಆದರೆ ಪತಿಯ ತಲೆಗೆ ಹೊಕ್ಕ ಅನುಮಾನದ ಶಂಕೆಯೊಂದು ಪತ್ನಿಯ ಕೊಲೆ (murder) ಮಾಡಿಸಿದೆ. ಕೋಲಿನಿಂದ ತಲೆಗೆ ಹೊಡೆದು ಪತಿ (Husband)  ರವಿಕುಮಾರ್​​ ಪತ್ನಿ ಮಮತಾ(45)ರನ್ನು ಹತ್ಯೆಗೈದಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಡೆದದ್ದೇನು? 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇ ಎಮ್ಮಿಗನೂರು ಗ್ರಾಮ ಇಂದು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು. ಬೆಳಗ್ಗೆ 6:30ರ ಸುಮಾರಿಗೆ ಮಮತಾ(45) ಹೆಣವಾಗಿದ್ದರು. ಮನೆಯಲ್ಲಿ ಯಾವುದೇ ಫೈಲ್ ಹುಡುಕುವ ವೇಳೆ ಏಣಿಯಿಂದ ಬಿದ್ದು ತೆಲೆಗೆ ಪೆಟ್ಟಾಗಿ, ರಕ್ತಸ್ರಾವದಿಂದ ಸಿರುಚೆಲ್ಲಿದ್ದಾರೆ ಎಂದು ಪತಿ ಕಥೆ ಕಟ್ಟಿದ್ದ.

ಇದನ್ನೂ ಓದಿ: ಹೆತ್ತ ತಾಯಿಯನ್ನೇ ಅಟ್ಟಾಡಿಸಿ ಕೊಂದ ರಕ್ಕಸ ಮಗ: ಕಾರಣ ಕೇಳಿದ್ರೆ ಎಂತವರಿಗೂ ಪಿತ್ತ ನೆತ್ತಿಗೇರುತ್ತೆ!

ಮನೆಯ ಜವಾಬ್ದಾರಿ ಹೊತ್ತಿದ್ದ ಮಮತಾ ಕ್ಯಾನ್ಸರ್ ಪೀಡಿತ ಪತಿ ರವಿಕುಮಾರ್ (52)ನನ್ನು ಆರೈಕೆ ಮಾಡುತ್ತಿದ್ದರು. ಹೀಗಾಗಿ ಗ್ರಾಮಸ್ಥರು ಸಹ ಸಹಜವಾಗಿಯೇ ನಂಬಿದ್ದರು. ಜೊತೆಗೆ ಅನ್ಯೋನ್ಯವಾಗಿದ್ದ ದಂಪತಿ ಗಲಾಟೆ ಮಾಡಿದ್ದು, ಯಾರೂ ಕಂಡಿರಲಿಲ್ಲ. ಆದರೆ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದಾಗ ಅಸಲಿಯತ್ತು ಬಯಲಾಗಿತ್ತು.

ಅಕ್ರಮ ಸಂಬಂಧ ಹಿನ್ನೆಲೆ ಹತ್ಯೆ

ಚಿತ್ರದುರ್ಗ ಎಸ್​ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್​​ಪಿ ಪಿ. ದಿನಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕಜಾಜೂರು ಠಾಣೆ ಪೊಲೀಸರು ಆರೋಪಿ ರವಿಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮನೆಯ ಖರ್ಚು, ವೆಚ್ಚ, ಸಾಲ-ಸೋಲ ಮತ್ತು ಆಸ್ತಿ ಮಾರಾಟದ ಬಗ್ಗೆ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿತ್ತು. ಅದೇ ಕಾರಣಕ್ಕೆ ಮನೆಯಲ್ಲಿದ್ದ ಕೋಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಆದರೆ ಆರೋಪಿ ರವಿ ಮಾತ್ರ ಪತ್ನಿಗೆ ಅಕ್ರಮ ಸಂಬಂಧ ಇತ್ತು. ಹೀಗಾಗಿ, ಕೊಲೆ ಮಾಡಿದ್ದೇನೆಂದು ಪೊಲೀಸರೆದುರು ಒಪ್ಪಿಕೊಂಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ದೇವನಹಳ್ಳಿ: ಸಿಗರೇಟ್ ಸೇದಲು ಮ್ಯಾಚ್ ಬಾಕ್ಸ್ ಕೊಡದ್ದಕ್ಕೆ ಜೀವವೇ ಹೋಯ್ತು!

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಹಿರೇ ಎಮ್ಮಿಗನೂರು ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಂದು ಹಾಕಿದ ದಾರುಣ ಘಟನೆ ನಡೆದಿದೆ. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಅಸಲಿಗೆ ಕೊಲೆಗೆ ಕಾರಣವೇನು ಎಂಬುದು ಪತ್ತೆ ಹಚ್ಚಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.