ಕ್ಲಬ್ ಹೌಸ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ: ಆರೋಪಿಗಳ ತೀವ್ರ ವಿಚಾರಣೆ, ಮೂವರಿಗಾಗಿ ಮುಂದುವರಿದ ಶೋಧ
ಕ್ಲಬ್ ಹೌಸ್ನಲ್ಲಿ ಪಾಕ್ ಪರ ಘೋಷಣೆ ಕೂಗಿ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ಬೆಂಗಳೂರು ನಗರದ ಸಂಪಿಗೆಹಳ್ಳಿ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೆಂಗಳೂರು: ಸೋಷಿಯಲ್ ಮೀಡಿಯಾ ಆ್ಯಪ್ ಕ್ಲಬ್ ಹೌಸ್ನಲ್ಲಿ ಪಾಕ್ ಪರ ಘೋಷಣೆ ಕೂಗಿ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ಬೆಂಗಳೂರು ನಗರದ ಸಂಪಿಗೆಹಳ್ಳಿ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದ್ದು, ಉಳಿದ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸುರಭ್ ಮತ್ತು ರಾಹುಲ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ತೀವ್ರ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಕ್ಲಬ್ ಹೌಸ್ನಲ್ಲಿ ಚರ್ಚೆ ನಡೆಸುತ್ತಿದ್ದ ವೇಳೆ ಕೆಲವರು ಪಾಕ್ ಪರ ಘೋಷಣೆ ಕೂಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಐಪಿಸಿ ಸೆಕ್ಷನ್ 153ಎ ಅಡಿ (ಧರ್ಮ,ಬಣ್ಣ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಮತ್ತಿತರ ಆಧಾರದ ಮೇಲೆ ಬೇರೆ ಬೇರೆ ಧರ್ಮಗಳ ನಡುವೆ ದ್ವೇಷಕ್ಕೆ ಪ್ರಚೋದನೆ) ಸ್ವಯಂ ದೂರು ದಾಖಲಿಸಿಕೊಂಡು ಇಬ್ಬರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಠಾಣೆಗೆ ಆಗಮಿಸಿದ ಬಳ್ಳಾರಿ ಮೂಲದ ಸುರಭ್ ಮತ್ತು ಬೆಂಗಳೂರಿನ ಸಹಕಾರನಗರದ ರಾಹುಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದು, ವಿಚಾರಣೆ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಸುರಭ್ ಮಾನ್ಯತಾ ಟೆಕ್ ಪಾರ್ಕ್ನ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾನೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಮೂವರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಕತ್ತಿನ ಪ್ರಶ್ನೆಗೆ ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳು
ಚರ್ಚೆ ವೇಳೆ ಗ್ರೂಪ್ನಲ್ಲಿ ತಾಕತ್ತಿನ ಪ್ರಶ್ನೆಯನ್ನು ಎತ್ತಲಾಗಿದೆ. ಗ್ರೂಪ್ನಲ್ಲಿ ಹುಚ್ಚಾಟ ಮರೆದ ಕೆಲವರು ನಿಮಗೆ ತಾಕತ್ ಇದ್ರೆ ಪಾಕ್ ಪರ ಘೋಷಣೆ ಕೂಗಿ ಎಂದು ಸವಾಲು ಹಾಕಿದ್ದಾರೆ. ನಮ್ಮ ತಾಕತ್ ಬಗ್ಗೆ ಪ್ರಶ್ನೆ ಮಾಡ್ತೀರಾ ಅಂಥ ಅಂದುಕೊಂಡು ಸವಾಲನ್ನು ಸ್ವೀಕರಿಸಿದ ಆರೋಪಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ. ತಮಾಷೆ ಮಾಡಲು ಹೋಗಿ ಈ ರೀತಿ ಆಗಿದೆ ಎಂದು ಪೊಲೀಸರು ಮುಂದೆ ಆರೋಪಿಗಳು ಹೇಳಿಕೆ ನೀಡಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ