ಬೆಂಗಳೂರು: ಬಾಲಕನ ಅಪಹರಣ ಸಂಬಂಧ ದೂರು ಬಂದ ಕೂಡಲೇ ಆ್ಯಕ್ಟೀವ್ ಆದ ಪೊಲೀಸರು ಮೊಬೈಲ್ ಟವರ್ ಲೊಕೇಷನ್ ಆಧರಿಸಿ, ಕೇವಲ ಒಂದೂವರೆ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಚಿರಾಗ್ ಆರ್.ಮೆಹ್ತಾ(21) ಬಂಧಿತ ಆರೋಪಿ.
ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರಿಂದ 10 ವರ್ಷದ ಬಾಲಕನನ್ನು ಆರೋಪಿ ಚಿರಾಗ್ ಅಪಹರಿಸಿದ್ದ. ಕಿಡ್ನ್ಯಾಪ್ ನಂತರ ಬಾಲಕನ ತಂದೆಗೆ ಕರೆ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಲ್ಯಾವೆಲ್ಲಿ ರಸ್ತೆಯ ಏರ್ಲೈನ್ಸ್ ಹೋಟೆಲ್ ಬಳಿ ಬಂದಿದ್ದ ಆರೋಪಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದವನ ಮೊಬೈಲ್ನಿಂದ ಕರೆ ಮಾಡಿದ್ದಾನೆ. ನಂತರ ಬಾಲಕನ ತಂದೆ ಕಾಟನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಟವರ್ ಲೊಕೇಷನ್ ಆಧರಿಸಿ ಆರೋಪಿಯನ್ನ ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಏರ್ಲೈನ್ಸ್ ಹೋಟೆಲ್ ಬಳಿ ಲ್ಯಾವೆಲ್ಲಿ ರಸ್ತೆಯ ಪಾರ್ಕಿಂಗ್ನಲ್ಲಿ ಬೌನ್ಸ್ ಬೈಕ್ ಮೇಲೆ ಮಗುವನ್ನು ಕೂರಿಸಿದ್ದ. ಲೊಕೇಷನ್ ಆಧರಿಸಿ ಬೆನ್ನತ್ತಿದ್ದ ಪೊಲೀಸರನ್ನು ಕಂಡು ಓಡುವ ವೇಳೆ ಕಾರು ಡಿಕ್ಕಿಯಾಗಿ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಗುವನ್ನು ಸುರಕ್ಷಿತವಾಗಿ ತಂದೆ ಕೈಗೆ ಒಪ್ಪಿಸಿದ್ದಾರೆ.
ಟಿವಿಗಳಲ್ಲಿ ಕ್ರೈಂ ಸೀರಿಯಲ್ ನೋಡಿ ಕಿಡ್ನ್ಯಾಪ್ ಪ್ಲ್ಯಾನ್:
ಇನ್ನು ಕಿಡ್ನ್ಯಾಪ್ ಆರೋಪಿ ಚಿರಾಗ್ ಬಸವನಗುಡಿಯಲ್ಲಿ ವಾಸವಾಗಿದ್ದ. ಕೆಲಸ ಇಲ್ಲದೆ ಮನೆಯಲ್ಲಿ ಟಿವಿ ನೋಡುವುದೇ ಇವನ ನಿತ್ಯದ ಕಾಯಕವಾಗಿತ್ತು. ಟಿವಿಗಳಲ್ಲಿ ಕ್ರೈಂ ಸೀರಿಯಲ್ ನೋಡಿ ಕಿಡ್ನ್ಯಾಪ್ಗೆ ಪ್ಲ್ಯಾನ್ ಮಾಡಿದ್ದಾನೆ. ಈ ಹಿಂದೆ ಒಮ್ಮೆ ತನ್ನ ಮನೆಯಲ್ಲೇ ಕದ್ದು ತಂದೆ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಕೆಲ ದಿನಗಳ ಹಿಂದಷ್ಟೇ ಬಾಲಕನೊಬ್ಬನನ್ನು ಅಪಹರಿಸಿದ್ದ. ಆಗ ಗೆಳೆಯರು ಬುದ್ಧಿವಾದ ಹೇಳಿದ್ದಕ್ಕೆ ಬಾಲಕನನ್ನ ಬಿಟ್ಟಿದ್ದ. ಆದರೆ ಈ ಬಾರಿ ಹಣಕ್ಕಾಗಿ ಶಾಲೆ ಬಳಿ ಬಾಲಕನನ್ನು ಅಪಹರಿಸಿ ಪೊಲೀಸರ ಅತಿಥಿಯಾಗಿದ್ದಾನೆ.
Published On - 2:52 pm, Wed, 29 January 20