ಹೈದರಾಬಾದ್, ಜು.27: ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ರೀಲ್ಸ್ಗೆ (Instagram) ಮತ್ತು ಯೂಟ್ಯೂಬ್ ಶಾರ್ಟ್ಸ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವತಿಯನ್ನು, ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಹೈದರಾಬಾದ್ನ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯ ಯೆಲ್ಲಾಂಡು ಪಟ್ಟಣದಲ್ಲಿ ನಡೆದಿದೆ. 21 ವರ್ಷದ ಟ್ರೈನಿ ನರ್ಸ್ನ್ನು ಸಹೋದರ ಕೊಂದಿದ್ದಾನೆ ಎಂದು ಪೊಲೀಸ್ ತಿಳಿಸಿದ್ದಾರೆ. ಸಾವನ್ನಪ್ಪಿರುವ ಯುವತಿಯನ್ನು ಅಜ್ಮೀರಾ ಸಾಂಘ್ವಿ ಎಂದು ಗುರುತಿಸಲಾಗಿದೆ. ಮೃತ ಅಜ್ಮೀರಾ ಸಾಂಘ್ವಿ ಇತ್ತೀಚೆಗೆ ಆಕ್ಸಿಲಿಯರಿ ನರ್ಸ್ ಮಿಡ್ವೈಫ್ ಕೋರ್ಸ್ ಮುಗಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇನ್ನೂ ಈಕೆಯ ಸಹೋದರ ಹಲವು ಬಾರಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಬೇಡ ಎಂದು ಎಚ್ಚರಿಕೆ ನೀಡಿದ್ದ ಎಂದು ಹೇಳಲಾಗಿದೆ. ಆರೋಪಿಯನ್ನು ಅಜ್ಮೀರಾ ಹರಿಲಾಲ್ ಎಂದು ಗುರುತಿಸಲಾಗಿದೆ.
ಸಹೋದರ ಮಾತನ್ನು ನಿರ್ಲಕ್ಷಿಸಿ ಅಜ್ಮೀರಾ ಸಾಂಘ್ವಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಳು ಎಂದು ವರದಿಯಲ್ಲಿ ತಿಳಿಸಲಾಗಿದೆ. ಜು.24ರಂದು ಆಕೆ ತನ್ನ ಸಹೋದರ ಮುಂದೆಯೇ ವಿಡಿಯೋ ಮಾಡಿದ್ದಾಳೆ, ಇದನ್ನು ನೋಡಿದ ಸಹೋದರ ಆಕೆಯ ಜತೆಗೆ ವಾಗ್ವಾದಕ್ಕಿಳಿದ್ದಾರೆ. ಈ ಸಮಯದಲ್ಲಿ ಸಹೋದರ ಅಜ್ಮೀರಾ ಹರಿಲಾಲ್ ಕುಟ್ಟಾಣಿ (pestle)ಯಿಂದ ಆಕೆಗೆ ಹೊಡೆದಿದ್ದಾನೆ. ನಂತರ ಆಕೆಯ ತಾಯಿ ಅಜ್ಮೀರಾ ಸಾಂಘ್ವಿನ್ನು ಖಮ್ಮಮ್ನ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ: ಸಮಾಲೋಚನೆ ವೇಳೆ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ
ಅಜ್ಮೀರಾ ಹರಿಲಾಲ್ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಆಕೆಯನ್ನು ಖಮ್ಮಮ್ನ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸೆಗಾಗಿ ವಾರಂಗಲ್ನ ಮತ್ತೊಂದು ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ನಲ್ಲಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ಹೇಳಿದ್ದಾರೆ. ಇನ್ನೂ ಅಜ್ಮೀರಾ ಸಾಂಘ್ವಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Thu, 27 July 23