ಪುರಿ: ಒಡಿಶಾದ ಕನಾಸ್ ಪ್ರದೇಶದಲ್ಲಿ ಬಾಲಕಿಯೊಬ್ಬಳನ್ನು ಕೊಂದು, ಆಕೆಯ ಮೃತದೇಹವನ್ನು ಬ್ಯಾಗ್‌ನಲ್ಲಿ ತುಂಬಿ ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ. ಬ್ಯಾಗ್ನೊಳಗಿದ್ದ ಬಾಲಕಿಯ ಮೃತದೇಹದ ಕೈ ಮತ್ತು ಕಾಲುಗಳನ್ನು ಕಟ್ಟಲಾಗಿದ್ದು, ಆಕೆಯನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಆದರೆ, ಆಕೆ ಯಾರು, ಯಾರು ಕೊಲೆ ಮಾಡಿದ್ದಾರೆಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪುರಿ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಕೊಲೆ ಮಾಡಿದ್ದಷ್ಟೇ ಅಲ್ಲದೆ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ. ಗಡಿಸಗಡ ಪೊಲೀಸ್ ವ್ಯಾಪ್ತಿಯ ದಯಾ ನದಿಯ ದಡದಲ್ಲಿ ಆ ಬಾಲಕಿಯ ಶವ ಪತ್ತೆಯಾಗಿದೆ. ಆ ಬಾಲಕಿ ಯಾರೆಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಮೃತಳನ್ನು ಗುರುತಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ವಿಶೇಷ ಪೊಲೀಸ್ ತಂಡಗಳು ಪುರಿ ಮತ್ತು ಹತ್ತಿರದ ಜಿಲ್ಲೆಗಳ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸುತ್ತಿವೆ ಎಂದು ಪುರಿ ಎಸ್ಪಿ ಕನ್ವರ್ ವಿಶಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಬಾಲಕನನ್ನು ಹೊಡೆದು ಕೊಲೆ ಮಾಡಿದ ತಂದೆ ಅರೆಸ್ಟ್
ಈ ಪ್ರಕರಣದ ತನಿಖೆಗೆ ಈಗಾಗಲೇ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಲಾಗಿದೆ. ಗುರುತು ಪತ್ತೆಯಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫೋರೆನ್ಸಿಕ್ ತಜ್ಞರ ಸಮ್ಮುಖದಲ್ಲಿ ತಜ್ಞರ ತಂಡವು ಮರಣೋತ್ತರ ಪರೀಕ್ಷೆಯನ್ನು ನಡೆಸಲಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.