200 ರೂ. ತಂದೂರಿ ಚಿಕನ್​ಗಾಗಿ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯ ಬರ್ಬರ ಹತ್ಯೆ!

|

Updated on: Apr 30, 2024 | 5:24 PM

ಭಾನುವಾರ ರಾತ್ರಿ ಮುಲುಂಡ್ ಪ್ರದೇಶದಲ್ಲಿ 30 ವರ್ಷದ ಯುವಕನನ್ನು ಐವರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ. ತಂದೂರಿ ಚಿಕನ್ ಹಣದ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೇವಲ 200 ರೂ.ಗಾಗಿ ಯುವಕನೊಬ್ಬ ತನ್ನ ಅಮೂಲ್ಯ ಜೀವ ಕಳೆದುಕೊಂಡಿದ್ದಾನೆ.

200 ರೂ. ತಂದೂರಿ ಚಿಕನ್​ಗಾಗಿ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯ ಬರ್ಬರ ಹತ್ಯೆ!
ತಂದೂರಿ ಚಿಕನ್
Image Credit source: istock
Follow us on

ಮುಂಬೈ: ಮುಂಬೈನಲ್ಲಿ (Mumbai) ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಆಘಾತಕಾರಿ ಘಟನೆಯೊಂದು ನಡೆದಿದೆ. ಭಾನುವಾರ ರಾತ್ರಿ ಮುಲುಂಡ್ ಪ್ರದೇಶದಲ್ಲಿ 30 ವರ್ಷದ ಯುವಕನನ್ನು 5 ಜನರ ಗುಂಪೊಂದು ಹತ್ಯೆ (Murder) ಮಾಡಿದೆ. ತಂದೂರಿ ಚಿಕನ್ ಹಣದ ಗಲಾಟೆ ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. 200 ರೂಪಾಯಿಗಾಗಿ ಥಾಣೆ ನಿವಾಸಿಯಾದ ಅಕ್ಷಯ್ ನಾರ್ವೇಕರ್ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ಕೊಲೆ ಪ್ರಕರಣದ 5 ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ಯೂನ್‌ಗೆ ಬಿಲ್ ಕ್ಲಿಯರೆನ್ಸ್‌ಗೆ ಸಂಬಂಧಿಸಿದಂತೆ ಕ್ಷುಲ್ಲಕ ವಾಗ್ವಾದಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದಿರುವ ಆಘಾತಕಾರಿ ಘಟನೆ ಮುಂಬೈನ ಮುಲುಂಡ್ ಪಶ್ಚಿಮ ಪ್ರದೇಶದ ಚಿಕನ್ ಅಂಗಡಿಯಲ್ಲಿ ಭಾನುವಾರ ನಡೆದಿದೆ. ಈ ಘಟನೆಯಲ್ಲಿ ಹತ್ಯೆಗೀಡಾದ ವ್ಯಕ್ತಿಯ ಸ್ನೇಹಿತ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಐವರನ್ನು ಬಂಧಿಸಿದ್ದಾರೆ.

ಇಬ್ಬರು ಯುವಕರು (ಅಕ್ಷಯ್ ಮತ್ತು ಆತನ ಸ್ನೇಹಿತ ಆಕಾಶ್ ಸಾಬಳೆ) ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದಾಗ ಈ ಪ್ರಕರಣವು ಮೊದಲು ಬೆಳಕಿಗೆ ಬಂದಿದೆ. ಇಬ್ಬರನ್ನೂ ಜುಪಿಟರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅಕ್ಷಯ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು, ಸದ್ಯಕ್ಕೆ ಆಕಾಶ್ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನೇಹಾ ಕೊಲೆಯಾದ ದಿನದಿಂದ ಇವತ್ತಿನವರೆಗೆ ನನ್ನ ಹೇಳಿಕೆ ಮತ್ತು ನಿಲುವಿನಲ್ಲಿ ಬದಲಾವಣೆ ಇಲ್ಲ: ನಿರಂಜನ್ ಹಿರೇಮಠ

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಕ್ಷಯ್ ಮತ್ತು ಆತನ ಸ್ನೇಹಿತ ಆಕಾಶ್ ಭಾನುವಾರ ಮಧ್ಯಾಹ್ನ ಥಾಣೆಯ ಕಿಸಾನ್ ನಗರ ಪ್ರದೇಶದ ರೆಸ್ಟೋರೆಂಟ್‌ಗೆ ತಂದೂರಿ ಚಿಕನ್ ಖರೀದಿಸಲು ಹೋಗಿದ್ದಾರೆ. ಅಲ್ಲಿ ಪಾರ್ಸೆಲ್ ಪಡೆದ ನಂತರ ರೆಸ್ಟೋರೆಂಟ್ ನ ಕ್ಯಾಷಿಯರ್ 200 ರೂ. ಬಿಲ್ ಕೊಟ್ಟರು. ಆದರೆ ಇಬ್ಬರ ಬಳಿಯೂ ಕ್ಯಾಶ್ ಇಲ್ಲದ ಕಾರಣ ಬಿಲ್ ಪಾವತಿಗೆ ಕಾರ್ಡ್ ನೀಡಿದ್ದರು. ಆದರೆ ಆ ಹೋಟೆಲ್‌ನಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಮೆಷಿನ್ ಇರಲಿಲ್ಲ. ಆದ್ದರಿಂದ ಕ್ಯಾಷಿಯರ್ ಹಣವನ್ನು ಪಾವತಿಸಲು ಹೇಳಿದರು. ಇದೇ ವಿಚಾರವಾಗಿ ಅವರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಅಕ್ಷಯ್ ಗೂಗಲ್ ಪೇ ಮೂಲಕ 200 ರೂ. ಪಾವತಿ ಮಾಡುವುದಾಗಿ ಹೇಳಿದರೂ ಅದಕ್ಕೆ ಕ್ಯಾಷಿಯರ್ ನಿರಾಕರಿಸಿದರು. ಇದರಿಂದ ಅವರ ನಡುವಿನ ವಾಗ್ವಾದವು ಹೆಚ್ಚಾಯಿತು. ಈ ವೇಳೆ ಕೋಪಗೊಂಡ ಅಕ್ಷಯ್ ಮತ್ತು ಅವನ ಸ್ನೇಹಿತ ಆ ಕ್ಯಾಷಿಯರ್‌ಗೆ ನಾವು ಸಿಎಂ ಆಫೀಸ್​ನಲ್ಲಿ ಕೆಲಸ ಮಾಡುತ್ತೇವೆ, ನಿಮ್ಮ ರೆಸ್ಟೋರೆಂಟ್ ಮುಚ್ಚಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರು.

ಈ ಘಟನೆಯ ನಂತರ, ಆರೋಪಿಗಳಲ್ಲಿ ಒಬ್ಬ ಅಕ್ಷಯ್​ನನ್ನು ಕರೆದು ಮುಲುಂಡ್‌ನ ಅಂಗಡಿಯೊಂದಕ್ಕೆ ಬರಲು ಸೂಚಿಸಿದ್ದ. ಅವರ ವಾದ ಅಲ್ಲಿಯೂ ಮುಂದುವರೆಯಿತು. ನಂತರ ಆರೋಪಿಗಳು ತಮ್ಮ ಇನ್ನೂ 3-4 ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡು, ಕಬ್ಬಿಣದ ರಾಡ್​ನಿಂದ ಅಕ್ಷಯ್ ಹಾಗೂ ಆತನ ಸ್ನೇಹಿತ ಆಕಾಶ್ ಎಂಬುವವರಿಗೆ ಹೊಡೆದು ಹೊಟ್ಟೆಗೂ ಇರಿದಿದ್ದಾರೆ.

ಇದನ್ನೂ ಓದಿ: Chikkamagaluru: ಗಂಡನೊಂದಿಗೆ ಮನಸ್ತಾಪ: ಬಟ್ಟೆ ತೊಳೆಯಲು ಹೋಗಿದ್ದ ಪತ್ನಿಯನ್ನು ಹತ್ಯೆಗೈದ ಪತಿ

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಮುಲುಂಡ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಷ್ಟರಲ್ಲಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜುಪಿಟರ್ ಆಸ್ಪತ್ರೆಗೆ ಕರೆತರಲಾಯಿತು. ಗಾಯಗೊಂಡ ಇಬ್ಬರ ಪೈಕಿ ಅಕ್ಷಯ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕಾಶ್ ಅವರನ್ನು ಸಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಐವರ ವಿರುದ್ಧ ಮುಲುಂಡ್ ಪೊಲೀಸರು ಕೊಲೆ, ಸಂಚು ಮತ್ತು ಕೊಲೆ ಯತ್ನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಮ್ರಾನ್ ಮೆಹಮೂದ್ ಖಾನ್ (ವಯಸ್ಸು 27), ಸಲೀಂ ಮೆಹಮೂದ್ ಖಾನ್ (ವಯಸ್ಸು 29), ಫಾರೂಕ್ ಬಾಗವಾನ್ (ವಯಸ್ಸು 38), ನೌಶಾದ್ ಬಾಗವಾನ್ (ವಯಸ್ಸು 35) ಮತ್ತು ಅಬ್ದುಲ್ ಬಾಗವಾನ್ (40 ವರ್ಷ) ಅವರನ್ನು ಬಂಧಿಸಿದ್ದಾರೆ. ಎಲ್ಲ ಐವರನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Tue, 30 April 24