ಅಪ್ರಾಪ್ತ ಬಾಲಕನನ್ನು ಹೆದರಿಸಿ ಚಿನ್ನ ವಸೂಲಿ ಮಾಡಿದ ಆರೋಪಿಗಳು
ಅಪ್ರಾಪ್ತ ಬಾಲಕನನ್ನು ಹೆದರಿಸಿ 600-700 ಗ್ರಾಂ ಚಿನ್ನದ ಆಭರಣ ವಸೂಲಿ ಮಾಡಿದ್ದ ನಾಲ್ವರು ಆರೋಪಿಗಳನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಬಾಲಕರು ಕೂಡ ಭಾಗಿಯಾಗಿದ್ದು, ಇವರ ವಿರುದ್ಧ ಕೂನೂನು ರೀತಿ ಕ್ರಮ ಕೈಗೊಂಡು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 30: ಅಪ್ರಾಪ್ತ ಬಾಲಕನನ್ನು ಹೆದರಿಸಿ ಚಿನ್ನ ವಸೂಲಿ ಮಾಡಿದ್ದ ನಾಲ್ವರು ಆರೋಪಿಗಳನ್ನು ಆರ್ಆರ್ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರಿಂದ 302 ಗ್ರಾಂ ಚಿನ್ನದ ಗಟ್ಟಿಗಳು, 23.50 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಪ್ರಾಪ್ತ ಬಾಲಕ ಡ್ರೀಮ್ 11 ಆಡುತ್ತಿದ್ದನು. ಈ ವಿಚಾರವನ್ನು ನಿನ್ನ ಪೋಷಕರಿಗೆ ಹೇಳುತ್ತೇವೆ ಅಂತ ಆತನ ಸ್ನೇಹಿತರು, ಬಾಲಕನಿಗೆ ಹೆದರಿಸಿದ್ದಾರೆ. ಹೇಳಬಾರದೆಂದರೇ ಹಣಕ್ಕೆ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಆಗ ಬಾಲಕ ಹೆದರಿ ಮನೆಯಲ್ಲಿಟ್ಟಿದ್ದ 600-700 ಗ್ರಾಂ ಚಿನ್ನದ ಆಭರಣ ತಂದು ಸ್ನೇಹಿತರಿಗೆ ಕೊಟ್ಟಿದ್ದಾನೆ.
ಮನೆಯಲ್ಲಿ ಈ ವಿಚಾರ ಗೊತ್ತಾಗಿ ಬಾಲಕನ ಪೋಷಕರು ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಯಲ್ಲಿ ಇಬ್ಬರು ಬಾಲಕರು ತಮಗೆ ಪರಿಚಯ ಇರುವ ನಾಲ್ಕು ಜನರಿಗೆ ಚಿನ್ನ ಕೊಟ್ಟಿರುವುದಾಗಿ ಹೇಳಿದ್ದಾರೆ. ಪೊಲೀಸರು ಈ ಸದ್ಯ ನಾಲ್ಕು ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಬಾಲಕರ ಮೇಲೂ ಕಾನೂನು ರೀತಿ ಕ್ರಮ ಕೈಗೊಂಡು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ-ಮಗಳ ಜಗಳ: ಚಾಕು ಇರಿತದಲ್ಲಿ ಪುತ್ರಿ ಸಾವು
ಪತ್ನಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್
ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದ ಪತ್ನಿ ಮೇಘಾರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಲಕ್ಕವಳ್ಳಿ ಪೊಲೀಸರು ಬಂಧಿಸಿದ್ದಾರೆ. ಕರಕುಚ್ಚಿ ಗ್ರಾಮದ ಚರಣ್ ಬಂಧಿತ ಆರೋಪಿ. ಕರಕುಚ್ಚಿ ಗ್ರಾಮದ ಮೇಘಾ (20) ಕೊಲೆಯಾದವರು.
ಚರಣ್ ಮತ್ತು ಮೇಘಾ ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಯಾವುದೋ ವಿಚಾರಕ್ಕೆ ಮೇಘಾ ಪತಿಯಿಂದ ದೂರವಾಗಿದ್ದಳು. ತನ್ನಿಂದ ದೂರವಾಗಿದ್ದಕ್ಕೆ ಪತಿ ಚರಣ್ ಪತ್ನಿ ಮೇಘಾರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಪೊಲೀಸರು ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಚರಣ್ ಗ್ರಾಮಕ್ಕೆ ಕರೆತರುವಂತೆ ಊರಿನವರು ಪಟ್ಟು ಹಿಡಿದಿದ್ದು, ಸ್ಥಳದಿಂದ ಶವ ತೆಗೆಯಲು ಬಿಡದೆ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಅಲ್ಲದೆ ತರೀಕೆರೆ ಶಾಸಕ ಶ್ರೀನಿವಾಸ್ ಜೊತೆಯೂ ವಾಗ್ವಾದ ನಡೆಸಿದ್ದರು. ಕೊನೆಗೆ ಪೊಲೀಸರು ಹರ ಸಾಹಸ ಪಟ್ಟು ಶವವನ್ನು ಆಸ್ಪತ್ರೆಗೆ ಶವ ಸಾಗಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ