ಬೆಂಗಳೂರು: ಕಟ್ಟಿದ ಬ್ಯಾನರ್ ತೆರೆವುಗೊಳಿಸುವ ವೇಳೆ ಸರಣಿ ಅಪಘಾತಗಳು ಸಂಭವಿಸಿದ ಘಟನೆ ನಗರದ ಪೀಣ್ಯ ಫ್ಲೈಓವರ್ ಮೇಲೆ ನಡೆದಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ತೆರೆವುಗೊಳಿಸುವ ನಿಟ್ಟಿನಲ್ಲಿ ಹೈವೆ ಪ್ಯಾಟ್ರೋಲ್ ವಾಹನವನ್ನು ಧಿಡೀರನೆ ನಿಲ್ಲಿಸಲಾಗಿದೆ. ಪರಿಣಾಮವಾಗಿ ಹಿಂಬದಿಯಿಂದ ಬರುತ್ತಿದ್ದ ಮೂರು ಕಾರು, ಒಂದು ಗೂಡ್ಸ್ ವಾಹನಗಳು ಪರಸ್ಪರ ಡಿಕ್ಕಿಯಾಗಿವೆ.
ಸೋಮವಾರ ಯಲಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಜನ್ಮ ದಿನದ ಪ್ರಯುಕ್ತ ಪೀಣ್ಯ ಪ್ಲೇವರ್ ಮೇಲೆ ಶುಭಕೋರುವ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್ ಅನ್ನು ತೆರವುಗೊಳಿಸಲು ಹೈವೆ ಪ್ಯಾಟ್ರೋಲ್ ವಾಹನವನ್ನು ಚಾಲಕ ಧಿಡೀರನೆ ನಿಲ್ಲಿಸಿದ್ದಾನೆ. ಈ ವೇಳೆ ಪ್ಯಾಟ್ರೋಲ್ ವಾಹನದ ಹಿಂದಿರುವ ವಾಹನಗಳ ನಡುವೆ ಸರಣಿ ಅಪಘಾತಗಳು ಸಂಭವಿಸಿವೆ. ಘಟನೆಯಲ್ಲಿ ಒಂದು ಗೂಡ್ಸ್ ವಾಹನ ಹಾಗೂ ಮೂರು ಕಾರುಗಳಿಗೆ ಹಾನಿಯಾಗಿವೆ.
ಮದ್ಯದ ಅಮಲಿನಲ್ಲಿ ದೊಣ್ಣೆಗಳನ್ನು ಹಿಡಿದು ದಾಂದಲೆ
ಬೆಂಗಳೂರು ಗ್ರಾಮಾಂತರ: ಮದ್ಯದ ಅಮಲಿನಲ್ಲಿ ಕೂಲಿ ಕಾರ್ಮಿಕರು ದೊಣ್ಣೆಗಳನ್ನು ಹಿಡಿದುಕೊಂಡು ದಾಂದಲೆ ನಡೆಸಿ ಸ್ಥಳೀಯರಲ್ಲಿ ಆತಂಕ ಮೂಡಿದ ಘಟನೆ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆಗೇಟ್ ಬಳಿ 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಮದ್ಯ ಸೇವನೆ ಮಾಡಿ ದೊಣ್ಣೆಗಳಿಂದ ಹಿಡಿದುಕೊಂಡು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇವರನ್ನು ಬಿಡಿಸಲು ಹೋದ ಸ್ಥಳಿಯರ ಮೇಲೆ ಕಾರ್ಮಿಕರು ದಾಂದಲೆ ನಡೆಸಿ ಅಟ್ಟಹಾಸ ಮೆರೆದಿದ್ದು, ವೈನ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಸೂಪರ್ ವೈಸರ್ಗಳ ಮೇಲೂ ಹಲ್ಲೆ ನಡೆಸಲಾಗಿದೆ. ಪರಿಣಾಮವಾಗಿ ಇಬ್ಬರು ಸೂಪರ್ ವೈಸರ್ಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಲಿ ಕಾರ್ಮಿಕರ ಈ ಕಿತ್ತಾಟದ ದೃಶ್ಯಾವಳಿಗಳನ್ನು ಮೊಬೈಲ್ ಕ್ಯಾಮಾರದಲ್ಲಿ ಸೆರೆಹಿಡಿಯಲಾಗಿದೆ.
ಶಾಲೆಯಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಸಾವು
ರಾಯಚೂರು: ಶಾಲೆಯಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ 8ನೇ ತರಗತಿ ಓದುತ್ತಿದ್ದ ಮಲ್ಲಿಕಾರ್ಜುನ ಸಾವನ್ನಪ್ಪಿದ ವಿದ್ಯಾರ್ಥಿ. ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದ ವೇಳೆ ಚೆಂಡು ನಿರ್ಮಾಣ ಹಂತದ ಬಿಸಿಯೂಟ ಕೋಣೆಯ ಟೆರೇಸ್ ಮೇಲೆ ಬಿದ್ದಿದೆ. ಇದನ್ನು ಹೆಕ್ಕಿ ತರಲು ಮಲ್ಲಿಕಾರ್ಜುನ ಮೇಲೆ ಹೋಗಿದ್ದಾನೆ. ಈ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.